ಪೊಲೀಸರೆಂದು ಬೆದರಿಸಿ ವೃದ್ಧೆಗೆ 65 ಲಕ್ಷ ರೂ. ವಂಚನೆ

((ಸಾಂದರ್ಭಿಕ ಚಿತ್ರ))
((ಸಾಂದರ್ಭಿಕ ಚಿತ್ರ))
Published on

* ಬ್ಯಾಂಕ್​ ಖಾತೆ ಪರಿಶೀಲನೆ ನೆಪದಲ್ಲಿ ಮೋಸ

ಉಡುಪಿ: ನಾವು ಮುಂಬಯಿ ಪೊಲೀಸ್​ ಡಿಪಾರ್ಟ್​ಮೆಂಟ್​ನವರಾಗಿದ್ದು ತಮ್ಮ ಖಾತೆಗೆ ಅಕ್ರಮವಾಗಿ ಕೋಟ್ಯಂತರ ರೂ. ಜಮಾ ಆಗಿದ್ದು, ನಿಮ್ಮನ್ನು ಬಂಧಿಸಲು ವಾರಂಟ್​ ಜಾರಿಯಾಗಿದೆ ಎಂದು ವೃದ್ಧೇಯೋರ್ವರಿಗೆ ಬೆದರಿಸಿ 65 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ. ಉಡುಪಿಯ ಶೀಲಾ (66) ವಂಚಕರ ಮೋಸದಿಂದ ಹಣ ಕಳೆದುಕೊಂಡವರು.
ಜು.13ರಂದು ಬೆಳಗ್ಗೆ 10 ಗಂಟೆಗೆ ಅವರ ಮೊಬೈಲ್​ನ ವಾಟ್ಸಪ್​ಗೆ ಮುಂಬಯಿ ಪೊಲೀಸ್​ ಡಿಪಾರ್ಟ್​ಮೆಂಟ್​ ಎಂಬ ಮೆಸೇಜ್​ ಬಂದಿದೆ. ನಂತರ ಅದೇ ನಂಬರ್​ನಿಂದ ವಿಡಿಯೋ ಕಾಲ್​ ಬಂದಿದ್ದು, ಪೊಲೀಸ್​ ಯೂನಿಫಾಮ್​ರ್ನಲ್ಲಿದ್ದ ವ್ಯಕ್ತಿಯೋರ್ವ, ನಾನು ಮುಂಬಯಿ ಕೊಲಬಾ ಪೊಲೀಸ್​ ಠಾಣೆಯ ಇನ್ಸ್​ಪೆಕ್ಟರ್​ ಎಂದು ತಿಳಿಸಿದ್ದಾನೆ. 
ನಿಮ್ಮ ಮನೆಯಲ್ಲಿ ಯಾರೆಲ್ಲ ಇದ್ದಾರೆ ಎಂದು ಕೇಳಿದ್ದು, ಮಹಿಳೆ ತಾನು ಒಬ್ಬಳೇ ಇರುವುದಾಗಿ ತಿಳಿಸಿದ್ದಾರೆ. ನೀವು ಹೆದರುವುದು ಬೇಡ, ನಿಮಗೊಂದು ವಿಚಾರ ಹೇಳುತ್ತೇನೆ. ನಿಮ್ಮ ಕೆನರಾ ಬ್ಯಾಂಕ್​ ಖಾತೆಗೆ 20 ಕೋಟಿ ರೂ. ಜಮಾ ಆಗಿದೆ. ಈ ಹಣದ ಬಗ್ಗೆ ನಿಮ್ಮ ವಿರುದ್ಧ ಕೇಸ್​ ಆಗಿದ್ದು, ನಿಮ್ಮನ್ನು ಬಂಧಿಸಲು ವಾರಂಟ್​ ಜಾರಿಯಾಗಿದೆ. ಮಂಗಳೂರು ಪೊಲೀಸರು ನಿಮ್ಮನ್ನು ಬಂಧಿಸಲಿದ್ದಾರ ಎಂದು ಬೆದರಿಸಿದ್ದಾನೆ. ಬಳಿಕ ಬ್ಯಾಂಕ್​ನ ಅಕೌಂಟ್​ ಎಲ್ಲೆಲ್ಲಿದೆ ಎಂದು ವಿಚಾರಿಸಿ, ಬಲವಂತದಿಂದ ಹಾಗೂ ಹೆದರಿಸಿ ಖಾತೆಯ ವಿವರಗಳ ಫೋಟೋ ತೆಗೆಸಿಕೊಂಡಿದ್ದಾರೆ.
ನಿಮ್ಮ ವಿರುದ್ಧ ದಾಖಲಾಗಿರುವ ಕೇಸ್​ನಿಂದ ಹೊರಗೆ ಬರಬೇಕೆಂದರೆ ನಿಮ್ಮ ಖಾತೆಯಲ್ಲಿರುವ ನೋಟುಗಳ ಸೀರಿಯಲ್​ ನಂಬರ್​ ಚೆಕ್​ ಮಾಡಬೇಕಾಗಿದೆ. ನಾವು ಹೇಳಿದ ಬ್ಯಾಂಕ್​ ಖಾತೆಗೆ ಹಣ ಜಮಾ ಮಾಡಬೇಕು. ಇಲ್ಲದಿದ್ದರೆ ನಿಮ್ಮ ಬಂಧನ ಆಗಲಿದೆ ಎಂದು ಬೆದರಿಸಿದ್ದಾರೆ. ಬಳಿಕ ಜು.13ರಿಂದ ಜು.17ರ ವರೆಗೆ ಪದೇಪದೆ ವಾಟ್ಸಪ್​ ಕರೆ ಮಾಡಿದ್ದಾರೆ. 
ಖಾತೆಯ ವೆರಿಫಿಕೇಷನ್​ ಮಾಡಲೇಬೇಕು ಎಂದು ಹೆದರಿಸಿದ್ದರಿಂದ ನಿಜವೆಂದು ನಂಬಿ ನನ್ನ ಖಾತೆಯಲ್ಲಿದ್ದ ಒಟ್ಟು 65 ಲಕ್ಷ ರೂ.ವನ್ನು ವಂಚಕರು ಹೇಳಿದ ಖಾತೆಗೆ ವರ್ಗಾವಣೆ ಮಾಡಿದ್ದೇನೆ. ನನಗೆ ಪೊಲೀಸರೆಂದು ಸುಳ್ಳು ಹೇಳಿ, ಬಂಧಿಸುತ್ತೇವೆ ಎಂದು ಬೆದರಿಸಿ ಮತ್ತು ಬ್ಯಾಂಕ್​ ಖಾತೆಯ ಪರಿಶೀಲನೆ ಮಾಡುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂದು ಮಹಿಳೆ ದೂರು ನೀಡಿದ್ದು, ಉಡುಪಿ ಸೆನ್​ ಅಪರಾಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net