ವಾರದ ಸಂತೆಗೀಗ ಗ್ರಹಣ!

 ಕುಂದಾಪುರದ ವಾರದ ಸಂತೆ ಮಾರುಕಟ್ಟೆಯಲ್ಲಿ ಕೊಳಚೆ ನೀರು ನಿಂತಿರುವುದು.
ಕುಂದಾಪುರದ ವಾರದ ಸಂತೆ ಮಾರುಕಟ್ಟೆಯಲ್ಲಿ ಕೊಳಚೆ ನೀರು ನಿಂತಿರುವುದು.
Published on
ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ದೊಡ್ಡ ವಾರದ ಸಂತೆಗಳಲ್ಲಿ ಒಂದಾದ ಕುಂದಾಪುರದ ವಾರದ ಸಂತೆ ವಾರುಕಟ್ಟೆ ಮುಂಭಾಗದ ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಇದರಿಂದ ಸಂತೆಗೆ ಪ್ರತಿ ವಾರ ಬರುವ ವರ್ತಕರು ಹಾಗೂ ಗ್ರಾಹಕರಿಗೆ ಕೊಳಚೆ ನೀರಿನ ಸ್ವಾಗತ ಸಿಗುತ್ತಿದೆ.
ಪ್ರತಿ ಶನಿವಾರ ಕುಂದಾಪುರ ಎಪಿಎಂಸಿ ಪ್ರಾಂಗಣದಲ್ಲಿ ವಾರದ ಸಂತೆ ನಡೆಯುತ್ತದೆ. ಇಲ್ಲಿ ಲಕ್ಷಾಂತರ ರೂ. ವ್ಯವಹಾರ ನಡೆಯುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಿರ್ವಹಣೆ ಸಮಸ್ಯೆಯಿಂದ ಇಲ್ಲಿಗೆ ಬರುವ ಜನರು, ಬೇರೆ ಬೇರೆ ಊರುಗಳಿಂದ ವ್ಯಾಪಾರಕ್ಕಾಗಿ ಬರುವ ವರ್ತಕರು ಕೂಡ ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಪ್ರವೇಶ ದ್ವಾರದಲ್ಲೇ ಸಂಕಷ್ಟ

ಸಂತೆಗೆ ಪ್ರವೇಶಿಸುವ ದ್ವಾರ ಇರುವ ಹೆದ್ದಾರಿ ಬಳಿಯ ಸರ್ವೀಸ್ ರಸ್ತೆಯ ಚರಂಡಿಯಲ್ಲಿ ಭಾರಿ ಪ್ರವಾಣದ ಕೊಳಚೆ ನೀರು ತುಂಬಿದ್ದು, ಇದರಿಂದ ಜನರಿಗೆ ತೊಂದರೆಯಾಗುತ್ತಿದೆ. ಅದರಲ್ಲೂ ಕೊಳಚೆ ನೀರಿನ ದುರ್ನಾತದಿಂದ ಜನರು ಮೂಗು ಮುಚ್ಚಿಕೊಳ್ಳುವಂತಾಗಿದೆ. ಈ ಪರಿಸರ, ದುರ್ನಾತವನ್ನು ಕಂಡು ಕೆಲವರು ಸಂತೆಗೆ ಬರಲು ಕೂಡ ಹಿಂದೇಟು ಹಾಕುವಂತಾಗಿದೆ.

ಸಾವಿರಾರು ಜನರಿಗೆ ತೊಂದರೆ

ಕುಂದಾಪುರದ ವಾರದ ಸಂತೆಗೆ 60-70 ವರ್ಷ ಹೆಚ್ಚು ಕಾಲದ ಇತಿಹಾಸವಿದೆ. ಉಡುಪಿ, ಮಂಗಳೂರು ವಾತ್ರವಲ್ಲದೆ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ದಾವಣಗೆರೆ, ಬಳ್ಳಾರಿ ಸಹಿತ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ನೂರಾರು ವ್ಯಾಪಾರಿಗಳು ಇಲ್ಲಿಗೆ ದಿನಸಿ, ಹಣ್ಣು, ತರಕಾರಿ, ಇನ್ನಿತರ ವಸ್ತುಗಳನ್ನು ವಾರಾಟ ವಾಡಲು ಪ್ರತಿ ವಾರ ಬರುತ್ತಾರೆ. ನಗರ ಭಾಗದ ಜನರು ವಾತ್ರವಲ್ಲದೆ ಕುಂದಾಪುರ, ಬೈಂದೂರು ತಾಲೂಕಿನ ಗ್ರಾಮೀಣ ಭಾಗದ ಸಾವಿರಾರು ಜನರು ವಾರಕ್ಕೊಮ್ಮೆ ಅಗತ್ಯ ವಸ್ತುಗಳ ಖರೀದಿಗಾಗಿ ಸಂತೆಗೆ ಬರುತ್ತಾರೆ. ಅವರಿಗೆಲ್ಲರಿಗೂ ದುರ್ವಾಸನೆ ಸಮಸ್ಯೆಯಾಗಿ ಕಾಡುತ್ತಿದೆ.

ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳಿ

ಡೆಂಘೆ ಮತ್ತು ಇತರ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಲು ತುರ್ತಾಗಿ ಕಾರ್ಯಾಚರಣೆ ವಾಡಬೇಕಾಗಿದೆ. ಚರಂಡಿಗೆ ನೇರವಾಗಿ ಕಲುಷಿತ ನೀರು ಹಾಗೂ ತ್ಯಾಜ್ಯ ಎಸೆಯುವವರ ವಿರುದ್ಧ ಸೂಕ್ತ ದಂಡ ವಿಧಿಸಬೇಕು. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತುರ್ತು ಕ್ರಮ ಕೈಗೊಂಡು ಸಾರ್ವಜನಿಕರನ್ನು ಸಂಕಷ್ಟದಿಂದ ಪಾರು ವಾಡಬೇಕು ಎಂಬುದು ಇಲ್ಲಿನ ಸಂತ್ರಸ್ತರ ಆಗ್ರಹ.

ಅಸಹನೀಯ ವೇದನೆ

ಪ್ಲಾಸ್ಟಿಕ್ ಸಹಿತ ತ್ಯಾಜ್ಯಗಳನ್ನು ಚರಂಡಿಗೆ ಎಸೆಯುತ್ತಿರುವುದರಿಂದ ನೀರಿನ ಹರಿವಿಗೂ ತಡೆಯಾಗಿದೆ. ದುರ್ನಾತದಿಂದಾಗಿ ವರ್ತಕರು ಹಾಗೂ ಗ್ರಾಹಕರು ಅಸಹನೀಯ ವೇದನೆ ಅನುಭವಿಸುವಂತಾಗಿದೆ. ಸ್ಥಳೀಯಾಡಳಿತ ತಕ್ಷಣ ಚರಂಡಿಯ ಹೂಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರವುಗೊಳಿಸಿ ನೀರಿನ ಸರಾಗ ಹರಿವಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಾಂಕ್ರಾಮಿಕ ರೋಗ ಭೀತಿ

ಚರಂಡಿಗಳಲ್ಲಿ ಕಲುಷಿತ ನೀರು ಸರಿಯಾಗಿ ಹರಿದು ಹೋಗದೆ ನಿಲ್ಲುತ್ತಿರುವುದರಿಂದ ಇಡೀ ಪರಿಸರ ದುರ್ನಾತದಿಂದ ಕೂಡಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕೊಳಚೆ ನೀರು ಒಂದೇ ಕಡೆ ನಿಲ್ಲುವುದರಿಂದ ಸೊಳ್ಳೆ ಹಾಗೂ ನೊಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಡೆಂಘೆ, ಮಲೇರಿಯಾ, ಟೈಫಾಯಿಡ್ ಮತ್ತು ಚರ್ಮರೋಗಗಳು ಹರಡುವ ಭೀತಿ ಎದುರಾಗಿದೆ.

ಸಂತೆ ಮಾರುಕಟ್ಟೆ ಮುಂಭಾಗದ ಚರಂಡಿಯಲ್ಲಿ ಕೊಳಚೆ ನೀರು ಹರಿಯುವ ಸಂಬಂಧ ನಾವು ಅನೇಕ ಬಾರಿ ಪುರಸಭೆಯಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಹೆದ್ದಾರಿ ಕಾಮಗಾರಿ ನಿರ್ವಹಿಸುವ ಐಆರ್‌ಬಿ ಗಮನಕ್ಕೂ ತರಲಾಗಿದೆ.

— ಶ್ರೀಧರ್ ಶೇರೆಗಾರ್ ಪುರಸಭೆ ಮಾಜಿ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net