ಇಮ್ಮಡಿ ಹರಿಹರ ಕಾಲದ ಶಿಲಾಶಾಸನ ಪತ್ತೆ

 ಬಿಜೂರು ಗ್ರಾಮದ ನುಗ್ಗಿಬೆಟ್ಟಿನ ಕಲ್ಸಂಕದ ಗದ್ದೆಯಲ್ಲಿ ಪತ್ತೆಯಾಗಿರುವ ಶಿಲಾ ಶಾಸನ ಜತೆಗೆ ಕ್ಷೇತ್ರ ಕಾರ್ಯ ನಡೆಸಿದ ವಿದ್ಯಾರ್ಥಿಗಳು.
ಬಿಜೂರು ಗ್ರಾಮದ ನುಗ್ಗಿಬೆಟ್ಟಿನ ಕಲ್ಸಂಕದ ಗದ್ದೆಯಲ್ಲಿ ಪತ್ತೆಯಾಗಿರುವ ಶಿಲಾ ಶಾಸನ ಜತೆಗೆ ಕ್ಷೇತ್ರ ಕಾರ್ಯ ನಡೆಸಿದ ವಿದ್ಯಾರ್ಥಿಗಳು.
Published on

ಕುಂದಾಪುರ: ಬೈಂದೂರು ತಾಲೂಕಿನ ಬಿಜೂರು ಗ್ರಾಮದ ನುಗ್ಗಿಬೆಟ್ಟಿನ ಕಲ್ಸಂಕದ ಲಕ್ಷ್ಮೀ ಕೊಠಾರ್ತಿ ಎಂಬುವರ ಗದ್ದೆಯಲ್ಲಿ ಶಿಲಾಶಾಸನ ಪತ್ತೆಯಾಗಿದೆ.

ಕುಂದಾಪುರ ತಾಲೂಕಿನ ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇತಿಹಾಸ ವಿಭಾಗ ಮುಖ್ಯಸ್ಥೆ ವೈಶಾಲಿ ಜಿ.ಆರ್. ಮಾರ್ಗದರ್ಶನದಲ್ಲಿ ನೀಡಲಾದ ಯೋಜನಾ ಕಾರ್ಯದಡಿ ಪ್ರಥಮ ಬಿ.ಎ ವಿದ್ಯಾರ್ಥಿನಿ ಐಶ್ವರ್ಯಾ ದೇವಾಡಿಗ ಈ ಶಾಸನ ಗುರುತಿಸಿ ದಾಖಲಿಸಿದ್ದಾರೆ.

