ನ್ಯಾಯ, ಪರಿಹಾರ ಒದಗಿಸಲು ಪ್ರಯತ್ನ

 ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಸಾರೆಪುಣಿ ನಿವಾಸಿ ಜುಬೈದಾ ಅವರ ಪುತ್ರಿ ಫಾತಿಮತ್ ನಿಶಾನ ಮನೆಗೆ ಶಾಸಕ ಅಶೋಕ್ ರೈ ಕಾಂಗ್ರೆಸ್ ಮುಖರೊಂದಿಗೆ ಭೇಟಿ ನೀಡಿದರು.
ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಸಾರೆಪುಣಿ ನಿವಾಸಿ ಜುಬೈದಾ ಅವರ ಪುತ್ರಿ ಫಾತಿಮತ್ ನಿಶಾನ ಮನೆಗೆ ಶಾಸಕ ಅಶೋಕ್ ರೈ ಕಾಂಗ್ರೆಸ್ ಮುಖರೊಂದಿಗೆ ಭೇಟಿ ನೀಡಿದರು.
Published on
ಪುತ್ತೂರು ಗ್ರಾಮಾಂತರ: ಫಾತಿಮತ್ ನಿಶಾನ ಸಂಶಯಾಸ್ಪದ ಸಾವಿನ ವಿಚಾರದಲ್ಲಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಲ್ಲಿ ಮಾತನಾಡಿ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಮತ್ತು ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಿಕೊಡಲು ಪ್ರಯತ್ನಿಸುವುದಾಗಿ ಶಾಸಕ ಅಶೋಕ್ ರೈ ಭರವಸೆ ನೀಡಿದರು.
ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಡಪ್ಪಾಲದಲ್ಲಿರುವ ಪತಿಯ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಸಾರೆಪುಣಿ ನಿವಾಸಿ ಜುಬೈದಾ ಅವರ ಪುತ್ರಿ ಫಾತಿಮತ್ ನಿಶಾನ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ನಿಶಾನ ಸಾವಿನ ವಿಚಾರದಲ್ಲಿ ಸರಿಯಾದ ರೀತಿ ತನಿಖೆಯಾಗುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಸಾರಪುಣಿ ಜುಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಸಾರಪುಣಿ ಶಾಸಕರಲ್ಲಿ ಮನವಿ ಮಾಡಿಕೊಂಡರು.
ಈ ವಿಚಾರವಾಗಿ ಈಗಾಗಲೇ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಆರೋಪಿಗಳ ಬಂಧನವಾಗಿದ್ದು, ವರದಿಯ ಆಧಾರದಲ್ಲಿ ಮುಂದಿನ ಕ್ರಮ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ. ಇದೊಂದು ಕೊಲೆ ಎನ್ನುವ ಆರೋಪ ಇರುವುದರಿಂದ ಗೃಹ ಸಚಿವರೊಂದಿಗೆ ಮಾತನಾಡಿ ನ್ಯಾಯ ಒದಗಿಸುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರ್, ಕಾರ್ಯದರ್ಶಿ ನೌಶಾದ್ ತಿಂಗಳಾಡಿ, ಕಾಂಗ್ರೆಸ್ ಮುಖಂಡರಾದ ಸಿದ್ಧೀಕ್ ಸುಲ್ತಾನ್, ಅಬ್ದುಲ್‌ಖಾದರ್ ಮೇರ್ಲ,ಪ್ರವೀಣ್ ಆಚಾರ್ಯ ನರಿಮೊಗರು, ಸಲಾಂ ಸಂಪ್ಯ, ಹಬೀಬ್ ಕಣ್ಣೂರು, ಮಹಮ್ಮದ್ ಆಲಿ ನೇರೋಳ್ತಡ್ಕ, ಸೋಮಯ್ಯ ತಿಂಗಳಾಡಿ, ಇಕ್ಬಾಲ್ ಸಾರಪುಣಿ, ಹಾರೀಸ್ ಬೋಳೋಡಿ, ಎಂ.ಎಂ.ಸರ್ಫುದ್ದೀನ್, ಶಾಕೀರ್ ಸಾರಪುಣಿ ಮತ್ತಿತರರು ಇದ್ದರು.

ನಿಧಾನಗತಿಯಲ್ಲಿ ತನಿಖೆ

ಈ ವೇಳೆ ಶಾಸಕರ ಮುಂದೆ ನೋವು ತೋಡಿಕೊಂಡ ಮೃತರ ತಾಯಿ ಜುಬೈದಾ, ನನ್ನ ಮಗಳನ್ನು ಅನ್ಯಾಯವಾಗಿ ಕೊಲೆ ಮಾಡಲಾಗಿದೆ. ಆರೋಪಿಗಳ ಬಂಧನವಾಗಿದ್ದರೂ ತನಿಖೆ ನಿಧಾನಗತಿಯಲ್ಲಿ ನಡೆಯುತ್ತಿದೆ. ಮಗಳನ್ನು ಕಳೆದುಕೊಂಡ ನಮಗೆ ನೋವು ಮರೆಯಲು ಸಾಧ್ಯವಿಲ್ಲ. ಮಗಳ ಸಾವಿಗೆ ಕಾರಣವಾದ ಆಕೆಯ ಮಾವ, ಅತ್ತೆ ಮತ್ತು ನಾದಿನಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಶಾಸಕರು ಮೃತರ ಪತಿ ಅನ್ಸಾರ್ ಅವರಿಂದಲೂ ಮಾಹಿತಿ ಪಡೆದುಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net