ಸೆಪ್ಟಿಕ್​ ಟ್ಯಾಂಕ್​ಗೆ ಬಿದ್ದು ವೃದ್ಧೆ ದುರ್ಮರಣ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಉಡುಪಿ: ಬಟ್ಟೆ ಒಣಗಿಸಲು ಹೋಗುತ್ತಿದ್ದ ವೃದ್ಧೆಯೊಬ್ಬರು ಸೆಪ್ಟಿಕ್​ ಟ್ಯಾಂಕ್​ ಸ್ಲ್ಯಾಬ್​ ಮುರಿದು ಒಳಗೆ ಬಿದ್ದು ಮೃತಪಟ್ಟ ಘಟನೆ ಬಡಾನಿಡಿಯೂರು ಗ್ರಾಮದಲ್ಲಿ ನಡೆದಿದೆ.
ಬಡಾನಿಡಿಯೂರು ನಿವಾಸಿ ಆಲಿಸ್​ ಡಿಸೋಜ (74) ಮೃತಪಟ್ಟ ದುರ್ದೈವಿ. ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಆಲಿಸ್​ ಡಿಸೋಜ ಅವರು ಮನೆಯ ಬಟ್ಟೆಗಳನ್ನು ತೊಳೆದು ಒಣಗಿಸಲು ಹೊರಗೆ ಹೋಗುತ್ತಿದ್ದರು. ಈ ವೇಳೆ ದಾರಿಯ ಮಧ್ಯೆ ಇದ್ದ ಸೆಪ್ಟಿಕ್​ ಟ್ಯಾಂಕ್​ನ ಮೇಲಿನ ಕಲ್ಲಿನ (ಮೂಡುಗಲ್ಲು) ಮೇಲೆ ಅವರು ಕಾಲಿಟ್ಟಾಗ, ಕಲ್ಲು ಒಮ್ಮೆಲೇ ಮುರಿದುಹೋಗಿದೆ. ಪರಿಣಾಮ ಆಲಿಸ್​ ಅವರು ಟ್ಯಾಂಕ್​ನ ಒಳಗೆ ಬಿದ್ದು ಸಿಲುಕಿಕೊಂಡಿದ್ದರು. ಇವರ ಮಗ ಶಾಲ್ಫಿನ್​ ಫೆರ್ನಾಂಡಿಸ್​ ಬಂದು ನೋಡಿದಾಗ ತಾಯಿ ಟ್ಯಾಂಕ್​ನ ಕಲ್ಲುಗಳ ಮಧ್ಯೆ ಸಿಲುಕಿರುವುದು ಬೆಳಕಿಗೆ ಬಂದಿದೆ.

ತಕ್ಷಣವೇ ಅವರು ಸಾಮಾಜಿಕ ಕಾರ್ಯಕರ್ತ ಈಶ್ವರ್​ ಮಲ್ಪೆ ಅವರ ಸಹಾಯದೊಂದಿಗೆ ತಾಯಿಯನ್ನು ಮೇಲಕ್ಕೆ ಎತ್ತಿದ್ದರು. ಅದಾಗಲೇ ಅವರು ಮೃತಪಟ್ಟಿದ್ದರು. ಮಲ್ಪೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net