ಮಾದಕ ವ್ಯಸನ ವಿರೋಧ ಮತ್ತು ಜಾಗೃತ ಸಮಿತಿಗಳ ಕಾರ್ಯಾಗಾರವನ್ನು ಶಾಸಕ ಸುನೀಲ್ ಕುಮಾರ್ ಉದ್ಘಾಟಿಸಿದರು. ಪ್ರಮುಖರಾದ ಸುಧಾಕರ ಎಚ್.ನಾಯ್ಕ, ವಿಜಯಪ್ರಸಾದ್ ಎಸ್., ಡಾ.ರವಿಪ್ರಸಾದ್ ಹೆಗ್ಡೆ, ಪ್ರಶಾಂತ್ ರಾವ್, ಸಂತೋಷ್ ಕುಮಾರ್ ಬೈಲೂರು ಉಪಸ್ಥಿತರಿದ್ದರು.
ಹೆಬ್ರಿ: ಸಮಾಜದ ಸ್ವಾಸ್ಥೃ ಹಾಳಾಗಲು ಡ್ರಗ್ಸ್ ಕಾರಣವಾಗಿದ್ದು, ದೇಶಾದ್ಯಂತ ಯುವಕರನ್ನು ದುರ್ಬಲರನ್ನಾಗಿಸುವ ಯತ್ನ ನಡೆಯುತ್ತಿದೆ. ಡ್ರಗ್ಸ್ ಸೇವನೆಯಿಂದ ಅಪರಾಧ ಪ್ರಕರಣಗಳ ಸಂಖ್ಯೆ ಗಣನೀಯ ಹೆಚ್ಚುತ್ತಿದ್ದು, ಇದನ್ನು ತಡೆಯಲು ಯುವ ಜನತೆ ಮಾದಕ ವ್ಯಸನಿಯಾಗುವುದಿಲ್ಲ ಎಂಬ ದೃಢ ಸಂಕಲ್ಪ ಕೈಗೊಳ್ಳಬೇಕು ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.
ಹೆಬ್ರಿಯಲ್ಲಿ ಉಡುಪಿ ಜಿಲ್ಲಾ ಪೊಲೀಸ್, ಕಾರ್ಕಳ ಉಪವಿಭಾಗ ಮತ್ತು ಹೆಬ್ರಿ ಪೊಲೀಸ್ ಠಾಣೆ ವತಿಯಿಂದ ಹೆಬ್ರಿ ತಾಲೂಕು ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ವಿರೋಧ ಮತ್ತು ಜಾಗೃತ ಸಮಿತಿಗಳ ಕಾರ್ಯಾಗಾರವನ್ನು ಸೋಮವಾರ ಉದ್ಘಾಟಿಸಿ, ಜಾಗೃತಿ ಫಲಕ ಬಿಡುಗಡೆಗೊಳಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಚ್.ನಾಯ್ಕ, ಕಾರ್ಕಳ ಡಿವೈಎಸ್ಪಿ ವಿಜಯಪ್ರಸಾದ್ ಎಸ್. ಮಾತನಾಡಿದರು. ವೈದ್ಯ ಡಾ.ರವಿಪ್ರಸಾದ್ ಹೆಗ್ಡೆ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಹೆಬ್ರಿ ತಾಪಂ ಇಒ ಪ್ರಶಾಂತ್ ರಾವ್, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಸಂತೋಷ್ ಕುಮಾರ್ ಬೈಲೂರು ಉಪಸ್ಥಿತರಿದ್ದರು. ಹೆಬ್ರಿ ಪಿಎಸ್‌ಐ ಚಂದ್ರ ಎ.ಕೆ. ಪ್ರತಿಜ್ಞಾ ವಿಧಿ ಬೋಧಿಸಿದರು. ಶಿಕ್ಷಕ ಮಂಜುನಾಥ ಕುಲಾಲ್ ಶಿವಪುರ ನಿರೂಪಿಸಿದರು.
ಡ್ರಗ್ಸ್ ವಿಷವರ್ತುಲಕ್ಕೆ ಒಮ್ಮೆ ಬಲಿಯಾದರೆ ಹೊರಬರಲು ಸಾಧ್ಯವಿಲ್ಲ. ಡ್ರಗ್ಸ್ ಸೇವನೆ ತಡೆಗಟ್ಟಲು ಶಾಲಾ ಕಾಲೇಜುಗಳಲ್ಲಿ ಕಮಿಟಿ ರಚಿಸಲಾಗಿದ್ದು, ಡ್ರಗ್ಸ್ ಮಾರಾಟ ಮತ್ತು ಸೇವನೆ ಮಾಡುವವರ ಕುರಿತು ಇಲಾಖೆಗೆ ಶೀಘ್ರ ಮಾಹಿತಿ ನೀಡಬೇಕು.
— ಸುಧಾಕರ ಎಚ್.ನಾಯ್ಕ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