ಮಳೆಗೆ ವಾಲಿದ ವಿದ್ಯುತ್ ಕಂಬಗಳು

 ಭಾರಿ ಮಳೆಗೆ ಮಣ್ಣು ಸಡಿಲಗೊಂಡು ವಾಲುತ್ತಿರುವ ವಿದ್ಯುತ್ ಕಂಬಗಳು.
ಭಾರಿ ಮಳೆಗೆ ಮಣ್ಣು ಸಡಿಲಗೊಂಡು ವಾಲುತ್ತಿರುವ ವಿದ್ಯುತ್ ಕಂಬಗಳು.
Published on
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೆಕ್ಕಿಲಾಡಿ ಗ್ರಾಮದ ಕರುವೇಲ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ವಿದ್ಯುತ್ ಉಪ ಕೇಂದ್ರದಿಂದ ಕೊಯಿಲ ವಿದ್ಯುತ್ ಉಪ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಲೈನ್ ಕಾಮಗಾರಿ ಸಲುವಾಗಿ ಹಾಕಲಾಗಿರುವ ವಿದ್ಯುತ್ ಕಂಬಗಳು ಮಳೆಗಾಲದಲ್ಲಿ ನೆಲ ಮೆದುವಾದ ಕಾರಣ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಬುಡಸಡಿಲಗೊಂಡು ಬೀಳುವ ಸ್ಥಿತಿಗೆ ಬಂದಿದ್ದು, ಕಾಮಗಾರಿ ಗುಣಮಟ್ಟದ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಕೊಯಿಲದಲ್ಲಿ 33 ಕೆ.ವಿ. ವಿದ್ಯುತ್ ಉಪ ಕೇಂದ್ರ ನಿರ್ಮಾಣಕ್ಕೆ 13 ಕೋಟಿ ರೂ. ಮಂಜೂರಾಗಿ ಅಲ್ಲಿನ ಕಟ್ಟಡ ಕಾಮಗಾರಿ ಪೂರ್ಣಗೊಂಡು ಅದಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳ ಜೋಡಣೆಯೂ ಆಗಿದೆ. ಇಲ್ಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಲುವಾಗಿ ಕೊಯಿಲ-ಕರುವೇಲ್ ತನಕ ಹೆದ್ದಾರಿ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಹಾಕಲಾಗುತ್ತಿದೆ. ಮೈಸೂರು ಮೂಲದ ಗುತ್ತಿಗೆದಾರರೊಬ್ಬರು ಗುತ್ತಿಗೆ ವಹಿಸಿಕೊಂಡಿದ್ದು, ಅವರು ಸ್ಥಳೀಯ ವಿದ್ಯುತ್ ಗುತ್ತಿಗೆದಾರರಿಗೆ ಉಪಗುತ್ತಿಗೆ ನೀಡಿರುವುದಾಗಿ ತಿಳಿದುಬಂದಿದೆ.

ಕಳಪೆ ಕಮಗಾರಿ ಆರೋಪ

ಹೆದ್ದಾರಿ ಬದಿಯಲ್ಲಿ ಬೃಹತ್ ವಿದ್ಯುತ್ ಕಂಬ ನಿಲುಗಡೆಗೊಳಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಕಂಬವನ್ನು ನೆಲದಲ್ಲಿ 6 ಅಡಿಯಷ್ಟು ಹೊಂಡ ಮಾಡಿ ನೆಟ್ಟು ಸುತ್ತ ಕಾಂಕ್ರೀಟ್ ಮಿಶ್ರಣ ಹಾಕಿ ಗಟ್ಟಿಗೊಳಿಸಬೇಕು. ಆದರೆ ಇಲ್ಲಿ ಕಾಂಕ್ರೀಟ್ ಮಿಶ್ರಣ ಹಾಕಿಲ್ಲ. ಮುಚ್ಚಿರುವ ಮಣ್ಣು ಮಳೆಗೆ ಸಡಿಲಗೊಂಡು ಕೆಲವೆಡೆ ಬೃಹತ್ ಕಂಬಗಳು ವಾಲಿ ನಿಂತಿವೆ. ಜೋರಾದ ಗಾಳಿ ಬಂದು ಬಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ಕಳಪೆ ಕಾಮಗಾರಿ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲಸ ಇನ್ನೂ ಪೂರ್ಣಗೊಂಡಿಲ್ಲ

