ಖೋಟಾ ನೋಟು ಮುದ್ರಣ ಜಾಲ ಬಯಲು

 ಖೋಟಾ ನೋಟಿನ ಮುದ್ರಣಕ್ಕೆ ಬಳಸಾದ ಬಾಡಿಗೆ ಮನೆಯ ಕಟ್ಟಡ, ಆರೋಪಿಗಳು.
ಖೋಟಾ ನೋಟಿನ ಮುದ್ರಣಕ್ಕೆ ಬಳಸಾದ ಬಾಡಿಗೆ ಮನೆಯ ಕಟ್ಟಡ, ಆರೋಪಿಗಳು.
Published on
ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ(ದ.ಕ.)
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಣಿಯೂರು ಗ್ರಾಮದ ಅಡೆಂಜ ಎಂಬಲ್ಲಿ ಖೋಟಾ ನೋಟು ಮುದ್ರಣ ಘಟಕಕ್ಕೆ ಬುಧವಾರ ರಾತ್ರಿ ದಾಳಿ ನಡೆಸಿದ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ನೋಟು ಮುದ್ರಣಕ್ಕೆ ಬಳಸಲಾದ ಯಂತ್ರೋಪಕರಣ ವಶಪಡಿಸಿಕೊಳ್ಳಲಾಗಿದೆ.
ದ.ಕ. ಜಿಲ್ಲೆ ಪುತ್ತೂರು ತಾಲೂಕು ಬಪ್ಪಳಿಗೆ ನಿವಾಸಿ ಇಬ್ರಾಹಿಂ(60), ಒಳಮೊಗ್ರು ಗ್ರಾಮದ ಕುಂಬ್ರದ ಸಲ್ಮಾನ್ ಫಾರೀಸ್(25), ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ನಿನ್ನಿಕಲ್ಲು ನಿವಾಸಿ ಸಿರಾಜ್ ಆಲಿಯಾಸ್ ಸಿರಾಜುದ್ದೀನ್(34), ಪುತ್ತಿಲ ಗ್ರಾಮದ ನಿವಾಸಿ ಇರ್ಷಾದ್(31), ಕಾಸರಗೋಡು ಜಿಲ್ಲೆ ಪಾಂಡಿ ಚಂಗುಲ ಗ್ರಾಮದ ಚೆನ್ನಡ್ಕ ನಿವಾಸಿ ಶರೀಫ(51), ಆಮೂರು ಗ್ರಾಮದ ಪೋರ್ಕಡ ನಿವಾಸಿ ಮಹಮ್ಮದ್ ನಬಾಸ್(37), ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕು ಮರಕವಾಡ ಗ್ರಾಮದ ನಿವಾಸಿ ಸಂದೀಪ ಪುಂಡಲಿಕ ಶೋಳಂಬಿ(30) ಬಂಧಿತರು.

ಪೊಲೀಸರ ಜಂಟಿ ಕಾರ್ಯಾಚರಣೆ

ಮಹಮ್ಮದ್ ಇದ್ರೀಸ್ ಎಂಬುವರ ಒಡೆತನದ ನೂತನ ವಸತಿ ಸಂಕೀರ್ಣದಲ್ಲಿ ಇಲೆಕ್ಟ್ರಾನಿಕ್ ಉಪಕರಣ ಬಳಸಿಕೊಂಡು ಭಾರತೀಯ ನಕಲಿ ಕರೆನ್ಸಿ ನೋಟುಗಳನ್ನು ಮುದ್ರಿಸಿ ಮಾರುಕಟ್ಟೆಗೆ ಚಲಾವಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಬಿಂದುಮಣಿ ಆರ್.ಎನ್. ನಿರ್ದೇಶನದಂತೆ ಕೊಡಗು ಜಿಲ್ಲಾ ಪೊಲೀಸ್ ಸಿಬ್ಬಂದಿ ಯೋಗೀಶ್ ಬಿ., ನಿರಂಜನ್ ತಂಡ ದ.ಕ. ಜಿಲ್ಲಾ ವಿಶೇಷ ಘಟಕದ ಪೊಲೀಸ್ ನಿರೀಕ್ಷಕ ನಂದಕುಮಾರ್, ಎಎಸ್‌ಐ ದೀಪಕ್, ಸಿಬ್ಬಂದಿ ಸತೀಶ್ ಹಾಗೂ ರೌಫ್ ತಂಡ ಉಪ್ಪಿನಂಗಡಿ ಠಾಣಾ ಎಸ್‌ಐ ಸುತೇಶ್ ಕೆ.ಪಿ., ಎಎಸ್‌ಐ ದಾಮೋದರ ನಾಯ್ಕ, ಸಿಬ್ಬಂದಿ ನಂಜುಡಯ್ಯ, ಗಜೇಂದ್ರ ನಾಯ್ಕ, ಚರಣ್ ಕಾರ್ಯಾಚರಣೆ ತಂಡದಲ್ಲಿದ್ದರು.


