ಪುತ್ತೂರು ಗ್ರಾಮಾಂತರ: ಆಸ್ತಿ ವಿಚಾರದಲ್ಲಿ ತನಗೆ ಮೋಸವಾಗಿರುವ ವಿಚಾರ ಉಲ್ಲೇಖಿಸಿ ಡೆತ್‌ನೋಟ್ ಬರೆದಿಟ್ಟು ಯೋಗೀಶ್ ಮಣಿಯಾಣಿ(73) ಎಂಬುವರು ತೋಟದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಟ್ಟಂಪಾಡಿ ಗ್ರಾಮದ ತಲೆಪ್ಪಾಡಿ ಎಂಬಲ್ಲಿ ನಡೆದಿದೆ.
ಮೂಲತಃ ಬೆಟ್ಟಂಪಾಡಿ ಗ್ರಾಮದ ತಲೆಪ್ಪಾಡಿ ನಿವಾಸಿಯಾಗಿದ್ದು, ಪ್ರಸ್ತುತ ಕೇರಳದ ಕಾಸರಗೋಡಿನ ಅಡೂರಿನಲ್ಲಿ ಪತ್ನಿ ಮನೆಯಲ್ಲಿ ನೆಲೆಸಿದ್ದರು. ತಲೆಪ್ಪಾಡಿಯ ತೋಟದಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಗುರುವಾರ ಬೆಳಗ್ಗೆ ಮೃತದೇಹ ಕಂಡು ಬಂದಿದೆ.
ಜಾಗದ ವಿಚಾರದಲ್ಲಿ ತನಗೆ ಮೋಸವಾಗಿರುವ ವಿಚಾರವನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ. ಯೋಗೀಶ್ ಮಣಿಯಾಣಿ ಧಾರ್ಮಿಕ ಮತ್ತು ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.