ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಶಾಲಾ ಶಿಕ್ಷಣ ವಿಭಾಗದಲ್ಲಿ ಪ್ರತಿವರ್ಷವೂ ಅತ್ಯುತ್ತಮ ಸಾಧನೆ ದಾಖಲಿಸುತ್ತಲೇ ಬಂದಿದೆ. ಪ್ರಮಾಣ, ಗುಣಮಟ್ಟ ಎರಡೂ ವಿಭಾಗಗಳಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಮುಖ್ಯ ಶಿಕ್ಷಕರು ಮತ್ತು ಇಲಾಖೆ ನೀಡುತ್ತಿರುವ ಮಾರ್ಗದರ್ಶನ ಸ್ತುತ್ಯಾರ್ಹ, ಅನನ್ಯ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಭಿಪ್ರಾಯಪಟ್ಟರು.
ಮಣಿಪಾಲದ ಎಂಐಟಿ ಗ್ರಂಥಾಲಯ ಸಭಾಭವನದಲ್ಲಿ ಜಿಪಂ, ಶಾಲಾ ಶಿಕ್ಷಣ ಇಲಾಖೆ, ಮಾಹೆ ಹಾಗೂ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಸಹಯೋಗದಲ್ಲಿ ಬುಧವಾರ (ಮೇ 27) ಆಯೋಜಿಸಿದ್ದ ಉಡುಪಿ ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಮತ್ತು 2025-26ನೇ ಸಾಲಿನಲ್ಲಿ ಶೇ.100 ಫಲಿತಾಂಶ ಗಳಿಸಿದ ಜಿಲ್ಲೆಯ ಪ್ರೌಢಶಾಲೆಗಳ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ಬದ್ಧತೆ ಅಗತ್ಯ
ಕಾರ್ಯಕ್ರಮ ಉದ್ಘಾಟಿಸಿದ ತುಮಕೂರಿನ ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕುತೂಹಲ ಕೆರಳಿಸುವುದು, ಅವರಲ್ಲಿ ಅಭಿವ್ಯಕ್ತಿ ಉತ್ತಮಪಡಿಸಲು ನಿರಂತರ ಶ್ರಮ ಅಗತ್ಯ. ಶಿಕ್ಷಕರು ಬದ್ಧತೆ ಮತ್ತು ಪ್ರೀತಿಯಿಂದ ತೊಡಗಿಕೊಂಡಾಗ ಶ್ರೇಷ್ಠ ಫಲಿತಾಂಶ ದಾಖಲಿಸಲು ಸಾಧ್ಯ ಎಂದರು.
ಸಾಧಕರಿಗೆ ಅಭಿನಂದನೆ
ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ಹಾಗೂ ಶೇ.100 ಫಲಿತಾಂಶ ದಾಖಲಿಸಿದ 197 ಶಾಲೆಗಳ ಮುಖ್ಯಶಿಕ್ಷಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಮಾಹೆಯ ಆಡಳಿತಾಧಿಕಾರಿ ಡಾ. ಶ್ರೀಧರ್ ಆರ್. ಪೈ, ಉಡುಪಿ ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ ಮಾತನಾಡಿದರು.
ಉಡುಪಿ ಜಿಪಂ ಸಿಇಒ ಪ್ರತೀಕ್ ಬಾಯಲ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಲೋಕೇಶ್ ಸಿ. ಸ್ವಾಗತಿಸಿದರು. ಡಯಟ್ ಪ್ರಾಂಶುಪಾಲ ಡಾ. ಅಶೋಕ್ ಕಾಮತ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಯಟ್ನ ಉಪನ್ಯಾಸಕ ಡಾ.ಕಿಶೋರ್ ಶೆಟ್ಟಿ ವಂದಿಸಿದರು. ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.
"
ಪ್ರೌಢಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣವೂ ಅಗತ್ಯ. ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನ, ಸಂಖ್ಯಾಜ್ಞಾನದ ಜತೆಗೆ ಮೌಲ್ಯಗಳನ್ನೂ ಬೆಳೆಸಿಕೊಳ್ಳಲು ಪೂರಕ ವಾತಾವರಣ ಸೃಷ್ಟಿಸಬೇಕು. ನಾಗರಿಕ ಪ್ರಜ್ಞೆ ರೂಪಿಸುವಲ್ಲಿ ಶಿಕ್ಷಕರ ವೈಯಕ್ತಿಕ ಕಾಳಜಿ ಬಹು ಪರಿಣಾಮಕಾರಿ. ಯಾವುದೇ ವಿದ್ಯಾರ್ಥಿ ಅನುತ್ತೀರ್ಣತೆಯ ನೋವು ಅನುಭವಿಸದಂತೆ ಶಿಕ್ಷಕರು ಕಾಳಜಿ ವಹಿಸಬೇಕು.