ವಿಶ್ವಶಾಂತಿಗೆ ಕಾರಣವಾಗಲಿ ಕಲಿಸಿದ ಪಾಠ

ಉಡುಪಿಯಲ್ಲಿ ಶಿಕ್ಷಕರು ಹಾಗೂ ಪಾಲಕರ ಸಮೂಹಕ್ಕೆ ಆಯೋಜಿಸಿದ್ದ ಮಕ್ಕಳ ಶೈಕ್ಷಣಿಕ ಬದುಕಿನ ಜೀವನದ ಮಾಹಿತಿಯೊಳಗೊಂಡ ಉಪನ್ಯಾಸ ಕಾರ್ಯಕ್ರಮವನ್ನು ಡಾ. ಗುರುರಾಜ ಕರ್ಜಗಿ ಉದ್ಘಾಟಿಸಿದರು. ಡಾ. ಅಶೋಕ್​ ಕಾಮತ್​, ಎಂ. ಗಂಗಾಧರ್​ ರಾವ್​, ಮುರಳಿ ಕಡೆಕಾರ್​, ಡಾ. ಅಶೋಕಕುಮಾರ್​, ಕೆ.ಪಿ. ರಾವ್​, ಅಮಿತ್​ ಅರವಿಂದ್​, ಶಶಿಕಲಾ ರಾಜವರ್ಮ, ಡಾ. ವಿರೂಪಾಕ್ಷ ದೇವರಮನೆ ಇದ್ದರು.
ಉಡುಪಿಯಲ್ಲಿ ಶಿಕ್ಷಕರು ಹಾಗೂ ಪಾಲಕರ ಸಮೂಹಕ್ಕೆ ಆಯೋಜಿಸಿದ್ದ ಮಕ್ಕಳ ಶೈಕ್ಷಣಿಕ ಬದುಕಿನ ಜೀವನದ ಮಾಹಿತಿಯೊಳಗೊಂಡ ಉಪನ್ಯಾಸ ಕಾರ್ಯಕ್ರಮವನ್ನು ಡಾ. ಗುರುರಾಜ ಕರ್ಜಗಿ ಉದ್ಘಾಟಿಸಿದರು. ಡಾ. ಅಶೋಕ್​ ಕಾಮತ್​, ಎಂ. ಗಂಗಾಧರ್​ ರಾವ್​, ಮುರಳಿ ಕಡೆಕಾರ್​, ಡಾ. ಅಶೋಕಕುಮಾರ್​, ಕೆ.ಪಿ. ರಾವ್​, ಅಮಿತ್​ ಅರವಿಂದ್​, ಶಶಿಕಲಾ ರಾಜವರ್ಮ, ಡಾ. ವಿರೂಪಾಕ್ಷ ದೇವರಮನೆ ಇದ್ದರು.
Published on

