ಕಡಬ: ಸುಬ್ರಹ್ಮಣ್ಯ ಸಮುದಾಯ ಆರೋಗ್ಯ ಕೇಂದ್ರಕ್ಕೆ 4.50 ಎಕರೆ ಭೂಮಿಯಿದ್ದು ಅಳತೆ ಮಾಡುವಾಗ 2.90 ಎಕರೆ ಮಾತ್ರ ಇದೆ. ಉಳಿದ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಎಂದು ಕೆಡಿಪಿ ಸದಸ್ಯ ಶಿವರಾಮ ರೈ ಆರೋಪಿಸಿದರು.
ಕಡಬ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ತಾಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಯಿತು.
ಉತ್ತರಿಸಿದ ಉಪತಹಸೀಲ್ದಾರ್, ಈ ಜಮೀನನ್ನು ಸರ್ಕಾರದ ಸುತ್ತೋಲೆಯಂತೆ ಪೋಡಿ ದುರಸ್ತಿ ನಡೆಸಲಾಗುತ್ತಿದ್ದು, ಬಳಿಕ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ತಕ್ಷಣ ಕ್ರಮವಾಗದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಶಿವರಾಮ ರೈ ಎಚ್ಚರಿಕೆ ನೀಡಿದರು.
ಕಳೆದ ಕೆಡಿಪಿ ಸಭೆಯಲ್ಲಿ ನೆಲ್ಯಾಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಜಾಗ ಒತ್ತುವರಿಯಾಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿ ಉತ್ತರಿಸಿದ ಉಪತಹಸೀಲ್ದಾರ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಮನವಿ ಸಲ್ಲಿಸಿದಲ್ಲಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.
ಆಸ್ಪತ್ರೆ ಮೇಲ್ದರ್ಜೆಗೇರುವ ನಿರೀಕ್ಷೆ: ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಂಜುನಾಥ್ ಮಾತನಾಡಿ, ಸಮುದಾಯ ಆಸ್ಪತ್ರೆ ತಾಲೂಕು ಆಸ್ಪತ್ತೆಯಾಗಿ ಮೇಲ್ದರ್ಜೆಗೇರುವ ಬಗ್ಗೆ ರಾಜ್ಯಮಟ್ಟದಲ್ಲಿ ಶಿಫಾರಸು ಮಾಡಲಾಗಿದೆ. ಶೀಘ್ರದಲ್ಲಿ ಬೇಡಿಕೆ ಈಡೇರುವ ನಿರೀಕ್ಷೆ ಇದೆ. ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಕೇಂದ್ರಕ್ಕೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಒತ್ತಡ ಹೆಚ್ಚಾಗಿದೆ. ಹೀಗಾಗಿ ಉಪ್ಪಿನಂಗಡಿ ಸರ್ಕಾರಿ ಆಸ್ಪತೆಯಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆಲಂಕಾರು ಗ್ರಾಮದಲ್ಲಿರುವ ಡಿಸಿ ಮನ್ನಾ ಭೂಮಿಯನ್ನು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಬೇಕೆಂದು ಒಂದು ವರ್ಷದಿಂದ ಆಗ್ರಹಿಸಲಾಗುತ್ತಿದೆ. ಜಂಟಿ ಸರ್ವೇಗೆ ತಕ್ಷಣ ದಿನ ನಿಗದಿ ಮಾಡುವಂತೆ ಕೆಡಿಪಿ ಸದಸ್ಯ ಮೋನಪ್ಪ ವಳಕಡಮ ಆಗ್ರಹಿಸಿದರು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಶಾಸಕಿ ಅಧಿಕಾರಿಗಳಿಗೆ ಸೂಚಿಸಿದರು.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಂದಾಯ, ಅರಣ್ಯ ಇಲಾಖೆ ಜಂಟಿ ಸರ್ವೇಗಳು ಪರವಾನಗಿ ಸರ್ವೇಯರ್‌ಗಳ ಪ್ರತಿಭಟನೆಯಿಂದ ವಿಳಂಬವಾಗುತ್ತಿದೆ. ಈ ಬಗ್ಗೆ ಜನರಿಗೆ ಆಗುವ ಸಮಸ್ಯೆಯ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಬೇಕೆಂದು ಕೆಡಿಪಿ ಸದಸ್ಯರು ಶಾಸರಿಗೆ ಮನವಿ ಮಾಡಿದರು. ಈಗಾಗಲೇ ಕ್ಷೇತ್ರದ ಬಗೆಗಿನ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಿದ್ದೇನೆ. ಕೆಲವೊಂದಕ್ಕೆ ಸಂಬಂಧಪಟ್ಟ ಇಲಾಖೆಯಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದರು.
