

ಉಡುಪಿ: ಕ್ರೀಡೆಯಲ್ಲಿ ಪರಿಣಿತಿ ಹೊಂದಿರುವ ಮಕ್ಕಳು ಶಿಕ್ಷಣದಲ್ಲೂ ಪರಿಣಿತರಾಗಿರುತ್ತಾರೆ. ಅಲ್ಲದೆ, ಬದುಕಿನಲ್ಲೂ ಯಶಸ್ಸು ಕಾಣುತ್ತಾರೆ. ವಿದ್ಯಾರ್ಥಿಗಳು ಭಾರತದ ಶಕ್ತಿಯಾಗಿದ್ದು, ಕ್ರೀಡೆಯಲ್ಲಿ ಸಾಧನೆಯ ಮೂಲಕ ರಾಷ್ಟ್ರದ ಕೀರ್ತಿ ಹೆಚ್ಚಿಸಿ. ಉಡುಪಿ ಜಿಲ್ಲೆ ಕ್ರೀಡಾ ಕ್ಷೇತ್ರದಲ್ಲೂ ಉನ್ನತ ಸಾಧನೆ ಮಾಡುವಂತಾಗಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಅಜ್ಜರಕಾಡಿನಲ್ಲಿರುವ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ (ರಿ.) ವತಿಯಿಂದ ನಾಡೋಜ ಡಾ. ಜಿ.ಶಂಕರ್ ವೇದಿಕೆಯಲ್ಲಿ ಶನಿವಾರ (ಅ.10) ಆಯೋಜಿಸಿದ್ದ 18 ವರ್ಷದೊಳಗಿನ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ವಾಲಿಬಾಲ್ ಚಾಂಪಿಯನ್ಶಿಪ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಂದ್ಯಾಟ ಯಶ ಕಾಣಲಿ
ಕ್ರೀಡಾಕೂಟ ಉದ್ಘಾಟಿಸಿದ ನಾಡೋಜ ಡಾ. ಜಿ.ಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ವಾಲಿಬಾಲ್ ಅಸೋಸಿಯೇಷನ್ ಇರಲಿಲ್ಲ. ಯಶವಂತ್ ಸುವರ್ಣ ನೇತೃತ್ವದಲ್ಲಿ ಆರಂಭಗೊಂಡ ಈ ಪಂದ್ಯಾಟ ಯಶ ಕಾಣಲಿ. ರಾಷ್ಟ್ರಮಟ್ಟದಲ್ಲಿ ಉಡುಪಿ ಜಿಲ್ಲೆಯ ಕ್ರೀಡಾಪಟುಗಳು ಬೆಳಗಲಿ ಎಂದು ಹಾರೈಸಿದರು.
ಸಾಧನೆಗೆ ವೇದಿಕೆಯಾಗಲಿ
ಕಾರ್ಕಳ ಶಾಸಕ ವಿ.ಸುನೀಲಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ವಾಲಿಬಾಲ್ ಕ್ರೀಡಾಪಟುಗಳಿಗೆ ಸೂಕ್ತ ಪ್ರೋತ್ಸಾಹ ಲಭಿಸುತ್ತಿರಲಿಲ್ಲ. ಇದೀಗ ವೇದಿಕೆ ಪುನ: ತೆರೆದುಕೊಂಡಿದೆ. ಇಲ್ಲಿನ ಕ್ರೀಡಾಪಟುಗಳಿಗೆ ಸಾಧನೆ ಮಾಡಲು ಇಂತಹ ಕ್ರೀಡಾಕೂಟ ವೇದಿಕೆಯಾಗಲಿದೆ ಎಂದರು.
ಜಿಪಂ ಸಿಇಒ ಪ್ರತೀಕ್ ಬಾಯಲ್ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಚಂದ್ರಶೇಖರ್ ಹೆಗ್ಡೆ, ಆನಂದ್ ಪಿ. ಸುವರ್ಣ, ಸಂಜೀವ್ ಶೆಟ್ಟಿ, ಅವಿನಾಶ್ ಶೆಟ್ಟಿ, ಶುಭಲಕ್ಷೀ ಹರೀಶ್ ನಾಯಕ್, ಉದಯಕುಮಾರ್ ಶೆಟ್ಟಿ ಕಿದಿಯೂರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಯಶವಂತ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯಶ್ಪಾಲ್ ಸುವರ್ಣ ಕ್ರೀಡಾಪಟುಗಳ ಜೆರ್ಸಿ ಬಿಡುಗಡೆ ಮಾಡಿ, ವಾಲಿಬಾಲ್ ಸರ್ವೀಸ್ ಮಾಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು.
ವಾಲಿಬಾಲ್ ತರಬೇತುದಾರ ಸಂತೋಷ್ ಡಿಸೋಜಾ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಾಲಿಬಾಲ್ ಕ್ರೀಡಾಪಟು ನೈಜಾ ಆರ್. ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಸಂಧ್ಯಾ ಹೆಗ್ಡೆ ಪ್ರಾರ್ಥಿಸಿದರು. ಅಸೋಸಿಯೇಷನ್ನ ಕಾರ್ಯದರ್ಶಿ ಮಂಜುನಾಥ್ ಪಾಟ್ಕರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾಕೂಟದಲ್ಲಿ ಜಿಲ್ಲೆಯ 45 ತಂಡಗಳು ಭಾಗವಹಿಸಿದ್ದವು.