* ಶಿಕ್ಷಣತಜ್ಞ ಡಾ.ಗುರುರಾಜ ಕರ್ಜಗಿ ಕಿವಿಮಾತು

* ಶಿಕ್ಷಕರು-ಪಾಲಕರಿಗೆ ವಿಶೇಷ ಉಪನ್ಯಾಸ

ಉಡುಪಿ: ಎಲ್ಲ ವಿಷಯಗಳನ್ನು ಒಬ್ಬರೇ ಕಲಿಸುವ ಏಕೋಪಾಧ್ಯಾಯ ಶಾಲೆ ಮತ್ತು ಒಂದೇ ವಿಷಯವನ್ನು ನಾಲ್ಕು ಶಿಕ್ಷಕರು ಪಾಠ ಮಾಡುವ ಶಿಕ್ಷಣ ವ್ಯವಸ್ಥೆಯನ್ನು ನಾವು ಕಾಣುತ್ತಿದ್ದೇವೆ. ಇದು ಮುಖ್ಯವಲ್ಲ. ಶಿಕ್ಷಕರು ಮಾಡುವ ಪಾಠಗಳು ಮಕ್ಕಳ ಮುಂದಿನ ಜೀವನ ಮುನ್ನಡೆಸುವಂತಿರಬೇಕು. ಮಾಡಿದ ಪಾಠ ವಿಶ್ವಶಾಂತಿಗೆ ಕಾರಣವಾಗುವಂತಿರಬೇಕು. ಕ್ರಿಯಾತ್ಮಕ ಬೋಧನೆ (ಕ್ರಿಯೇಟಿಂಗ್​ ಟೀಚಿಂಗ್​) ಯಿಂದ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳಿಸುವ ಕಾರ್ಯ ಇಂದಿನ ಶಿಕ್ಷಕ ಸಮೂಹದಿಂದ ಆಗಬೇಕು ಎಂದು ಶಿಕ್ಷಣತಜ್ಞ ಡಾ. ಗುರುರಾಜ ಕರ್ಜಗಿ ಕಿವಿಮಾತು ಹೇಳಿದರು.
ಉಡುಪಿಯ ಐವೈಸಿ ಸಭಾಂಗಣದಲ್ಲಿ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ, ಕಮಲ್​ ಎ. ಬಾಳಿಗಾ ಚಾರಿಟೇಬಲ್​ ಟ್ರಸ್ಟ್​ ಮುಂಬಯಿ, ಐಎಂಎ ಉಡುಪಿ-ಕರಾವಳಿ, ಯಕ್ಷಗಾನ ಕಲಾರಂಗ ಉಡುಪಿ ಹಾಗೂ ರೋಟರಿ ಕ್ಲಬ್​ ಮಣಿಪಾಲದ ವತಿಯಿಂದ ಭಾನುವಾರ (ಫೆ.8) ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಯಿ-ಮಗುವಂತಿರಬೇಕು ಶಿಕ್ಷಣ

ಶಿಕ್ಷಕರಿಗಾಗಿ 'ಮಾನವೀಯ ಶಿಕ್ಷಣ-ವಿಶ್ವ ಶಾಂತಿಗೆ ಅಡಿಪಾಯ' ಹಾಗೂ ಪಾಲಕರಿಗಾಗಿ 'ಸಂತಸದ ಬಾಲ್ಯ-ನೆಮ್ಮದಿಯ ಬದುಕು' ಎಂಬ ವಿಷಯ ಕುರಿತು ಮಾತನಾಡಿದ ಡಾ. ಕರ್ಜಗಿ, ಶಾಲೆಯಲ್ಲಿ ಪಾಠ ಕಲಿಸುವ ಕ್ರಮ ಹೇಗಿರಬೇಕೆಂದರೆ ಮಗುವಿಗೆ ನಡೆಯಲು ಕಲಿಸುವ ತಾಯಿಯಂತೆ ಇರಬೇಕು. ಕಲಿಸುವಿಕೆಯಲ್ಲಿ ಮೂರು ವಿಧಾನಗಳಿವೆ. ನಡೆಯಲು ಕಲಿಯುವಾಗ ಬಿದ್ದ ಮಗುವನ್ನು ಎತ್ತಲು ತಾಯಿ ಬಾಗುತ್ತಾಳೆ. ಮತ್ತೆ ಬೀಳದಂತೆ ಸರಿಯಾಗಿ ಮಗುವಿನ ಕೈ ಹಿಡಿದುಕೊಳ್ಳುತ್ತಾಳೆ. ಬಳಿಕ ಮಗು ಓಡಿದರೂ, ನಿಂತರೂ, ನಡೆದಾಡಿದರೂ ಸಹ ಆ ವೇಗಕ್ಕೆ ತಕ್ಕಂತೆ ತಾಯಿಯೂ ಸಹ ತನ್ನ ವೇಗವನ್ನು ಹೊಂದಿಸಿಕೊಳ್ಳುತ್ತಾಳೆ. ಶಿಕ್ಷಕರು ಮೊದಲು ಅಧ್ಯಯನಶೀಲರಾಗಬೇಕು. ಎಷ್ಟೇ ದೊಡ್ಡ ಪಿಎಚ್​.ಡಿ ಪಡೆದಿದ್ದರೂ ಮಕ್ಕಳಿಗೆ ಅರ್ಥವಾಗುವಂತೆ ಪಾಠ ಮಾಡಬೇಕು. ಬಾಗುವಿಕೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕೈ ಹಿಡಿಯುವಿಕೆ, ಮಕ್ಕಳ ಕಲಿಕೆಯ ವೇಗಕ್ಕೆ ತಮ್ಮವೇಗ ಹೊಂದಿಸಿಕೊಳ್ಳುವಿಕೆ. ಇವು ಇಂದಿನ ಶಿಕ್ಷಣದ ಮತ್ತು ಶಿಕ್ಷಕರ ಕಾರ್ಯ ಆಗಬೇಕಿದೆ ಎಂದರು.
ಉಡುಪಿ ಡಯಟ್​ ಪ್ರಾಂಶುಪಾಲ ಡಾ. ಅಶೋಕ್​ ಕಾಮತ್​, ಉಡುಪಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ್​ ರಾವ್​, ಕಾರ್ಯದರ್ಶಿ ಮುರಳಿ ಕಡೆಕಾರ್​, ಐಎಂಎ ಕರಾವಳಿ-ಉಡುಪಿಯ ಅಧ್ಯಕ್ಷ ಡಾ. ಅಶೋಕಕುಮಾರ್​, ನಾಡೋಜ ಕೆ.ಪಿ. ರಾವ್​, ರೋಟರಿ ಅಸಿಸ್ಟೆಂಟ್​ ಗವರ್ನರ್​ ಅಮಿತ್​ ಅರವಿಂದ್​ ಉಪಸ್ಥಿತರಿದ್ದರು.
ಡಾ. ಗುರುರಾಜ ಕರ್ಜಗಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿಕ್ಷಕರು ಹಾಗೂ ಪಾಲಕರು.
ಆಶಾ ತಿಮ್ಮಪ್ಪ ಪ್ರಾರ್ಥಿಸಿದರು. ರೋಟರಿ ಮಣಿಪಾಲದ ಅಧ್ಯಕ್ಷೆ ಶಶಿಕಲಾ ರಾಜವರ್ಮ ಸ್ವಾಗತಿಸಿದರು. ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಶ್ರೀ ಕಾರ್ಯಕ್ರಮ ನಿರ್ವಹಿಸಿದರು.