ಬೃಹತ್ ವಿದ್ಯುತ್ ಕಂಬ ಅಳವಡಿಸುವ ಕಾರ್ಯ ನಿಯಮಾನುಸಾರ ನಡೆಯುತ್ತಿದೆ. ಹೆದ್ದಾರಿ ಇಲಾಖೆಯ ಅಡೆತಡೆಗಳನ್ನು ನಿವಾರಿಸಿಕೊಂಡು ತುರ್ತಾಗಿ ಕಂಬ ಅಳವಡಿಸಬೇಕಾದ ಅಗತ್ಯತೆ ಎದುರಾಗಿತ್ತು. ಬೃಹತ್ ಕಂಬ ಅಳವಡಿಸಿದ ಬಳಿಕ ಕೊನೇ ಹಂತವಾಗಿ 4 ಅಡಿ ಸುತ್ತಳತೆಯ ಕಾಂಕ್ರೀಟ್ ಕವಚ ನಿರ್ಮಾಣಕ್ಕಾಗಿ ಕೆಲ ದಿನಗಳ ಹಿಂದೆ ಮಣ್ಣು ಅಗೆಯಲಾಗಿತ್ತು. ಮಳೆ ಬಿರುಸಾದ ಕಾರಣ ಕಾಂಕ್ರೀಟ್ ಕಾಮಗಾರಿ ವಿಳಂಬವಾಗಿದೆ. ಮಳೆಗೆ ಮಣ್ಣು ಮೆದುಗೊಂಡು ಕೆಲವೆಡೆ ಕಂಬ ವಾಲಿವೆ. ಅವುಗಳಿಗೆ ಸ್ಟೇ ವಯರ್ ಅಳವಡಿಸಿ ಬೀಳದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಕಾಮಗಾರಿ ಮೇಲೆ ಇಲಾಖೆ ನಿಗಾ ಇರಿಸಿದೆ. ಸಿಮೆಂಟ್ ಕಾಂಕ್ರೀಟ್ ಅಳವಡಿಸುವುದು ಕೊನೇ ಹಂತವಾಗಿರುವ ಕಾರಣ ಕಾಮಗಾರಿ ಕಳಪೆಯಾಗಿದೆ ಎನ್ನಲಾಗದು ಎಂದು ಉಪ್ಪಿನಂಗಡಿ ವಲಯದ ಮೆಸ್ಕಾಂ ಅಧಿಕಾರಿ ನಿತಿನ್ ತಿಳಿಸಿದ್ದಾರೆ.

ಬೃಹತ್ ಗಾತ್ರದ ವಿದ್ಯುತ್ ಕಂಬಗಳನ್ನು ಹಾಕುವಾಗ ಆಳವಾದ ಹೊಂಡ ತೆಗೆದು, ಕಾಂಕ್ರೀಟ್ ಹಾಕಬೇಕು. ಆದರೆ ಇಲ್ಲಿ ಕಾಂಕ್ರೀಟ್ ಹಾಕದೆ ಹಾಗೇ ನೆಡಲಾಗಿದೆ. ನೆಕ್ಕಿಲಾಡಿ ಪಂಚಾಯಿತಿ ಮುಂಭಾಗದಲ್ಲಿ ಇದೇ ರೀತಿಯಲ್ಲಿ ಕಂಬ ಹಾಕಿದ್ದು, ಕೆಲ ದಿನಗಳ ಹಿಂದೆ ಇಲ್ಲಿ ಕೆಲಸ ನಡೆಯುತ್ತಿರುವಾಗ ಕಾಂಕ್ರೀಟ್ ಹಾಕದಿರುವ ಬಗ್ಗೆ ವಿಚಾರಿಸಿದ್ದೆ. ಆದರೆ ಅದಕ್ಕೆ ಸಮರ್ಪಕ ಉತ್ತರ ನೀಡಿರಲಿಲ್ಲ. ಮೇಲ್ನೋಟಕ್ಕೆ ಈ ಕೆಲಸ ಕಳಪೆಯಾಗಿ ಕಾಣುತ್ತಿದೆ.

— ಪ್ರಶಾಂತ್, ನೆಕ್ಕಿಲಾಡಿ ಗಾಪಂ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net