ಡಾ. ಶಿವರಾಮ ಶೆಟ್ಟಿಗೆ ಶೀನಪ್ಪ ಹೆಗ್ಗಡೆ, ಎಸ್​.ಆರ್​. ಹೆಗ್ಡೆ ಪ್ರಶಸ್ತಿ

ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್​.ಆರ್​. ಹೆಗ್ಡೆ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ವಿದ್ವಾಂಸ ಡಾ. ಶಿವರಾಮ ಶೆಟ್ಟಿ.
ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್​.ಆರ್​. ಹೆಗ್ಡೆ ಪ್ರಶಸ್ತಿಗೆ ಆಯ್ಕೆಯಾದ ಹಿರಿಯ ವಿದ್ವಾಂಸ ಡಾ. ಶಿವರಾಮ ಶೆಟ್ಟಿ.
Published on

* ಡಾ. ಬಿ. ಜಗದೀಶ್​ ಶೆಟ್ಟಿ ಮಾಹಿತಿ

* ಜೂ.20ರಂದು ಪುರಸ್ಕಾರ ಪ್ರದಾನ

ಉಡುಪಿ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ವತಿಯಿಂದ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್​.ಆರ್​. ಹೆಗ್ಡೆ ಸ್ಮರಣಾರ್ಥ ನೀಡುವ 2026ನೇ ಸಾಲಿನ ಜಂಟಿ ಪ್ರಶಸ್ತಿಗೆ ಕನ್ನಡ, ತುಳು ಭಾಷೆ, ಸಾಹಿತ್ಯ ಮತ್ತು ಜಾನಪದ ಸಂಶೋಧನಾ ಕ್ಷೇತ್ರದ ಹಿರಿಯ ವಿದ್ವಾಂಸ ಮಂಗಳೂರಿನ ಡಾ. ಶಿವರಾಮ​ ಶೆಟ್ಟಿ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜೂ.20ರಂದು ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಪ್ರಶಸ್ತಿಯು 20 ಸಾವಿರ ರೂ. ನಗದು ಹಾಗೂ ಫಲಕ ಒಳಗೊಂಡಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿಯ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಮಂಗಳೂರು ವಿವಿಯಿಂದ 'ತುಳುನಾಡಿನ ಸಸ್ಯ ಜಾನಪದ' ವಿಷಯದಲ್ಲಿ ಪಿಎಚ್​.ಡಿ ಗಳಿಸಿದ್ದಾರೆ. 1981ರಿಂದ ಮಂಗಳೂರು ವಿಶ್ವವಿದ್ಯಾನಿಲಯದ ಎಸ್​ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ಸಹಾಯಕರಾಗಿ, ಉಪನ್ಯಾಸಕರಾಗಿ, ಪ್ರಾಧ್ಯಾಪಕ ಹಾಗೂ ಸಂಸ್ಥೆಯ ಅಧ್ಯಕ್ಷರಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ 2019ರಲ್ಲಿ ನಿವೃತ್ತರಾಗಿದ್ದಾರೆ.
ಇವರ ಮಾರ್ಗದರ್ಶನದಲ್ಲಿ 10 ವಿದ್ಯಾರ್ಥಿಗಳು ಪಿಎಚ್​.ಡಿ ಗಳಿಸಿದ್ದಾರೆ. ಕನ್ನಡ ಮತ್ತು ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಸಂಬಂಧಿಸಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ  130ಕ್ಕೂ ಅಧಿಕ ಸಂಶೋಧನಾ ಪ್ರಬಂಧ ಮಂಡಿಸಿದ್ದಾರೆ. ಇವರ ಸಂಪಾದಕತ್ವದಲ್ಲಿ 50ಕ್ಕೂ ಅಧಿಕ ಸಂಶೋಧನಾ ಲೇಖನ ಹಾಗೂ 19 ಕೃತಿಗಳು ಪ್ರಕಟಗೊಂಡಿವೆ. ಮಂಗಳೂರು ವಿವಿ ಕನಕದಾಸ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರದ ಸಂಯೋಜಕರಾಗಿ ಹಲವು ಪ್ರಕಟಣೆಗಳನ್ನು ಹೊರತರುವಲ್ಲಿ ಮಹತ್ವದ ಪಾತ್ರ ನಿಭಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net