ಉಪಕರಣ ವಶ

ಕಾರ್ಯಾಚರಣೆ ವೇಳೆ 500 ರೂ. ನೋಟು, 500 ರೂ. ನೋಟುಗಳನ್ನು ಮುದ್ರಿಸಿದ ಎ4 ಹಾಳೆಗಳು, ಕಂಪ್ಯೂಟರ್, ಕಲರ್ ಜೆರಾಕ್ಸ್, ಪ್ರಿಂಟರ್, ಸ್ಕಾೃನರ್, ಮಹಾತ್ಮ ಗಾಂಧೀಜಿ ಮುಖಚಹರೆಯ ಸೀಲ್, ಆರ್‌ಬಿಐ ಸೆಕ್ಯೂರಿಟಿ ಥ್ರೆಡ್ ಹೊಂದಿರುವ 5 ಬಾಕ್ಸ್ ಪೇಪರ್, ಆರ್‌ಬಿಐ ಭದ್ರತಾ ದಾರ ಹೋಲುವ ವಿಶೇಷ ಹಸಿರು ಪ್ಲಾಸ್ಟಿಕ್ ರೋಲ್‌ಗಳು ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮುದ್ರಣದ ವೇಳೆ ವ್ಯತ್ಯಾಸವಾದ ಖೋಟಾ ನೋಟುಗಳನ್ನು ಮನೆ ಹಿಂಭಾಗದಲ್ಲಿ ಬೆಂಕಿ ಹಚ್ಚಿ ಸುಟ್ಟಿರುವುದು ಹಾಗೂ ತುಂಡರಿಸಿ ಎಸೆದಿರುವುದು ಕಂಡು ಬಂದಿದೆ. ಆರೋಪಿಗಳು ಬಳಸುತ್ತಿದ್ದ ದ್ವಿಚಕ್ರ ವಾಹನಗಳು ಮನೆ ಸನಿಹ ಪತ್ತೆಯಾಗಿದೆ.

ಬಾಡಿಗೆ ಮನೆಯಲ್ಲಿ ಕೃತ್ಯ

ಕಣಿಯೂರು ಗ್ರಾಮದ ಅಡೆಂಜಲ್ಲಿ ಮುಖ್ಯರಸ್ತೆಯಿಂದ 200 ಮೀ. ದೂರದಲ್ಲಿ ಮಹಮ್ಮದ್ ಇದ್ರೀಸ್ ಇತ್ತೀಚೆಗೆ ನಾಲ್ಕು ಮನೆಗಳುಳ್ಳ ಎರಡು ಅಂತಸ್ತಿನ ಕಟ್ಟಡ ನಿರ್ಮಿಸಿದ್ದರು. ಅದರಲ್ಲಿ ಒಂದು ಮನೆಗೆ ಖೋಟಾ ನೋಟಿನ ತಂಡ ಎರಡು ತಿಂಗಳ ಹಿಂದೆ ಬಂದು ನೆಲೆಸಿತ್ತು. ಹಗಲಿನ ಹೊತ್ತು ಮನೆಯಲ್ಲಿ ಇರದ ಇವರು ರಾತ್ರಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ನಿರ್ಜನ ಪ್ರದೇಶದಲ್ಲಿ ಮನೆ ಇದ್ದುದರಿಂದ ತಂಡದ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net