ಸಾಂಕ್ರಾಮಿಕ ರೋಗ ಭೀತಿ

 ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಗ್ರಹವಾಗಿರುವ ಬಹುಮಹಡಿ ಕಟ್ಟಡದ ಕೊಳಚೆ ನೀರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಗ್ರಹವಾಗಿರುವ ಬಹುಮಹಡಿ ಕಟ್ಟಡದ ಕೊಳಚೆ ನೀರು.
Published on
ವಿಜಯವಾಣಿ ಸುದ್ದಿಜಾಲ ಹಳೆಯಂಗಡಿ
ರಾಷ್ಟ್ರೀಯ ಹೆದ್ದಾರಿ ಬದಿಯ ಬಹುಮಹಡಿ ಕಟ್ಟಡವೊಂದರಿಂದ ಹರಿಯುತ್ತಿರುವ ತ್ಯಾಜ್ಯ ನೀರು ಹಳೆಯಂಗಡಿ ಪರಿಸರದ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ದುರ್ವಾಸನೆ ಹಾಗೂ ಮಲಿನಗೊಂಡ ನೀರಿನಿಂದಾಗಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕುವಂತಾಗಿದೆ.
ಹಳೆಯಂಗಡಿ ಜಂಕ್ಷನ್ ಬಳಿ ಕಾರ್ಯಾಚರಿಸುತ್ತಿರುವ ಈ ಕಟ್ಟಡದ ತ್ಯಾಜ್ಯ ನೀರು ನೇಕಾರ ಮಹಲ್ ಬಳಿಯ ತೆರೆದ ಚರಂಡಿಯಲ್ಲಿ ಹರಿಯುತ್ತಿದ್ದು, ಇದರಿಂದ ಪರಿಸರದ ಅಂಗಡಿ ಮಾಲೀಕರು ಮತ್ತು ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ. ಈ ಕೊಳಚೆ ನೀರು ಹರಿದು ಬಂದು ಸ್ಥಳೀಯ ಬಾವಿಗಳ ನೀರು ಕೂಡ ಮಲಿನಗೊಂಡಿದೆ. ಇದರಿಂದ ಆಕ್ರೋಶಗೊಂಡ ನಾಗರಿಕರು ಈ ಹಿಂದೆ ಚರಂಡಿಗೆ ಮಣ್ಣು ಹಾಕಿ ಮುಚ್ಚಿದ್ದರು. ಆದರೆ ಈಗ ಮಲಿನ ನೀರು ನೇರವಾಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಹರಿಯುತ್ತಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಗಲೀಜು ನೀರಿನಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಸ್ಥಳೀಯರಿಂದ ಆಕ್ರೋಶ

ಹಲವಾರು ವರ್ಷಗಳಿಂದ ಈ ಸಮಸ್ಯೆ ಎದುರಾಗಿದ್ದು, ಈ ಹಿಂದೆ ಹಳೆಯಂಗಡಿ ಗ್ರಾಮ ಪಂಚಾಯಿತಿ ಹಾಗೂ ಶಾಸಕರ ಮಧ್ಯಸ್ಥಿಕೆಯಲ್ಲಿ ತ್ಯಾಜ್ಯ ನೀರನ್ನು ವಾಹನಗಳ ಮೂಲಕ ತುಂಬಿಸಿ ವಿಲೇವಾರಿ ಮಾಡುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಾಲೀಕರು ಈ ನಿಯಮವನ್ನು ಗಾಳಿಗೆ ತೂರಿ ಸಮರ್ಪಕವಾಗಿ ವಿಲೇವಾರಿ ಮಾಡದಿರುವುದು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಕೂಡಲೇ ಕಟ್ಟಡದ ಮಾಲೀಕರು ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ, ಸಾರ್ವಜನಿಕರೊಂದಿಗೆ ಸೇರಿ ಕಟ್ಟಡದ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net