

ವಿಜಯವಾಣಿ ಸುದ್ದಿಜಾಲ ಬೈಂದೂರು
ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡದೆ, ಪ್ರಚಾರ ಮಾಡದೆ ಈ ರೀತಿಯ ಕಾಟಾಚಾರದ ಕಾರ್ಯಕ್ರಮ ಏಕೆ ಮಾಡಬೇಕು? ತಾಲೂಕು ಕೇಂದ್ರದಲ್ಲಿ ಸಣ್ಣ ಪುಟ್ಟ ಕೆಲಸಕ್ಕೂ ಜನಸಾಮಾನ್ಯರು ಅಲೆಯಬಾರದು, ಗ್ರಾಮಮಟ್ಟದಲ್ಲಿ ಎಲ್ಲ ಅಧಿಕಾರಿಗಳು ಜನರ ಸೇವೆಗೆ ದೊರೆಯಬೇಕು ಎನ್ನುವುದು ಪ್ರಜಾಸೇವೆಯ ಮೂಲ ಉದ್ದೇಶವಾಗಿದ್ದರೂ ಸಭೆಯಲ್ಲಿ ಅಧಿಕಾರಿಗಳು ಹೊರತುಪಡಿಸಿದರೆ ಸಾರ್ವಜನಿಕರು ಆಗಮಿಸಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಶಿರೂರು ಕರಿಕಟ್ಟೆಯಲ್ಲಿ ಪ್ರಜಾಸೇವೆ ಇಲಾಖೆ ತಾಲೂಕು ಆಡಳಿತ ಬೈಂದೂರು, ಶಿರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಜಾಸೇವಾ ಆಂದೋಲನ ಸಭೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 79 ಅರ್ಜಿಗಳು ಬಂದಿದ್ದು, ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಇಲಾಖೆಯಲ್ಲಿ ದಲ್ಲಾಳಿಗಳ ಹಾವಳಿ ಅಧಿಕವಾಗುತ್ತಿದೆ. ಕಚೇರಿಯಲ್ಲಿ ಲಂಚ ನೀಡಿದರೆ ಮಾತ್ರ ಕೆಲಸವಾಗುತ್ತದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಕೇಳಿಬಂದಿದೆ. ಇದು ಕಂದಾಯ ಇಲಾಖೆ ವೈಫಲ್ಯಕ್ಕೆ ಕಾರಣ. ಸ್ವತಃ ಶಾಸಕರು ಕರೆ ಮಾಡಿ ತಿಳಿಸಿದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸದಿರುವುದು ಇಲಾಖೆ ಬೇಜವಾಬ್ದಾರಿ ಬಿಂಬಿಸುತ್ತದೆ. ಈ ಕುರಿತು ದೂರುಗಳು ಬಂದಿದೆ ಮತ್ತು ಇದರ ಸಮಗ್ರ ತನಿಖೆಗೆ ನಿರ್ದೇಶನ ನೀಡಿದ್ದೇನೆ ಎಂದು ಶಾಸಕರು ತಿಳಿಸಿದರು.
ಶಿರೂರು ಹಾಗೂ ವಿವಿಧ ಕಡೆಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಅಧಿಕವಾಗಿದ್ದು, ಅರಣ್ಯ ಇಲಾಖೆ ಅವುಗಳ ನಿಯಂತ್ರಣದ ಬಗ್ಗೆ ಕ್ರಮ ಕೈಗೊಳ್ಳುವಂತೆ, ಕಡತಗಳು ಸಮರ್ಪಕವಾಗಿದ್ದರೆ 94ಸಿ ಅರ್ಜಿಗಳನ್ನು ತಕ್ಷಣ ವಿತರಿಸುವಂತೆ ಶಾಸಕರು ತಿಳಿಸಿದರು. ಆಲಂದೂರು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮಕೈಗೊಳ್ಳುವಂತೆ ಪಪಂ ಅಧಿಕಾರಿಗೆ ಸೂಚಿಸಿದರು.
ಬೈಂದೂರು ಗ್ರೇಡ್-1 ತಹಸೀಲ್ದಾರ್ ರವಿರಾಜ್ ದೀಕ್ಷಿತ್, ಗ್ರೇಡ್-2 ತಹಸೀಲ್ದಾರ್ ಎಚ್.ರಾಮಚಂದ್ರಪ್ಪ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗಶಯನ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಮೋಹನ ಪೂಜಾರಿ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ, ಶಿರೂರು ಗ್ರಾಪಂ ಆಡಳಿತಾಧಿಕಾರಿ ಚಂದ್ರಹಾಸ ಮಾಯಾಗೌಡ, ಭೂನ್ಯಾಯ ಮಂಡಳಿ ಸದಸ್ಯ ಉದಯ ಪೂಜಾರಿ, ಪ್ರಭಾರ ವೃತ್ತ ನಿರೀಕ್ಷಕ ಜಯರಾಮ ಗೌಡ ಮತ್ತಿತರರು ಉಪಸ್ಥಿತರಿದ್ದರು. ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಕೆ. ನಾಯ್ಕ ಸ್ವಾಗತಿಸಿದರು. ಶಿಕ್ಷಕ ಸಿ.ಎನ್.ಬಿಲ್ಲವ ಕಾರ್ಯಕ್ರಮ ನಿರ್ವಹಿಸಿದರು.
ಶಿರೂರಿನಲ್ಲಿ ವಿದ್ಯಾರ್ಥಿನಿಯರಿಗೆ ಸರ್ಕಾರಿ ಬಸ್ಗಳಲ್ಲಿ ಕಿರುಕುಳ ಆಗುತ್ತಿದೆ ಎಂಬ ದೂರು ಬಂದಿದೆ. ವಿದ್ಯಾರ್ಥಿಗಳಿಗೆ ನಿಗದಿತ ಸ್ಥಳಗಳಲ್ಲಿ ಬಸ್ ನಿಲುಗಡೆ ಮಾಡಬೇಕು ಮತ್ತು ಸಮರ್ಪಕ ಸೇವೆ ನೀಡಬೇಕೆಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಅರಣ್ಯ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವಿಷಯದ ಕುರಿತು ಅರ್ಜಿ ಬಂದಿದ್ದು, ಅವುಗಳಿಗೆ ಶೀಘ್ರ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಅರ್ಹ ಫಲಾನುಭವಿಗಳಿಗೆ ಪಶು ಆಹಾರದ ಮೇವಿನ ಬೀಜ ವಿತರಿಸಲಾಯಿತು.