ಶಾಸನದಲ್ಲಿ ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿವಾಹನ ಶಕವರ್ಷ 1307ನೇ ಕ್ರೋಧನ ಸಂವತ್ಸರದ ಕಾರ್ತಿಕ ಬಹುಳ 10 ಆದಿವಾರ ಎಂಬ ಕಾಲಮಾನದ ಉಲ್ಲೇಖವಿದ್ದು, ಇದು ಸಾಮಾನ್ಯ ವರ್ಷ 1385ರ ನ.17 ಭಾನುವಾರಕ್ಕೆ ಸರಿಹೊಂದುತ್ತದೆ. ಈ ಕಾಲಘಟ್ಟದಲ್ಲಿ ವಿಜಯನಗರದ ಸಿಂಹಾಸನದಲ್ಲಿ ಸಂಗಮ ಮನೆತನದ ಇಮ್ಮಡಿ ಹರಿಹರ ರಾಜ್ಯಭಾರ ಮಾಡುತ್ತಿರುವಾಗ, ಬಾರಕೂರು ರಾಜ್ಯವನ್ನು ಮಲ್ಲಪ್ಪ ಒಡೆಯ ಆಳ್ವಿಕೆ ಮಾಡುತ್ತಿದ್ದ ಎಂಬ ಐತಿಹಾಸಿಕ ಮಾಹಿತಿಯನ್ನು ಈ ಶಾಸನ ದಾಖಲಿಸುತ್ತದೆ.
ಶಾಸನದಲ್ಲಿ ಭೂಮಿಯ ಚತುಸ್ಸೀಮೆಯ ಉಲ್ಲೇಖ ಕಂಡುಬಂದಿರುವುದರಿಂದ ಇದೊಂದು ದಾನ ಶಾಸನವೆಂದು ದೃಢಪಡುತ್ತದೆ. ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ ಹಾಗೂ ಇಕ್ಕೆಲಗಳಲ್ಲಿ ಎರಡು ವೃಷಭಗಳ ಉಬ್ಬುಶಿಲ್ಪದ ಕೆತ್ತನೆಗಳಿವೆ. ಉಳಿದ ಸಾಲುಗಳು ಗದ್ದೆಯಲ್ಲಿ ಹುದುಗಿರುವುದರಿಂದ ಮುಂದಿನ ದಿನಗಳಲ್ಲಿ ಈ ಶಾಸನದ ಹೆಚ್ಚಿನ ಅಧ್ಯಯನ ಕೈಗೊಳ್ಳಲಾಗುವುದು ಎಂದು ವೈಶಾಲಿ ಜಿ.ಆರ್. ತಿಳಿಸಿದ್ದಾರೆ.
ಈ ಶಾಸನದ ಕ್ಷೇತ್ರಕಾರ್ಯ ಪ್ರಾತ್ಯಕ್ಷಿಕೆಯಲ್ಲಿ ಕೋಟೇಶ್ವರ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಭಾಗೀರಥಿ ನಾಯ್ಕ, ಎನ್ನೆಸ್ಸೆಸ್ ಮತ್ತು ಇತಿಹಾಸ ವಿಭಾಗದ ಪ್ರಥಮ ಬಿ.ಎ. ವಿದ್ಯಾರ್ಥಿಗಳು ಹಾಗೂ ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥೆ ಮಮತಾ ಪೂಜಾರಿ,ಎನ್ನೆಸ್ಸೆಸ್ ಮತ್ತು ಇತಿಹಾಸ ವಿಭಾಗದ ಪ್ರಥಮ ಮತ್ತು ದ್ವಿತೀಯ ಬಿ.ಎ. ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ.

ಹರ್ಷಚರಿತದಲ್ಲಿ ಉಲ್ಲೇಖಿತ ಪ್ರಾರ್ಥನಾ ಶ್ಲೋಕ

ಬಾಣಭಟ್ಟನ ಹರ್ಷಚರಿತದಲ್ಲಿ ಉಲ್ಲೇಖಿತವಾದ ‘ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ ತ್ರೈಲೋಕ್ಯ ನಗರಾರಂಭ ಮೂಲಸ್ಥಂಭಾಯ ಶಂಭವೇ॥ಎಂಬ ಶೈವ ಪ್ರಾರ್ಥನಾ ಶ್ಲೋಕದೊಂದಿಗೆ ಈ ಶಿಲಾಶಾಸನದ ಬರಹ ಆರಂಭವಾಗುತ್ತದೆ. ಕನ್ನಡ ಭಾಷೆ ಮತ್ತು ಲಿಪಿಯಲ್ಲಿ ರಚಿತವಾಗಿರುವ ಈ ಶಿಲಾಶಾಸನ ಪ್ರಸ್ತುತ ಭೂಮಿಯಿಂದ 3 ಅಡಿ ಎತ್ತರ ಹಾಗೂ 2.25 ಅಡಿ ಅಗಲವಾಗಿದೆ. ಇದರಲ್ಲಿ 19 ಸಾಲುಗಳು ಕಂಡುಬಂದಿದ್ದು, ಉಳಿದ ಸಾಲುಗಳು ಭೂಮಿಯಲ್ಲಿ ಹುದುಗಿಹೋಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net