ಉಡುಪಿ: ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಬರುವ ಭಕ್ತರಿಗೆ ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರು ವಸ್ತ್ರ ಸಂಹಿತೆ ನಿಯಮ ಜಾರಿಗೊಳಿಸಿದ್ದಾರೆ. ಹೀಗಾಗಿ ಮನಬಂದಂತೆ ಅಥವಾ ಅಸಭ್ಯವಾಗಿ ಬಟ್ಟೆ ಧರಿಸಿ ಬರುವ ಭಕ್ತರಿಗೆ ಇನ್ನು ದೇವರ ದರ್ಶನಕ್ಕೆ ತೊಡಕಾಗಲಿದೆ.
ಪುರುಷರು ಹಾಫ್ ಪ್ಯಾಂಟ್ (ಬಮುರ್ಡಾ) ಅಂಗಿ ಹಾಗೂ ಪ್ಯಾಂಟ್-ಅಂಗಿ ಧರಿಸಿ ಮಠದ ಒಳಗೆ ಪ್ರವೇಶಿಸುವಂತಿಲ್ಲ. ಪಂಚೆ ಧರಿಸಿ ಹೆಗಲಿಗೆ ಶಾಲು ಅಥವಾ ಮಡಿ ವಸ್ತ್ರ ಧರಿಸಿ ಹೆಗಲಿಗೆ ಶಾಲು ಹಾಕಿಕೊಳ್ಳಬೇಕು. ಪ್ಯಾಂಟ್ ಧರಿಸಬಹುದು. ಆದರೆ, ಅಂಗಿಯನ್ನು ಕಡ್ಡಾಯವಾಗಿ ತೆಗೆದು ಹೆಗಲಿಗೆ ಶಾಲು ಹಾಕಿಕೊಳ್ಳಬೇಕು.
ಸ್ತ್ರೀಯರಿಗೂ ಸಹ ವಸ್ತ್ರ ಸಂಹಿತೆ ನಿಯಮ ಅಳವಡಿಸಲಾಗಿದ್ದು, ಹಾಫ್ ಸ್ಕರ್ಟ್ ಅಥವಾ ಬಮುರ್ಡಾ-ಟಿಶರ್ಟ್ ಧರಿಸಿ ಬರುವಂತಿಲ್ಲ. ಯುವತಿಯರು, ಮಹಿಳೆಯರು ಸೀರೆ, ಲಂಗ-ದಾವಣಿ ಅಥವಾ ಚೂಡಿದಾರ್ ಧರಿಸಿ ಶ್ರೀಕೃಷ್ಣನ ದರ್ಶನ ಮಾಡಬಹುದು. ಭಗವಂತನ ದರ್ಶನಕ್ಕೆ ಬರುವಾಗ ಕೃಷ್ಣ ಭಕ್ತರಾಗಿ ಬರಬೇಕು.
ರಾತ್ರಿಯವರೆಗೂ ವಿಸ್ತರಣೆ
ಬೆಳಗ್ಗೆಯಿಂದ ಮಧ್ಯಾಹ್ನ, ಸಾಯಂಕಾಲದಿಂದ ಮತ್ತೆ ಬೆಳಗ್ಗೆಯವರೆಗೂ ಕೃಷ್ಣನ ಪೂಜೆಯೇ ನಡೆಯುತ್ತದೆ. ಮಧ್ಯಾಹ್ನದವರೆಗೆ ಎಂಬ ಪೂಜಾ ನಿಯಮವನ್ನು ರಾತ್ರಿಯವರೆಗೂ ವಿಸ್ತರಿಸಲಾಗಿದೆ. ಶೀರೂರು ಪರ್ಯಾಯದಲ್ಲಿ ಸಾಯಂಕಾಲವೂ ಸಹ ತೊಟ್ಟಿಲು ಪೂಜೆ, ರಾತ್ರಿ ಪೂಜೆ ಹಾಗೂ ವೇದ ಪಾರಾಯಣವೂ ನಡೆಯುತ್ತಿರುತ್ತದೆ. ಹೀಗಾಗಿ ಎಲ್ಲವೂ ಕೃಷ್ಣನ ಪೂಜೆ ಎಂಬ ಭಾವನೆ ಭಕ್ತರಲ್ಲಿ ಉಂಟಾಗಬೇಕು. ಹೀಗಾಗಿ ಮಧ್ವ ಸರೋವರದ ಮೂಲಕ ಪೂರ್ವ ದ್ವಾರದಲ್ಲಿ ಒಳ ಪ್ರವೇಶಿಸುವಾಗ ಪುರುಷರು ಹಾಗೂ ಸ್ತ್ರೀಯರು ಸೂಚಿತ ವಸ್ತ್ರ ಸಂಹಿತೆಯ ನಿಯಮ ಅನುಸರಿಸಬೇಕು. ಕೃಷ್ಣನ ಭಕ್ತರು ಸಹಕರಿಸಬೇಕು ಎಂದು ಶೀರೂರು ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಶ್ರೀಕೃಷ್ಣನ ದರ್ಶನಕ್ಕೆ ಬರುವ ಪುರುಷರು, ಮಹಿಳೆಯರು ಧರಿಸಿ ಬರಬೇಕಾದ ವಸ್ತ್ರ ಸಂಹಿತೆಯ ಚಾರ್ಟ್.