ಪುಸ್ತಕ ಬಿಡುಗಡೆ, ಕಿರು ಪ್ರಹಸನ

ಡಾ. ಗುರುರಾಜ ಕರ್ಜಗಿ ಅವರ 'ಸಾಕ್ಷಿ' ಪುಸ್ತಕ ಹಾಗೂ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಅವರ 'ಕಲಿಸು ಗುರುವೇ ಕಲಿಸು' ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು. ಶಿಕ್ಷಕರಿಗೆ ಹಾಗೂ ಪಾಲಕರಿಗೆ ಪ್ರೇರಣೆಯಾಗಲು ಡಾ. ವಿರೂಪಾಕ್ಷ ದೇವರಮನೆ ರಚಿತ ಪುಸ್ತಕ 'ಜಗ ಮರೆತ ಮಗು' ಎಂಬ ಮದ್ಯವ್ಯಸನಿ ಪಾಲಕರ ಮಕ್ಕಳ ಸಮಸ್ಯೆಗಳ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಮುನಿಯಾಲು ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳು ಕುಡಿತ ಚಟವಿರುವ ಪಾಲಕರಿಂದಾಗಿ ಮನೆಯಲ್ಲಿ ಮಕ್ಕಳು, ಮಡದಿಯ ತೊಳಲಾಟ ಹೇಗಿರುತ್ತದೆ ಎಂಬ ಕುರಿತು ಕಿರು ಪ್ರಹಸನ ಪ್ರದರ್ಶಿಸಿದರು. ಜಿಲ್ಲೆಯಾದ್ಯಂತ ನಡೆಯಲಿರುವ ವ್ಯಸನ ಮುಕ್ತ ಸಮಾಜ ಅಭಿಯಾನದ ಲೋಗೋವನ್ನು ಡಾ. ಅಶೋಕ್ ಕಾಮತ್ ಬಿಡುಗಡೆ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net