

ಉಡುಪಿ: ಬೆಂಗಳೂರಿನಿಂದ ಮಂಗಳೂರು, ಉಡುಪಿ ಮಾರ್ಗವಾಗಿ ಕಾರವಾರ, ಮಡಗಾಂವ್ ತಲುಪಲಿರುವ ಬಹುದಿನಗಳ ನಿರೀಕ್ಷಿತ ವಂದೇ ಭಾರತ್ ರೈಲು ನವೆಂಬರ್ 3ನೇ ವಾರದೊಳಗೆ ಸಂಚಾರ ಆರಂಭಿಸಲಿದೆ. ಮಂಗಳೂರಿಗೆ ಬಂದು ಚಾಲನೆ ನೀಡುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಭರವಸೆ ನೀಡಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ದೆಹಲಿಯ ರೈಲ್ವೆ ಭವನದಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಹಾಗೂ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರನ್ನು ಭೇಟಿಯಾದ ಸಂಸದ ಪೂಜಾರಿ, ವಂದೇ ಭಾರತ್ ಘೋಷಿಸಿ ಕರಾವಳಿಯ ರೈಲ್ವೆ ಪ್ರಯಾಣಿಕರಲ್ಲಿ ಇಲಾಖೆಯ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಬಗ್ಗೆ ಹೊಸ ವಿಶ್ವಾಸ ಮೂಡುವಂತಾಗಿದೆ. ರಾಜ್ಯಕ್ಕೆ ಯೋಜನೆ ಜಾರಿ ಮಾಡಿದ್ದಕ್ಕಾಗಿ ಎಲ್ಲ ಪ್ರಯಾಣಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿ ಸಚಿವರಿಬ್ಬರಿಗೂ ಶಾಲು ಹೊದಿಸಿ, ಹೂಗುಚ್ಚ ನೀಡಿ ಅಭಿನಂದಿಸಿದರು.
ಕೊಂಕಣ ರೈಲ್ವೆ ವಿಲೀನಕ್ಕೆ ಬೆಂಬಲ
ಕೊಂಕಣ ರೈಲ್ವೆ ನಿಗಮದಲ್ಲಿ ಆರ್ಥಿಕ ಕೊರತೆಯಿಂದಾಗಿ ರೈಲ್ವೆ ಮಾರ್ಗ ದ್ವಿಪಥಗೊಳಿಸಲು ಹಾಗೂ ಮಾರ್ಗದ ಎಲ್ಲ ರೈಲು ನಿಲ್ದಾಣಗಳ ಮೂಲ ಸೌಕರ್ಯಗಳ ಅಭಿವೃದ್ಧಿ ಮಾಡಲು ಆಗುತ್ತಿಲ್ಲ. ಹೀಗಾಗಿ ಕೇರಳ, ಗೋವಾ, ಕರ್ನಾಟಕ, ಮಹಾರಾಷ್ಟ್ರ ಸರ್ಕಾರದೊಂದಿಗೆ ಸಮನ್ವಯಗೊಳಿಸಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಬೇಕಿದೆ. ಕೂಡಲೇ ಕೇಂದ್ರ ಸರ್ಕಾರ ಈ ವಿಚಾರವಾಗಿ ಮಧ್ಯಪ್ರವೇಶಿಸಬೇಕು. ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಈಗಾಗಲೇ ಸಹಕಾರದ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಿಲೀನದ ಬಗ್ಗೆ ವಿಶೇಷ ಗಮನ ನೀಡುವುದಾಗಿ ಭರವಸೆ ನೀಡಿದರು.
ಇಂಟರ್ ಸಿಟಿ ಬೇಡಿಕೆ
ಚಿಕ್ಕಮಗಳೂರಿನಿಂದ ಬೆಂಗಳೂರು ರೈಲ್ವೆ ಪ್ರಯಾಣಿಕರ ಬೇಡಿಕೆಯಂತೆ ದಿನನಿತ್ಯ ಇಂಟರ್ ಸಿಟಿ ರೈಲ್ವೆಗೂ ಸಹ ಚಾಲನೆ ಕೊಡಬೇಕು ಎಂದು ಸಂಸದ ಕೋಟ ಬೇಡಿಕೆ ಇಟ್ಟರು. ಕೂಡಲೇ ಕ್ರಮ ಜರುಗಿಸುವುದಾಗಿ ಸಚಿವರು ತಿಳಿಸಿದರು. ಚಿಕ್ಕಮಗಳೂರು ಜಿಲ್ಲೆಯ ವಿವಿಧ ನಿಲ್ದಾಣಗಳಲ್ಲಿ ನಡೆಯುತ್ತಿರುವ ಅಂಡರ್ ಪಾಸ್ ಮತ್ತು ಮೇಲ್ಸೇತುವೆ ಕಾಮಗಾರಿಗಳನ್ನು ತ್ವರಿತ ಮುಗಿಸುವಂತೆಯೂ ಸಂಸದ ಕೋಟ ಸಚಿವರಿಬ್ಬರಲ್ಲಿ ಮನವಿ ಮಾಡಿದರು.