ಮಾದಕ ವಸ್ತು ವ್ಯಕ್ತಿತ್ವ, ಭವಿಷ್ಯವನ್ನೇ ಕೊಲ್ಲುತ್ತದೆ

ಇಂದ್ರಪ್ರಸ್ಥ ಸಭಾಂಗಣದಲ್ಲಿ ಸೇರಿದ್ದ ಉಪನ್ಯಾಸಕರು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಮಾದಕ ವಸ್ತು ವಿರುದ್ಧ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಇಂದ್ರಪ್ರಸ್ಥ ಸಭಾಂಗಣದಲ್ಲಿ ಸೇರಿದ್ದ ಉಪನ್ಯಾಸಕರು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಮಾದಕ ವಸ್ತು ವಿರುದ್ಧ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
Published on
ಬೆಳ್ತಂಗಡಿ: ಮಾದಕ ವಸ್ತುಗಳು ವ್ಯಕ್ತಿಗೆ ಮಾತ್ರವಲ್ಲದೆ ಸಮಾಜ ಹಾಗೂ ದೇಶಕ್ಕೆ ಮಾರಕವಾಗಿದ್ದು ದಿನೇದಿನೆ ಯುವ ಸಮುದಾಯ ಇಂತಹ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಸಂಗತಿ. ಮಾದಕ ವಸ್ತುಗಳು ನಮ್ಮೊಂದಿಗೆ ನಮ್ಮ ವ್ಯಕ್ತಿತ್ವ ಹಾಗೂ ಕುಟುಂಬವನ್ನು ಕೊಲ್ಲುತ್ತದೆ. ಸರಿಯಾದ ಮಾರ್ಗದರ್ಶನ ಮತ್ತು ಸಕಾರಾತ್ಮಕ ಮಾರ್ಗದಲ್ಲಿ ನಡೆದಾಗ ಯುವ ಸಮುದಾಯ ಈ ಸಮಾಜದ ಪ್ರಬಲ ಶಕ್ತಿಯಾಗಿ ಬೆಳೆಯಬಹುದು ಎಂದು ಮಂಗಳೂರು ವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮ ರೆಡ್ಡಿ ಹೇಳಿದರು.
ಉಜಿರೆ ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಎನ್‌ಎಸ್‌ಎಸ್, ಎನ್‌ಸಿಸಿ, ರೋವರ್ಸ್- ರೇಂಜರ್ಸ್ ಘಟಕಗಳು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಬೆಳ್ತಂಗಡಿ ಉಪವಿಭಾಗ ಇವುಗಳ ಸಹಭಾಗಿತ್ವದಲ್ಲಿ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಾಣೆ ವಿರೋಧಿ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ಹಮ್ಮಿಕೊಂಡ ಬೃಹತ್ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಮಾತನಾಡಿ, ಯುವಕರು ಆರೋಗ್ಯ ಪೂರ್ಣ ಜೀವನವನ್ನು ಕಟ್ಟಿಕೊಳ್ಳಬೇಕು. ಹಿರಿಯರು ಮತ್ತು ಪಾಲಕರ ಮಾರ್ಗದರ್ಶನ ಪಡೆದು ಯುವ ಸಮುದಾಯ ಈ ಸಮಾಜ ಮತ್ತು ದೇಶದ ಆಸ್ತಿಗಳಾಗಬೇಕು. ನಕಾರಾತ್ಮಕ ಚಿಂತನೆಗಳಿಂದ ಹೊರಬಂದು ಸಕಾರಾತ್ಮಕ ಯೋಚನೆಯೊಂದಿಗೆ ಮುಂದೆ ಸಾಗಿದಾಗ ನಶಾಮುಕ್ತ ಭಾರತ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದರು.
ಬೆಳ್ತಂಗಡಿ ಗ್ರಾಮಾಂತರ ವಿಭಾಗದ ಪೊಲೀಸ್ ವೃತ್ತ ನಿರೀಕ್ಷಕ ರವಿ ಬಿ.ಎಸ್. ಮಾನತಾಡಿದರು. ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ್ ಪಿ. ಅಧ್ಯಕ್ಷತೆ ವಹಿಸಿದ್ದರು.
ಬೆಳ್ತಂಗಡಿ ಉಪ ವಿಭಾಗ ಪೊಲೀಸ್ ಉಪ ಅಧೀಕ್ಷಕಿ ರೋಹಿಣಿ ಸಿ.ಕೆ. ,ಬೆಳ್ತಂಗಡಿ ಠಾಣೆ ಇನ್‌ಸ್ಪೆಕ್ಟರ್ ಆನಂದ್ ಎಂ., ಸಿಕಂದರ್ ಪಾಷ, ಎಸ್‌ಡಿಎಂನ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಎಚ್. ನಿರೂಪಿಸಿದರು. ಎನ್‌ಸಿಸಿ ನೌಕಾ ವಿಭಾಗದ ಸಬ್ ಲೆಫ್ಟಿನೆಂಟ್ ಹರೀಶ ಶೆಟ್ಟಿ ವಂದಿಸಿದರು.

ಸಾವಿರಾರು ವಿದ್ಯಾರ್ಥಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕಾರ

ಇಂದ್ರಪ್ರಸ್ಥ ಸಭಾಂಗಣದಲ್ಲಿ ಸೇರಿದ್ದ ಉಪನ್ಯಾಸಕರು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಮಾದಕ ವಸ್ತು ವಿರುದ್ಧ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಮಂಗಳೂರು ವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮ ರೆಡ್ಡಿ ಪ್ರತಿಜ್ಞಾ ವಿಧಿ ಬೋಧಿಸಿದರು. ವಿವಿಧ ಜಾಗೃತಿ ಸಂದೇಶಗಳೊಂದಿಗೆ ಉಜಿರೆಯಲ್ಲಿ ಬೃಹತ್ ಜಾಥಾ ನಡೆಯಿತು. ಕಾಲೇಜಿನ ಕಾಲಾ ಕೇಂದ್ರದಿಂದ ಆರಂಭಗೊಂಡು ಉಜಿರೆ ವೃತ್ತದ ವರೆಗೆ ಸಂಚರಿಸಿತು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಹಸಿರು ನಿಶಾನೆ ತೋರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net