ಕಡಬ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಕೆಡಿಪಿ ಸದಸ್ಯರಾದ ಗಿರೀಶ್ ಇಚ್ಲಂಪಾಡಿ, ಉಷಾ ಒ.ಕೆ.ನೆಲ್ಯಾಡಿ, ಪದ್ಮನಾಭ ಗೌಡ ಗುಂಡ್ಯ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.
ರಸ್ತೆ ಸಮಸ್ಯೆಯಿಂದ ವಿದ್ಯಾರ್ಥಿಗಳ ದಾಖಲಾತಿ ಇಳಿಕೆ
ಕಡಬದಲ್ಲಿರುವ ಮೌಲಾನಾ ಅಜಾದ್ ಮಾದರಿ ಶಾಲೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಸತಿನಿಲಯದಲ್ಲಿ ಕಾರ್ಯಾಚರಿಸುತ್ತಿದೆ. ಇಲ್ಲಿನ ಸಂಪರ್ಕಕ್ಕೆ ಸುಸಜ್ಜಿತ ರಸ್ತೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳ ದಾಖಲಾತಿ ಮೇಲೆ ಪರಿಣಾಮ ಬೀರುತ್ತಿದೆ. ಸದ್ಯ ರಸ್ತೆಯ ಇಕ್ಕೆಲಗಳಲ್ಲಿ ಪೊದೆ ತುಂಬಿಕೊಂಡಿದ್ದು ತಕ್ಷಣ ತೆರವು ಮಾಡಬೇಕು. ಕಡಬ ಪೇಟೆಯ ಸುತ್ತಮುತ್ತಲಿರುವ ರಸ್ತೆ ಬದಿಗಳ ಅಪಾಯಕಾರಿ ಮರಗಳನ್ನು ತೆರವು ಮಾಡಬೇಕು. ಮೆಸ್ಕಾಂ ಜನಸಂಪರ್ಕ ಸಭೆಗೆ ಕೆಡಿಪಿ ಸದಸ್ಯರನ್ನು ಆಹ್ವಾನಿಸಬೇಕೆಂದು ಕೆಡಿಪಿ ಸದಸ್ಯ ಆಶ್ರಫ್ ಶೇಡಿಗುಂಡಿ ಆಗ್ರಹಿಸಿದರು.
ಕೆಎಸ್‌ಆರ್‌ಟಿಸಿಗೆ ಬದಲಿ ಜಮೀನು
ಕಡಬ ತಾಲೂಕು ಆಡಳಿತ ಕಚೇರಿ ಉಪತಹಸೀಲ್ದಾರ್ ಸಯ್ಯುದುಲ್ ಖಾನ್ ಮಾಹಿತಿ ನೀಡಿ, ಕಡಬದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಗುರುತಿಸಲಾದ ಕೋಡಿಂಬಾಳ ಗ್ರಾಮದ 2.83 ಎಕರೆ ಜಾಗಕ್ಕೆ ಉಚ್ಚ ನ್ಯಾಯಲಯದ ತಡೆಯಾಜ್ಞೆಯಿದೆ. ಅಲ್ಲದೆ ಈ ಜಾಗಕ್ಕೆ ಸಂಪರ್ಕ ರಸ್ತೆ ಕಿರಿದಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವರದಿ ನೀಡಿರುವುದರಿಂದ ಕೋಡಿಂಬಾಳ ಗ್ರಾಮದಲ್ಲಿ 1.10 ಎಕರೆ ಬದಲಿ ಜಮೀನು ಗುರುತಿಸಿ ಪುತ್ತೂರು ಸಹಾಯಕ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಈ ಬಗ್ಗೆ ಚರ್ಚೆ ನಡೆದು ಎರಡು ಜಾಗವನ್ನು ಕೆಎಸ್‌ಆರ್‌ಟಿಸಿಗೆ ಕಾದಿರಿಸುವ ಬಗ್ಗೆ ಪ್ರಯತ್ನಿಸುವುದಾಗಿ ಶಾಸಕಿ ಭಾಗೀರಥಿ ಮುರುಳ್ಯ ತಿಳಿಸಿದರು.