ಉಡುಪಿ: ಡಾ. ಶಿವರಾಮ ಕಾರಂತರು ಮಕ್ಕಳೊಂದಿಗೆ ಬೆರೆತು ಅವರನ್ನು ತಿದ್ದಿ-ತೀಡಿ ಅವರ ಭವಿಷ್ಯ ಉಜ್ವಲಗೊಳಿಸಿದ ನಿದರ್ಶನವಿದೆ. ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದ ಅವರು ವಿಜ್ಞಾನ, ಕಲೆ, ಸಾಹಿತ್ಯದ ಸಂಗಮವಾಗಿದ್ದಾರೆ. ರಂಗವಲ್ಲಿಯ ಮೂಲಕ ಮಕ್ಕಳಿಗೆ ಕಾರಂತರನ್ನು ಪರಿಚಯಿಸುವ ಈ ಕಾರ್ಯಕ್ರಮ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಉತ್ತಮ ಅವಕಾಶವಾಗಿದೆ ಎಂದು ಸೋದೆ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಧಾಕೃಷ್ಣ ಎಸ್. ಐತಾಳ್ ಹೇಳಿದರು.
ಉಡುಪಿಯ ಇನ್ನಂಜೆಯಲ್ಲಿರುವ ಎಸ್.ವಿ.ಎಚ್. ಕನ್ನಡ ಮಾಧ್ಯಮ ಪ್ರೌಢಶಾಲೆಯ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ವತಿಯಿಂದ ಸೋಮವಾರ (ಡಿ.22) ಆಯೋಜಿಸಿದ್ದ 'ಮಕ್ಕಳಿಗಾಗಿ ಕಾರಂತರು' ಎಂಬ ರಂಗವಲ್ಲಿಯಲ್ಲಿ ಡಾ.ಕಾರಂತರ ಪರಿಚಯ ಮಾಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನಸಿಕ ಆರೋಗ್ಯ
ಡಾ.ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ಕಲೆ ಮತ್ತು ಸಾಹಿತ್ಯದಿಂದ ಮಾನಸಿಕ ಆರೋಗ್ಯ ಲಭಿಸುತ್ತದೆ. ಅದೊಂದು ಅದ್ಭುತ ಕೊಡುಗೆಯಾಗಿದೆ. ಓದಿನ ಹವ್ಯಾಸದಿಂದ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಜ್ಞಾನಾರ್ಥವಾಗಿ ಸಾಹಿತ್ಯ ಹಾಗೂ ವಿವಿಧ ಪುಸ್ತಕಗಳ ಓದುವಿಕೆಯ ಆಸಕ್ತಿ ಬೆಳೆಸಿಕೊಳ್ಳಬೇಕು. ಅದರಿಂದ ತಮ್ಮಲ್ಲಿರುವ ಕೌಶಲವೂ ವೃದ್ಧಿಯಾಗುತ್ತದೆ ಎಂದರು.
ಮಕ್ಕಳಿಗೆ ಉಪನ್ಯಾಸ
ಟ್ರಸ್ಟ್ನ ಸದಸ್ಯೆ ಹಾಗೂ ರಂಗವಲ್ಲಿಯ ಖ್ಯಾತ ಕಲಾವಿದೆ ಡಾ.ಭಾರತಿ ಮರವಂತೆ ಅವರು ಕಾರಂತರ ಬಾಲ ಪ್ರಪಂಚ, ಪ್ರಾಣಿ ಪ್ರಪಂಚ, ಪಕ್ಷಿಗಳ ಅದ್ಭುತ ಲೋಕ ಹಾಗೂ ಪುಸ್ತಕದಲ್ಲಿರುವ ಇನ್ನಿತರ ಚಿತ್ರಗಳನ್ನು ರಂಗವಲ್ಲಿಯಲ್ಲಿ ಚಿತ್ರಿಸಿದ್ದರು. ಅಲ್ಲದೆ, ಕಾರಂತರ ಕುರಿತಾಗಿ ಉಪನ್ಯಾಸವನ್ನೂ ನೀಡಿದರು.
ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಪ್ರಭು, ನಿವೃತ್ತ ಶಿಕ್ಷಕ ಸತ್ಯಸಾಯಿ ಪ್ರಸಾದ್, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲೆಯ ಮುಖ್ಯೋಪಾಧ್ಯಾಯ ನಟರಾಜ್ ಉಪಾಧ್ಯಾಯ ಸ್ವಾಗತಿಸಿದರು. ಅನಿತಾ ವೀರ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು. ನವೀನ್ ಶೆಟ್ಟಿ ವಂದಿಸಿದರು.
"
ಯಕ್ಷಗಾನ ಕಲೆಯನ್ನು ಪುನರುಜ್ಜೀವನಗೊಳಿಸಿದ ಕೀರ್ತಿ ಡಾ.ಶಿವರಾಮ ಕಾರಂತರಿಗೆ ಸಲ್ಲುತ್ತದೆ. ಅವರ ಬರಹ-ಬದುಕು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಕಾರಂತರು ರಚಿಸಿದ ಕೃತಿಗಳನ್ನು ಓದಿದರೆ ಬದುಕಿಗೆ ಸ್ಫೂರ್ತಿ ಲಭಿಸುತ್ತದೆ. ಕಾಲೇಜು ವಿದ್ಯಾರ್ಥಿಗಳೆಲ್ಲ ಅವರ ಪುಸ್ತಕ ಓದಬೇಕಿದೆ.