ಕೃಷ್ಣಮಠದಲ್ಲಿ ಪರಿಸರ ಸ್ನೇಹಿ ಬಯೋಗ್ಯಾಸ್​ ಘಟಕ

ಬಯೋಗ್ಯಾಸ್​ (ಜೈವಿಕ ಅನಿಲ) ಘಟಕ
ಬಯೋಗ್ಯಾಸ್​ (ಜೈವಿಕ ಅನಿಲ) ಘಟಕ
Published on
*ಗೋಪಾಲಕೃಷ್ಣ ಪಾದೂರು, ಉಡುಪಿ
ಮಧ್ಯಪ್ರಾಚ್ಯ ಯುದ್ಧದಿಂದಾಗಿ ಉದ್ಯಮಿಗಳು ಅಡುಗೆ ಅನಿಲ ಕೊರತೆಯಿಂದ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಮಧ್ಯೆ ಅನ್ನಬ್ರಹ್ಮನ ಕ್ಷೇತ್ರ ಕೃಷ್ಣ ಮಠ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಮಠದ ಭೋಜನಶಾಲೆಯ ತ್ಯಾಜ್ಯ ಮತ್ತು ಗೋಶಾಲೆಯ ಸೆಗಣಿಯನ್ನು ಸಮರ್ಪಕವಾಗಿ ಬಳಸಿ ಇಂಧನ ತಯಾರಿಸುವ ನಿಟ್ಟಿನಲ್ಲಿ 60 ಲಕ್ಷ ರೂ. ವೆಚ್ಚದ ಬಯೋಗ್ಯಾಸ್​ (ಜೈವಿಕ ಅನಿಲ) ಘಟಕ ಕಾರ್ಯಾರಂಭಕ್ಕೆ ಸಜ್ಜಾಗಿದೆ. ಹಿಂದಿನ ಪುತ್ತಿಗೆ ಮಠದ ಪರ್ಯಾಯ ಕಾಲದಲ್ಲಿ ಈ ಯೋಜನೆ ಪ್ರಾರಂಭಿಸಲಾಗಿದ್ದು, ಪ್ರಸ್ತುತ ಪರ್ಯಾಯ ಶೀರೂರು ಮಠದ ವತಿಯಿಂದ ನವೀನ ಮಾದರಿ ತಂತ್ರಜ್ಞಾನದೊಂದಿಗೆ ಸುಸಜ್ಜಿತ ಟಕ ನಿರ್ಮಿಸಲಾಗುತ್ತಿದೆ.
ತ್ಯಾಜ್ಯದಿಂದ ಪರಿಸರ ಸ್ನೇಹಿ ಇಂಧನ
ಮಠದ ಗೋಶಾಲೆ ಸಮೀಪ 50 ಕ್ಯೂಬಿಕ್​ ಮೀಟರ್​ ಸಾಮರ್ಥ್ಯ ಟಕವನ್ನು ಸ್ಥಾಪಿಸಲಾಗಿದ್ದು, ಚಿತ್ರದುರ್ಗ ಮೂಲದ ಖಾಸಗಿ ಸಂಸ್ಥೆ ಘಟಕವನ್ನು ಅಳವಡಿಸಿದೆ. ಇದರಿಂದ ನಿತ್ಯ ಉತ್ಪತ್ತಿಯಾಗುವ ಟನ್​ಗಟ್ಟಲೆ ಹಸಿ ತ್ಯಾಜ್ಯಕ್ಕೆ ಮುಕ್ತಿ ಸಿಗಲಿದೆ. ಮಠದ ಗೋಶಾಲೆಯಲ್ಲಿ 80ಕ್ಕೂ ಅಧಿಕ ಗೋವುಗಳಿದ್ದು, ನಿತ್ಯ ಸರಾಸರಿ 750 ಲೀಟರ್​ ಸೆಗಣಿ ದೊರೆಯುತ್ತಿದೆ. ದಿನಕ್ಕೆ ಸರಾಸರಿ 3 ರಿಂದ 5 ಸಾವಿರ ಮಂದಿ ಭೋಜನ ಪ್ರಸಾದ ಸ್ವೀಕರಿಸುತ್ತಿದ್ದು, ಅಡುಗೆ ಮನೆಯಿಂದ ಸುಮಾರು 750 ಕೆಜಿ ಹಸಿ ತ್ಯಾಜ್ಯ ಲಭ್ಯವಾಗುತ್ತಿದೆ. ಇವುಗಳ ಜೊತೆಗೆ ನಿತ್ಯ ಬಳಕೆಯಾಗುವ ಸುಮಾರು 2000 ಬಾಳೆ ಎಲೆ, ಊಟದ ತ್ಯಾಜ್ಯಗಳನ್ನು ಈ ಘಟಕಕ್ಕೆ ಬಳಸಿಕೊಳ್ಳಲಾಗುತ್ತದೆ. ಈ ಪ್ರಕ್ರಿಯೆಯಿಂದ ಪ್ರತಿದಿನ ಸರಾಸರಿ 30 ರಿಂದ 40 ಕೆಜಿ ಜೈವಿಕ ಅನಿಲ ಉತ್ಪಾದನೆಯಾಗಲಿದೆ.
