ಉತ್ತರದ ಗುಜರಾತಿನ ತಾಪಿಯಿಂದ ದಕ್ಷಿಣದ ಕನ್ಯಾಕುಮಾರಿವರೆಗೆ ಹರಡಿರುವ ಪಶ್ಚಿಮ ಘಟ್ಟಗಳಲ್ಲಿ 59ಕ್ಕೂ ಹೆಚ್ಚಿನ ಅಪರೂಪದ ಪ್ರಾಣಿ ಹಾಗೂ ಸಸ್ಯ ಪ್ರಭೇದಗಳು ವಿನಾಶದ ಅಂಚಿನಲ್ಲಿವೆ. ಇಡೀ ಜಗತ್ತಿನಲ್ಲಿ ಉತ್ತರಕನ್ನಡದ ಶರಾವತಿ ನದಿ ಪಾತ್ರದಲ್ಲಿ ಮಾತ್ರ ಸಿಂಗಳೀಕ ಇನ್ನೂ ಉಳಿದಿದೆ. 1972ರಲ್ಲಿ ಜಾರಿಗೆ ಬಂದಿರುವ ವನ್ಯಜಿವಿ ರಕ್ಷಣಾ ಕಾಯಿದೆ ಪ್ರಕಾರ ಈ ಪ್ರದೇಶದಲ್ಲಿ ಯಾವುದೇ ಮಾನವ ನಿರ್ಮಿತ ಕಟ್ಟಡ ರಚನಾ ಕಾರ್ಯನಡೆಸುವಂತಿಲ್ಲ. ಆದರೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಕಾಂಕ್ರೀಟ್ ಸ್ಥಾವರವು ಮೂರು ಫೂಟ್ಬಾಲ್ ಸ್ಟೇಡಿಯಂನಷ್ಟು ಉದ್ದ, 18 ಮಳಿಗೆ ಕಟ್ಟಡದಷ್ಟು ಎತ್ತರವಾಗಿದೆ ಎಂದು ಸರ್ಕಾರಕ್ಕೆ ಸಲ್ಲಿಸಿರುವ ಯೋಜನಾ ವರದಿಯಲ್ಲಿ ತಿಳಿಸಲಾಗಿದೆ. ಇಷ್ಟು ಬೃಹತ್ ಭೂಗತ ಕಟ್ಟಡಗಳಿಗೆ ಭೂಮಿ ಕೊರೆಯುವುದರಿಂದ ಮುಂದಿನ ದಿನಗಳಲ್ಲಿ ನಿರಂತರ ಭೂ ಕುಸಿತ ಉಂಟಾಗಿ ಜನಜೀವನವೇ ಅಸ್ತವ್ಯಸ್ತವಾಗಲಿದೆ. ಜಗತ್ತಿನ 22 ಪರಿಸರ ಸೂಕ್ಮಪ್ರದೇಶದಲ್ಲಿ ಒಂದೆನಿಸಿರುವ ಈ ತಾಣದಲ್ಲಿ ಅಗತ್ಯವೇ ಎಂದು ಪ್ರಶ್ನಿಸಿದರು.