ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಯತ್ನ

ಕೋಡಿ ಕನ್ಯಾಣದಲ್ಲಿ ಪ್ರಜಾಸೇವಾ ಅಂದೋಲನ
ಕೋಡಿ ಕನ್ಯಾಣ ಗ್ರಾಮ ಪಂಚಾಯಿತಿ ಪ್ರಜಾಸೇವಾ ಆಂದೋಲನದಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಜನರ ಸಮಸ್ಯೆಗಳನ್ನು ಆಲಿಸಿದರು. ಪ್ರಮುಖರಾದ ಅಶೋಕ್ ಭಟ್, ರಾಮದಾಸ್, ಮಹಾಂತೇಶ್ ಮೊದಲಾದವರಿದ್ದರು.
ಕೋಡಿ ಕನ್ಯಾಣ ಗ್ರಾಮ ಪಂಚಾಯಿತಿ ಪ್ರಜಾಸೇವಾ ಆಂದೋಲನದಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ ಜನರ ಸಮಸ್ಯೆಗಳನ್ನು ಆಲಿಸಿದರು. ಪ್ರಮುಖರಾದ ಅಶೋಕ್ ಭಟ್, ರಾಮದಾಸ್, ಮಹಾಂತೇಶ್ ಮೊದಲಾದವರಿದ್ದರು.
Published on: 

ವಿಜಯವಾಣಿ ಸುದ್ದಿಜಾಲ ಕೋಟ

ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವುದು ಪ್ರಜಾಸೇವಾ ಆಂದೋಲನದ ಉದ್ದೇಶ. ಸಾರ್ವಜನಿಕರು ತಾಳ್ಮೆಯಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀಡುವ ಸಲಹೆಯನ್ನು ಸ್ವೀಕರಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು. ಕೋಡಿ ಕನ್ಯಾಣ ಗ್ರಾಮ ಪಂಚಾಯಿತಿಯಲ್ಲಿ ನಡೆದ ಪ್ರಜಾಸೇವಾ ಆಂದೋಲನದ ಅಧ್ಯಕ್ಷತೆ ವಹಿಸಿ ವಾತನಾಡಿದರು.

ಅನಧಿಕೃತ ಹೋಮ್‌ಸ್ಟೇಗಳಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಸಾಕಷ್ಟು ದೂರುಗಳು ಬಂದವು. ತಿರುಗಾಡಲು ಸರಿಯಾಗಿ ದಾರಿ ಬಿಡುತ್ತಿಲ್ಲ, ಮೀನು ಒಣಗಿಸಲು ಇರುವ ಪರಂಬೋಕು ಸ್ಥಳದಲ್ಲಿ ರೆಸಾರ್ಟ್ ನಿರ್ವಾಣ ವಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂಬ ದೂರಿಗೆ ಪಿಡಿಒ ರವೀಂದ್ರ ಉತ್ತರಿಸಿ, ಈಗಾಗಲೇ ನೋಟಿಸ್ ನೀಡಿ ಹೋಮ್‌ಸ್ಟೇಗಳನ್ನು ಮುಚ್ಚಲಾಗಿದೆ. ಈಗ ಪುನಃ ಬಾಗಿಲು ತೆರೆದಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರ ಮೂಲಕ ಸೂಚನೆ ನೀಡಲಾಗಿದೆ ಎಂದರು.

ಕೋಡಿ ತಲೆಗೆ ಬಸ್ ಸಂಪರ್ಕ ನೀಡಬೇಕೆಂಬ ಆಗ್ರಹಗಳು ಕೇಳಿ ಬಂದಿದ್ದು, ಈ ಭಾಗದಲ್ಲಿ ರಸ್ತೆ ಅಗಲೀಕರಣವಾಗಬೇಕು. ಎರಡು ತಿಂಗಳಲ್ಲಿ ಅಗಲೀಕರಣ ಕಾಮಗಾರಿ ನಡೆಯಲಿದೆ. ಆ ಬಳಿಕ ಬಸ್ ಸಂಪರ್ಕ ನೀಡೋಣ. ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ವಾಡಿ ಬಸ್ ಹೋಗಲು ಸಾಧ್ಯವಿದ್ದರೆ ಆದಷ್ಟು ಬೇಗ ಬಸ್ ಓಡಿಸಿ ಎಂದು ಶಾಸಕರು ಸೂಚಿಸಿದರು.

ಗ್ರೇಡ್ 2 ತಹಸೀಲ್ದಾರ್ ಅಶೋಕ್ ಭಟ್, ತಾಲೂಕು ಪಂಚಾಯಿತಿ ಇಒ ರಾಮದಾಸ್, ಕೋಟ ಠಾಣಾಧಿಕಾರಿ ಮಹಾಂತೇಶ್, ಪಂಚಾಯಿತಿ ಆಡಳಿತಾಧಿಕಾರಿ ಅನುಷಾ ಮೊದಲಾದವರಿದ್ದರು. ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಹೇಶ್ ಸ್ವಾಗತಿಸಿ, ನಿರೂಪಿಸಿದರು.

ವರ್ಷ ಕಳೆದರೂ ಸಿಗದ ಹಕ್ಕುಪತ್ರ

ಹಣ ಕಟ್ಟಿ ವರ್ಷಗಳೇ ಕಳೆದರೂ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಈಗಾಗಲೇ ಸಾವಿರಾರು ರೂ. ಬಡ್ಡಿ ಕಟ್ಟಲಾಗಿದೆ ಎಂದು ಸಭೆಗೆ ಬಂದ ಹಿರಿಯರು ದೂರಿದರು. ಆಗ ಶಾಸಕರು ಹಕ್ಕುಪತ್ರ ವಿತರಣೆಗೆ ಯಾವುದೇ ವಿಳಂಬ ಮಾಡಬೇಡಿ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಹಕ್ಕುಪತ್ರ ವಿತರಣೆಯಾಗಲಿ ಎಂದು ಸೂಚಿಸಿದರು. ನ.7ರ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಮಂಜೂರಾದ 14 ಮಂದಿಗೆ ಹಕ್ಕುಪತ್ರ ನೀಡುವಂತೆ ಸೂಚಿಸಿದರು.

ಪ್ರಜಾಸೇವೆ ಸಾರ್ವಜನಿಕ ಸಮಸ್ಯೆಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿ ಜಂಟಿಯಾಗಿ ಪರಿಹರಿಸುವ ಪ್ರಮುಖ ಯೋಜನೆ. ಒಂದೇ ಸೂರಿನಡಿ ಹಲವು ಸಮಸ್ಯೆಗಳನ್ನು ಪರಿಹರಿಸುವುದು ಮತ್ತು ಇಲ್ಲಿ ದಾಖಲಾದ ದೂರುಗಳಿಗೆ ಗಡುವಿನೊಳಗೆ ಪರಿಹಾರ ಸಿಗುವ ಬಗ್ಗೆ ಪ್ರಯತ್ನಿಸುವುದು ಆದ್ಯತೆಯಾಗಿದೆ.
ಕಿರಣ್ ಕುಮಾರ್ ಕೊಡ್ಗಿ ಶಾಸಕ