ಗೊಬ್ಬರ ಮತ್ತು ನೀರಿನ ಮರುಬಳಕೆ
ಈ ಘಟಕವು ಕೇವಲ ಅನಿಲ ನೀಡುವುದು ಮಾತ್ರವಲ್ಲದೆ, ಉಪ ಉತ್ಪನ್ನವಾಗಿ ಗುಣಮಟ್ಟದ ಗೊಬ್ಬರವನ್ನು ನೀಡುತ್ತದೆ. ಘಟಕದಿಂದ ಹೊರಬರುವ ಸಂಸ್ಕರಿತ ದ್ರವ ರೂಪದ ತ್ಯಾಜ್ಯ ಮತ್ತು ಗೊಬ್ಬರವನ್ನು ತೋಟಗಾರಿಕೆಗೆ ಬಳಸಬಹುದು.
ಪಾಕಶಾಲೆಯಲ್ಲಿ ಆಧುನಿಕ ಸ್ಟೀಮ್​ ಬಾಯ್ಲರ್​
ಸುಮಾರು 18 ವರ್ಷಗಳಷ್ಟು ಹಳೆಯದಾದ ಬಾಯ್ಲರ್​ ವ್ಯವಸ್ಥೆ ಬದಲಾಗಿ ಭೋಜನಶಾಲೆಯ ಪಾಕಶಾಲೆಯಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಹೊಸ ಸ್ಟೀಮ್​ ಬಾಯ್ಲರ್​ ಅಳವಡಿಸಲಾಗುತ್ತಿದೆ. ಈ ಹೊಸ ಬಾಯ್ಲರ್​ಗೆ ಬಯೋಗ್ಯಾಸ್​ ಸಂಪರ್ಕ ಕಲ್ಪಿಸಲಾಗುತ್ತಿದ್ದು, ನಿತ್ಯ 30,000 ರಿಂದ 50,000 ಜನರಿಗೆ ಊಟ ಸಿದ್ಧಪಡಿಸಲು ಸಹಕಾರಿಯಾಗಲಿದೆ. ಮಠಕ್ಕೆ ನಿತ್ಯ ಹರಿದುಬರುವ ಸಾವಿರಾರು ಭಕ್ತರಿಗೆ ಅನ್ನದಾಸೋಹ ನಡೆಸಲು ಈ ನೂತನ ತಂತ್ರಜ್ಞಾನವು ಆರ್ಥಿಕವಾಗಿ ಮತ್ತು ಪರಿಸರ ದೃಷ್ಟಿಯಿಂದ ದೊಡ್ಡ ಶಕ್ತಿಯಾಗಿ ಪರಿಣಮಿಸಲಿದೆ.

ಕೃಷ್ಣ ಮಠದಲ್ಲಿ ಅತೀ ಅಗತ್ಯವಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಸ್ವಚ್ಛತೆ, ದುರಸ್ತಿ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಹಾಗೂ ಹಸಿರು ಇಂಧನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸುಸಜ್ಜಿತ ಜೈವಿಕ ಅನಿಲ ಟಕ ಆರಂಭಿಸಲಾಗಿದೆ. ಅಡುಗೆ ಅನಿಲ ಅಭಾವವಿದ್ದರೂ ಕಟ್ಟಿಗೆ ಮೂಲಕ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಯೋ ಗ್ಯಾಸ್​ ಮೂಲಕ ಇಂಧನ ವಲಯದಲ್ಲಿ ಸ್ವಾವಲಂಬನೆ ಸಾಧಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net