ತ್ರಾಸಿ ಬೀಚ್ ಬಳಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣ ನಿರುಪಯುಕ್ತವಾಗಿರುವುದು.
Published on:
Copied
Follow Us
ವಿಜಯವಾಣಿ ಸುದ್ದಿಜಾಲ ಕುಂದಾಪುರ
ಪ್ರಯಾಣಿಕರಿಗೆ ನೆರಳಾಗಬೇಕಿದ್ದ ಮತ್ತು ಉಪಯೋಗಕ್ಕೆ ಬೀಳಬೇಕಿದ್ದ ಪ್ರಯಾಣಿಕರ ತಂಗುದಾಣಗಳು ನಿರುಪಯುಕ್ತವಾಗಿ ನಿಷ್ಪ್ರಯೋಜಕವಾಗಿದೆ.
ತ್ರಾಸಿ ಗ್ರಾ.ಪಂ. ವ್ಯಾಪ್ತಿಯ ತ್ರಾಸಿ ಬೀಚ್ ಮತ್ತು ಅಣ್ಣಪ್ಪಯ್ಯ ಸಭಾಭವನದ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಸಂಸದ ಬಿ.ವೈ.ರಾಘವೇಂದ್ರ ಅವರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಅಂದಾಜು ತಲಾ 3.5 ಲಕ್ಷ ರೂ. ವೆಚ್ಚದಲ್ಲಿ ಕಳೆದ ವರ್ಷ ನಿರ್ಮಾಣಗೊಂಡಿರುವ ಎರಡು ಪ್ರಯಾಣಿಕರ ತಂಗುದಾಣಗಳು ನಿರುಪಯುಕ್ತವಾಗಿದ್ದು, ಪ್ರಯಾಣಿಕರಿಗೆ ಯಾವುದೇ ಉಪಯೋಗಕ್ಕೆ ಇಲ್ಲದಂತಾಗಿದೆ.
ಗಾಳಿ ಮಳೆಯಲ್ಲಿ ಕಾಯುವ ಪರಿಸ್ಥಿತಿ
ತ್ರಾಸಿ ಬೀಚ್ ಬಳಿ ನಿರ್ಮಾಣಗೊಂಡ ಪ್ರಯಾಣಿಕರ ತಂಗುದಾಣವನ್ನು ಯಾವೊಬ್ಬ ಪ್ರಯಾಣಿಕನೂ ಬಳಸುತ್ತಿಲ್ಲ. ಬಸ್ ನಿಲ್ಲುವುದು ಒಂದು ಕಡೆಯಾದರೆ ತಂಗುದಾಣ ನಿರ್ಮಿಸಿರುವುದು ಇನ್ನೊಂದು ಕಡೆ. ಹಾಗಾಗಿ ಪ್ರಯಾಣಿಕರು ಬಸ್ ತಂಗುದಾಣವನ್ನು ಆಶ್ರಯಿಸದೆ ಬಿರು ಬಿಸಿಲು, ಗಾಳಿ ಮಳೆಯಲ್ಲಿ ಬಸ್‌ಗಾಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕಾಯುತ್ತಾ ನಿಲ್ಲಬೇಕಾದ ಪರಿಸ್ಥಿತಿ ಇದೆ.
ಸರ್ವಿಸ್ ರಸ್ತೆಯಲ್ಲಿ ನಿರ್ಮಾಣ
ಇನ್ನೊಂದೆಡೆ ಅಣ್ಣಪ್ಪಯ್ಯ ಸಭಾಭವನದ ಬಳಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣ ಇದಕ್ಕೆ ಹೊರತಾಗಿಲ್ಲ. ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ಈ ತಂಗುದಾಣದ ಪ್ರಯೋಜನ ಪ್ರಯಾಣಿಕರಿಗೆ ದೊರೆಯುತ್ತಿಲ್ಲ. ಸರ್ವಿಸ್ ರಸ್ತೆಗೆ ಹೋಗುವ ಸ್ಥಳದಲ್ಲಿ ಬಸ್ ತಂಗುದಾಣ ನಿರ್ಮಿಸಿದ್ದರೆ, ಬಸ್‌ಗಳು ತಂಗುದಾಣಕ್ಕಿಂತ ಬಹಳ ಹಿಂದೆಯೇ ನಿಂತುಕೊಳ್ಳುತ್ತಿದೆ. ಆದ್ದರಿಂದ ಪ್ರಯಾಣಿಕರು ಬಸ್ ತಂಗುದಾಣವನ್ನು ಆಶ್ರಯಿಸಲು ಮುಂದಾಗುತ್ತಿಲ್ಲ.
ಮದ್ಯವ್ಯಸನಿಗಳ ವಾಸಸ್ಥಾನ
ತ್ರಾಸಿ ಬೀಚ್ ಮತ್ತು ಅಣ್ಣಪ್ಪಯ್ಯ ಸಭಾಭವನದ ಬಳಿ ನಿರ್ಮಿಸಿರುವ ಎರಡು ಪ್ರಯಾಣಿಕರ ತಂಗುದಾಣಗಳು ನಾಯಿ ಮತ್ತಿತರ ಪ್ರಾಣಿಗಳ ಮತ್ತು ಮದ್ಯವ್ಯಸನಿಗಳ ವಾಸಸ್ಥಾನವಾಗಿದೆ. ಬಸ್ ಪ್ರಯಾಣಿಕರಿಗೆ ಅನುಕೂಲವಾಗುವ ಸ್ಥಳದಲ್ಲಿ ತಂಗುದಾಣ ನಿರ್ಮಿಸಬೇಕೇ ವಿನಹಃ ಎಲ್ಲೆಲ್ಲೋ ತಂಗುದಾಣ ನಿರ್ಮಿಸಿದರೆ ಏನು ಪ್ರಯೋಜನ. ಲಕ್ಷಾಂತರ ರೂ. ಅನುದಾನ ವ್ಯರ್ಥ ಪೋಲು ಮಾಡಿದಂತಾಗಿದೆ ಎಂದು ಪ್ರಯಾಣಿಕರು ಆಡಳಿತ ವ್ಯವಸ್ಥೆ ಮತ್ತು ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತ್ರಾಸಿ ಬೀಚ್ ಮತ್ತು ಅಣ್ಣಪ್ಪಯ್ಯ ಸಭಾಭವನದ ಎದುರು ನಿರ್ಮಿಸಲಾಗಿರುವ ಪ್ರಯಾಣಿಕರ ತಂಗುದಾಣದಿಂದ ಪ್ರಯಾಣಿಕರಿಗೆ ಯಾವುದೇ ಉಪಯೋಗವಿಲ್ಲ. ಪ್ರಯಾಣಿಕರಿಗೆ ಅನುಕೂಲವಾಗುವಲ್ಲಿ ಅಥವಾ ಬಸ್ ನಿಲುಗಡೆ ನೀಡುವ ಸ್ಥಳದಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಿದರೆ ಉತ್ತಮವಾಗಿರುತ್ತಿತ್ತು.