ನಾವುಂದ ಕೋಯಾನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಉಚಿತ ಕಣ್ಣಿನ ಚಿಕಿತ್ಸೆ ಹಾಗೂ ಪೊರೆ ಚಿಕಿತ್ಸೆ ಶಿಬಿರ ನಡೆಯಿತು. ಪ್ರಮುಖರಾದ ಕುದ್ರುಕೋಡು ಜಗದೀಶ ಶೆಟ್ಟಿ, ಡಾ.ಪ್ರಾರ್ಥನಾ, ಅಶೋಕ ವಿ.ಆಚಾರ್ಯ ಮೊದಲಾದವರಿದ್ದರು.
ಬೈಂದೂರು: ಕಣ್ಣು ಅತ್ಯಂತ ಅನಿವಾರ್ಯ ಅಂಗವಾಗಿದ್ದು, ತೀರ ಸೂಕ್ಷ್ಮವೂ ಆಗಿದೆ. ಅದರ ರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಉದ್ಯಮಿ, ‘ವಿಜಯರತ್ನ’ ಪ್ರಶಸ್ತಿ ಪುರಸ್ಕೃತ ಕುದ್ರುಕೋಡು ಜಗದೀಶ ಶೆಟ್ಟಿ ಹೇಳಿದರು.
ನಾವುಂದ ಕೋಯಾನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಉಡುಪಿ ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್, ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮರವಂತೆ ಪ್ರಾಥಮಿಕ ಅರೋಗ್ಯ ಕೇಂದ್ರ, ನಾವುಂದ ಲಯನ್ಸ್ ಕ್ಲಬ್, ನಾವುಂದ ಆರೋಗ್ಯ ಕ್ಷೇಮ ಕೇಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಹಬಾಗಿತ್ವದಲ್ಲಿ ನಡೆದ ಕಣ್ಣಿನ ಚಿಕಿತ್ಸೆ ಹಾಗೂ ಪೊರೆ ಚಿಕಿತ್ಸೆ ಶಿಬಿರದಲ್ಲಿ ವಾತನಾಡಿದರು.
ಪ್ರಸಾದ ನೇತ್ರಾಲಯದ ನೇತ್ರತಜ್ಞೆ ಡಾ.ಪ್ರಾರ್ಥನಾ ಶಿಬಿರ ಉದ್ಘಾಟಿಸಿದರು. ಲಯನ್ಸ್ ಅಧ್ಯಕ್ಷ ಅಶೋಕ ವಿ.ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ ನೇತ್ರಾಲಯದ ನೇತ್ರತಜ್ಞ ಡಾ.ನಾಗೇಂದ್ರ ಕಣ್ಣಿನ ಶಸಚಿಕಿತ್ಸೆ ಬಗ್ಗೆ ತಿಳಿಸಿದರು. ಉದಯ ಶೆಟ್ಟಿ ಅರೆಹೊಳೆ ಪ್ರಾಯೋಜಕತ್ವ ವಹಿಸಿದ್ದರು.
ನಾವುಂದ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ನರಸಿಂಹ ದೇವಾಡಿಗ, ಪ್ರಾಥಮಿಕ ಆರೋಗ್ಯ ಕೇಂದ್ರದ ಜನಸಂಪರ್ಕ ಅಧಿಕಾರಿ ಹುಲಿಯಪ್ಪ ಗೌಡ, ಲಯನ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ಭಾಸ್ಕರ ಶೆಟ್ಟಿ, ಅರೆಹೊಳೆ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಮೊಕ್ತೇಸರ ನಾಗೇಶ ಶ್ಯಾನಭೋಗ ಮೊದಲಾದವರಿದ್ದರು. ಲಯನ್ಸ್ ಕಾರ್ಯದರ್ಶಿ ಇಲಿಯಾಸ್ ಸ್ವಾಗತಿಸಿದರು. ಖಜಾಂಚಿ ರಾಜು ಬಿ.ದೇವಾಡಿಗ ವಂದಿಸಿದರು.