ಬಸ್ ನಿಲ್ದಾಣದಲ್ಲಿ ಸೌಲಭ್ಯಗಳ ಅತಿಕ್ರಮಣ

ಪಾರ್ಕಿಂಗ್ ಜಾಗದಲ್ಲಿ ಕುರ್ಚಿ ಇರಿಸಿರುವುದು.
ಪಾರ್ಕಿಂಗ್ ಜಾಗದಲ್ಲಿ ಕುರ್ಚಿ ಇರಿಸಿರುವುದು.
Published on
ಯಶೋಧರ ವಿ.ಬಂಗೇರ ಮೂಡುಬಿದಿರೆ
ಹಲವು ವರ್ಷಗಳಿಂದ ಮೂಲಸೌಕರ್ಯಗಳ ಕೊರತೆ ಮತ್ತು ಅವ್ಯವಸ್ಥೆಯಿಂದ ನಲುಗುತ್ತಿರುವ ಮೂಡುಬಿದಿರೆ ಖಾಸಗಿ ಬಸ್ ನಿಲ್ದಾಣದಲ್ಲಿ, ಇದೀಗ ಸಾರ್ವಜನಿಕ ಸೌಲಭ್ಯಗಳ ಅತಿಕ್ರಮಣದ ಆರೋಪಗಳು ಕೇಳಿಬಂದಿವೆ.
ಪುರಸಭೆಯ ಅಧೀನದಲ್ಲಿರುವ ಈ ನಿಲ್ದಾಣದ ಬಾಡಿಗೆ ಕಟ್ಟಡದಲ್ಲಿ ಇತ್ತೀಚೆಗೆ ಆರಂಭವಾದ ಹೋಟೆಲ್‌ನ ಕಾಮಗಾರಿ ವೇಳೆ, ಪ್ರಯಾಣಿಕರ ಬಳಕೆಗೆ ಇದ್ದ ಎರಡು ಸಿಮೆಂಟ್ ಬೆಂಚ್‌ಗಳನ್ನು ತೆರವುಗೊಳಿಸಿರುವುದು ಮತ್ತು ಸಾರ್ವಜನಿಕ ವಾಹನ ನಿಲುಗಡೆ ಸ್ಥಳದಲ್ಲಿ ಖಾಸಗಿ ಕುರ್ಚಿಗಳನ್ನು ಇರಿಸಿರುವುದು ಸಾರ್ವಜನಿಕರು ಹಾಗೂ ಇತರ ಬಾಡಿಗೆದಾರರ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಪ್ರಯಾಣಿಕರ ಪರದಾಟ

ಕೆಲವು ತಿಂಗಳ ಹಿಂದೆ ಪುರಸಭೆ ಸಾರ್ವಜನಿಕ ಹರಾಜಿನ ಮೂಲಕ ಹೋಟೆಲ್ ನಡೆಸಲು ಜಾಗವನ್ನು ಬಾಡಿಗೆಗೆ ನೀಡಿತ್ತು. ಹೋಟೆಲ್ ಆರಂಭದ ಸಿದ್ಧತೆ ವೇಳೆ, ನಿಲ್ದಾಣದಲ್ಲಿ ಇದ್ದ ಎರಡು ಕಲ್ಲಿನ ಬೆಂಚ್‌ಗಳನ್ನು ತೆರವುಗೊಳಿಸಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ಈಗಾಗಲೇ ಸೀಮಿತ ಸಂಖ್ಯೆಯ ಆಸನಗಳಿದ್ದು, ಇವುಗಳನ್ನೂ ತೆಗೆದುಹಾಕಿದ್ದರಿಂದ ವೃದ್ಧರು, ಮಹಿಳೆಯರು ಮತ್ತು ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ಬಸ್‌ಗಾಗಿ ನಿಂತುಕೊಂಡೇ ಕಾಯುವ ಅನಿವಾರ್ಯತೆ ಎದುರಾಗಿದೆ.

