ಪರಿಸರಸ್ನೇಹಿ, ಸಾಮಾಜಿಕ ಜಾಗೃತಿಯ ‘ಉಜಿರೆ ಬ್ರಹ್ಮಕಲಶ’

 ಉಜಿರೆ ಬ್ರಹ್ಮಕಲಶೋತ್ಸವದಲ್ಲಿ ಸಾವಿರಾರು ಮಂದಿಗೆ ಅನ್ನದಾನ ಮಾಡಲು ಸಿದ್ಧತೆ ನಡೆಸುತ್ತಿರುವ ಸಿಬ್ಬಂದಿ.
ಉಜಿರೆ ಬ್ರಹ್ಮಕಲಶೋತ್ಸವದಲ್ಲಿ ಸಾವಿರಾರು ಮಂದಿಗೆ ಅನ್ನದಾನ ಮಾಡಲು ಸಿದ್ಧತೆ ನಡೆಸುತ್ತಿರುವ ಸಿಬ್ಬಂದಿ.
Published on
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಭಕ್ತಿ, ಪರಂಪರೆ ಮತ್ತು ದಾನದ ದೀಪ ಒಂದೇ ವೇದಿಕೆಯಲ್ಲಿ ಪ್ರಜ್ವಲಿಸಿದಾಗ ಉಂಟಾಗುವ ವೈಭವಕ್ಕೆ ಉಜಿರೆ ಸಾಕ್ಷಿಯಾಗಿದೆ. ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಮೂರನೇ ಬ್ರಹ್ಮಕಲಶೋತ್ಸವ ಕೇವಲ ಧಾರ್ಮಿಕ ಆಚರಣೆ ಅಲ್ಲದೆ ಸಾಮಾಜಿಕ ಚಳವಳಿ, ಸಮೂಹ ಶ್ರದ್ಧೆಯ ಮಹೋತ್ಸವ ಮತ್ತು ಅನ್ನದಾಸೋಹದ ಮಹಾಗಾಥೆಯಾಗಿದೆ.
2001ರಲ್ಲಿ ನಡೆದ ಮೊದಲ ಬ್ರಹ್ಮಕಲಶೋತ್ಸವದ ಸ್ಮತಿಗಳು ಇನ್ನೂ ಜೀವಂತ. 24 ವರ್ಷಗಳ ನಂತರ ನಡೆಯುತ್ತಿರುವ ಈ ಮೂರನೇ ಮಹೋತ್ಸವ, ಪರಂಪರೆಯ ನಿರಂತರತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. 2023ರಲ್ಲಿ ಅಗಲಿದ ಗೌರವಾಧ್ಯಕ್ಷ ವಿಜಯರಾಘವ ಪಡುವೆಟ್ನಾಯ ಅವರ ಸೇವಾ ಪರಂಪರೆಯನ್ನು ಪುತ್ರ ಶರತ್‌ಕೃಷ್ಣ ಪಡುವೆಟ್ನಾಯ ಮುಂದುವರಿಸುತ್ತಿದ್ದು, ಉತ್ಸವದ ಪ್ರತಿಯೊಂದು ಹಂತವೂ ಸಮರ್ಪಕ ಯೋಜನೆ ಮತ್ತು ಶ್ರದ್ಧೆಯಿಂದ ಸಾಗುತ್ತಿದೆ.
ಪರಿಸರಸ್ನೇಹಿ ಅಲಂಕಾರದಲ್ಲಿ ಸಂಸ್ಕೃತಿಯ ಸೊಬಗು: ಬ್ರಹ್ಮಕಲಶೋತ್ಸವದ ವಿಶೇಷ ಆಕರ್ಷಣೆಯಾಗಿ ಇಕೋ ಫ್ರೆಂಡ್ಲಿ ಅಲಂಕಾರ ಕಂಗೊಳಿಸುತ್ತಿದೆ. ಬಿದಿರು ಹಾಗೂ ಅಡಕೆ ಮರದ ಅಲಂಕಾರಿಕ ವಿನ್ಯಾಸಗಳು ಉತ್ಸವದ ವಾತಾವರಣಕ್ಕೆ ಗ್ರಾಮೀಣ ಸೌಂದರ್ಯ ನೀಡಿವೆ. ಬಳಸಿ ಎಸೆಯುವ ಪ್ಲೇಟ್ ಹಾಗೂ ಲೋಟಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿರುವುದು ಈ ಮಹೋತ್ಸವದ ಮತ್ತೊಂದು ಶ್ಲಾಘನೀಯ ಹೆಜ್ಜೆ.
ಅನ್ನಸೇವೆಯ ಮಹಾಗಾಥೆ: ಅನ್ನದಾಸೋಹಕ್ಕೆ ಅಕ್ಕಿ, ಬೆಲ್ಲ, ಸಕ್ಕರೆ, ತೆಂಗಿನಕಾಯಿ, ಧಾನ್ಯಗಳು, ತರಕಾರಿ ಸೇರಿದಂತೆ ಬಹುತೇಕ ಎಲ್ಲ ಸಾಮಗ್ರಿಗಳು ದಾನ ರೂಪದಲ್ಲಿ ಬಂದಿವೆ. ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ತರಕಾರಿಗಳ ಹರಿವು ಕಂಡುಬಂದಿದೆ. ವಿವಿಧ ಸಮಿತಿಗಳು ನೀಡಿದ ದಾನವೇ ಅನ್ನದಾಸೋಹದ ಆಧಾರಸ್ತಂಭ. ಉಪ್ಪಿನಕಾಯಿ, ಅನ್ನ, ಸಾಂಬಾರು, ಪಾಯಸ, ಮಜ್ಜಿಗೆ, ಸಾರು, ಗಸಿ, ಸಿಹಿಯನ್ನೊಳಗೊಂಡ ಅನ್ನದಾನ ಹತ್ತುದಿನಗಳ ಕಾಲವೂ ಶಿಸ್ತುಬದ್ಧವಾಗಿ ನಡೆಯಲಿದೆ.

ಮೂರು ಲಕ್ಷ ಜನರಿಗೆ ಅನ್ನದಾನಕ್ಕೆ ಸಿದ್ಧತೆ

ಮಾ.11ರವರೆಗೆ ನಡೆಯಲಿರುವ ಬ್ರಹ್ಮಕಲಶೋತ್ಸವದ ಭೋಜನಾಲಯದಲ್ಲಿ ಎಂಟು ಕೌಂಟರ್ ಮಾಡಲಾಗಿದೆ, 30 ಮಂದಿ ಪಾಕ ತಯಾರಕರು, 20 ಮಂದಿ ಪಾತ್ರೆ ತೊಳೆಯುವವರು ಮತ್ತು 300ಕ್ಕೂ ಹೆಚ್ಚು ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಒಳಾಂಗಣ ವ್ಯವಸ್ಥೆ ಶಿಸ್ತುಬದ್ಧವಾಗಿದೆ. ಬೆಳಗ್ಗೆ 10.30ಕ್ಕೆ 20 ಮಂದಿಗೆ ಮಾತ್ರ ಒಳ ಪ್ರವೇಶ. ಉಳಿದ ಭಕ್ತರನ್ನು ವಾಲೆಂಟಿಯರ್ ಕೊಠಡಿಯಲ್ಲಿ ವ್ಯವಸ್ಥಿತವಾಗಿ ಕೂರಿಸಲಾಗುತ್ತದೆ. 11.30ರ ಪಲ್ಲಪೂಜೆಯ ನಂತರ ಎಲ್ಲರಿಗೂ ಪ್ರವೇಶ ಕಲ್ಪಿಸಲಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net