ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಡಾ. ಎಂ.ಎಸ್​. ಕೃಷ್ಣಮೂರ್ತಿ ಆಯ್ಕೆ

ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಆಯ್ಕೆಯಾದ ಡಾ. ಎಂ.ಎಸ್. ಕೃಷ್ಣಮೂರ್ತಿ.
ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಗೆ ಆಯ್ಕೆಯಾದ ಡಾ. ಎಂ.ಎಸ್. ಕೃಷ್ಣಮೂರ್ತಿ.
Published on: 

* ಮೂಲತ: ಮೈಸೂರಿನ ಹಿರಿಯ ಪುರಾತತ್ವಜ್ಞ

ಉಡುಪಿ: ಉಡುಪಿಯಲ್ಲಿರುವ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ವತಿಯಿಂದ ನೀಡಿವ ಹಾಗೂ ಶ್ರೀಮತಿ ಟಿ. ವಿಮಲಾ ವಿ. ಪೈ ಪ್ರಾಯೋಜಿತ ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿಯ ಆಯ್ಕೆ ಸಮಿತಿಯು 2025ನೇ ಸಾಲಿನ ಪ್ರಶಸ್ತಿಗೆ ಹಿರಿಯ ಪುರಾತತ್ವಜ್ಞ, ಮೂಲತ: ಮೈಸೂರಿನ ಡಾ. ಎಂ.ಎಸ್​. ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ.

ಎಂಎ, ಪಿಎಚ್​.ಡಿ., ಎಪಿಗ್ರಫಿ ಡಿಪ್ಲೊಮಾ ಪದವೀಧರರಾಗಿದ್ದು, ಐದು ದಶಕಗಳಿಗೂ ಹೆಚ್ಚು ಕಾಲ ಇತಿಹಾಸ ಮತ್ತು ಉತ್ಖನನ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಭಾರತೀಯ ದೇವಾಲಯ ವಾಸ್ತುಶಿಲ್ಪ ಮತ್ತು ಶಿಲ್ಪಕಲೆ, ಪ್ರಾಚಿನ ಹಾಗೂ ಮಧ್ಯಕಾಲೀನ ಪುರಾತತ್ವ ಉತ್ಖನನಗಳು ಮತ್ತು ಶಾಸನಗಳ ಅಧ್ಯಯನವು ಆದ್ಯತೆಯ ವಿಶೇಷ ಕ್ಷೇತ್ರವಾಗಿವೆ.

ಇವರ ಮಾರ್ಗದರ್ಶನದಲ್ಲಿ ಹತ್ತು ವಿದ್ಯಾರ್ಥಿಗಳು ಸಂಶೋಧನೆ ನಡೆಸಿ ಪಿಎಚ್​.ಡಿ ಗಳಿಸಿದ್ದಾರೆ. ಹತ್ತಕ್ಕೂ ಹೆಚ್ಚು ಪುಸ್ತಕಗಳು ಮತ್ತು 130ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಈ ಪ್ರಶಸ್ತಿಯನ್ನು ಟಿ.ವಿ. ಮೋಹನದಾಸ ಪೈ ಸ್ಥಾಪಿಸಿದ್ದು, 1 ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಡಿಸೆಂಬರ್​ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ ಎಂದು ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.