ಪಾರ್ಕಿಂಗ್ ಸಮಸ್ಯೆ ತೀವ್ರ

ಹೋಟೆಲ್‌ನ ಮುಂಭಾಗದಲ್ಲಿರುವ ಸಾರ್ವಜನಿಕ ವಾಹನ ನಿಲುಗಡೆ ಸ್ಥಳದಲ್ಲಿ ಕುರ್ಚಿಗಳನ್ನು ಇರಿಸಿ, ಗ್ರಾಹಕರ ಅನುಕೂಲಕ್ಕಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದರಿಂದ ವಾಹನ ನಿಲುಗಡೆಗೆ ಜಾಗವಿಲ್ಲದೆ ಇತರ ಬಾಡಿಗೆದಾರರು ಮತ್ತು ಪ್ರಯಾಣಿಕರು ಪರದಾಡುವಂತಾಗಿದೆ. ಬಸ್ ನಿಲ್ದಾಣದ ಜಾಗದಲ್ಲಿ ಖಾಸಗಿ ವಾಹನಗಳ ದಟ್ಟಣೆ ಹೆಚ್ಚಾಗಿದ್ದು, ಬಸ್ ನಿಲ್ಲಬೇಕಾದ ಸ್ಥಳಗಳಲ್ಲೇ ವಾಹನಗಳು ನಿಲ್ಲುತ್ತಿರುವುದರಿಂದ ಪ್ರಯಾಣಿಕರು ಬಸ್ ಏರಲು ಮತ್ತು ಇಳಿಯಲು ಹರಸಾಹಸ ಪಡುವಂತಾಗಿದೆ. ಒಟ್ಟಾರೆ ಸಂಚಾರ ವ್ಯವಸ್ಥೆಯು ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಕಾರ್ಯರೂಪಕ್ಕೆ ಬಂದಿಲ್ಲ ಭರವಸೆ

ಕೆಲವು ತಿಂಗಳ ಹಿಂದೆ ನಡೆದ ಪುರಸಭೆ, ಪೊಲೀಸ್ ಇಲಾಖೆ, ಖಾಸಗಿ ಬಸ್ ಮಾಲೀಕರ ಸಂಘ ಮತ್ತು ಬಾಡಿಗೆದಾರರ ಪ್ರತಿನಿಧಿಗಳ ಸಭೆಯಲ್ಲಿ, ಬಸ್ ನಿಲ್ದಾಣದ ಅತಿಕ್ರಮಣ ತೆರವುಗೊಳಿಸಿ ವಾಹನ ನಿಲುಗಡೆ ವ್ಯವಸ್ಥೆಯನ್ನು ಸುಧಾರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಈ ಭರವಸೆ ಇನ್ನೂ ಕೇವಲ ಮಾತಿಗೆ ಸೀಮಿತವಾಗಿದ್ದು, ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ತಾರತಮ್ಯವಿಲ್ಲದ ಕ್ರಮಕ್ಕೆ ಆಗ್ರಹ

ಇಂದಿರಾ ಗಾಂಧಿ ಕಾಂಪ್ಲೆಕ್ಸ್‌ನಲ್ಲಿ ಹಲವು ವರ್ಷಗಳಿಂದ ನಿಯಮಾನುಸಾರ ವ್ಯಾಪಾರ ನಡೆಸುತ್ತಿರುವ ಇತರ ಬಾಡಿಗೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸ ಹೋಟೆಲ್‌ನಂತೆ ಇತರ ಅಂಗಡಿಗಳ ಮುಂದಿನ ಬೆಂಚ್‌ಗಳನ್ನೂ ತೆರವುಗೊಳಿಸಿದರೆ ಪ್ರಯಾಣಿಕರಿಗೆ ಆಸನದ ವ್ಯವಸ್ಥೆಯೇ ಇಲ್ಲದಂತಾಗುತ್ತದೆ. ಪುರಸಭೆಯು ಎಲ್ಲ ಬಾಡಿಗೆದಾರರನ್ನು ಸಮಾನವಾಗಿ ಕಾಣಬೇಕು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಬಸ್ ನಿಲ್ದಾಣದಲ್ಲಿರುವ ಅತಿಕ್ರಮಣವನ್ನು ತೆರವುಗೊಳಿಸುತ್ತೇವೆ. ತೆರವುಗೊಳಿಸಲಾದ ಕಲ್ಲಿನ ಬೆಂಚ್‌ಗಳನ್ನು ಮರುಸ್ಥಾಪಿಸುವುದರ ಜತೆಗೆ, ಸಾರ್ವಜನಿಕ ಪಾರ್ಕಿಂಗ್ ಸ್ಥಳವನ್ನು ಅದರ ಮೂಲ ಉದ್ದೇಶಕ್ಕಾಗಿ ಮಾತ್ರ ಬಳಸುವಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು.

— ಇಂದು ಎಂ., ಮೂಡುಬಿದಿರೆ ಪುರಸಭೆ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net