

ಉಡುಪಿ: ಪೆಟ್ರೋಲ್ನಲ್ಲಿ ಶೇ.20ಕ್ಕಿಂತ ಅಧಿಕ ಪ್ರಮಾಣದಲ್ಲಿ ಎಥೆನಾಲ್ ಅಂಶ ಸೇರಿಸಬಾರದೆಂದು ಕೇಂದ್ರ ಸರ್ಕಾರವೇ ನಿಯಮ ಜಾರಿಗೊಳಿಸಿ ಎಲ್ಲ ಪೆಟ್ರೋಲಿಯಂ ಕಂಪನಿಗಳಿಗೆ ಸೂಚಿಸಿದೆ. ಆದರೆ, ದುರಾದೃಷ್ಟವೆಂಬಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪೆಟ್ರೋಲ್ನಲ್ಲಿ ಶೇ.30ಕ್ಕಿಂತ ಅಧಿಕ ಎಥೆನಾಲ್ ಇದ್ದು ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಆಧಾರರಹಿತ, ಅನಗತ್ಯ ಆರೋಪ ಮಾಡುತ್ತಿದ್ದಾರೆ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಯಾವುದೇ ಪೇಟ್ರೋಲಿಯಂ ಸಂಸ್ಥೆಯೂ ಪೆಟ್ರೋಲ್ಗೆ ಶೇ. 30ರಷ್ಟು ಎಥೆನಾಲ್ ಬಳಸುತ್ತಿರುವುದಾಗಿ ಸಾರ್ವಜನಿಕವಾಗಿಯೂ ತಿಳಿಸಿಲ್ಲ. ಆದರೂ ಸಹ ಡಿಕೆಶಿ ಹಾಗೂ ಅವರ ಸಚಿವರು ಕೇಂದ್ರ ಸರ್ಕಾರದ ವಿರುದ್ಧ ವ್ಯರ್ಥ ಆರೋಪ ಮಾಡುವ ಕಾಯಂ ಪರಂಪರೆಯನ್ನು ಈ ರೀತಿಯಾಗಿ ಮುಂದುವರಿಸಿದ್ದಾರೆ ಎಂದು ಕಿಡಿ ಕಾರಿದರು.
ಒಂದೊಮ್ಮೆ ಶೇ.20ಕ್ಕಿಂತ ಅಧಿಕ ಎಥೆನಾಲ್ ಮಿಶ್ರಣ ಮಾಡಿದ್ದರೆ ರಾಜ್ಯ ಸರ್ಕಾರಕ್ಕೇ ಅಂತಹ ಪೆಟ್ರೋಲ್ ಪಂಪ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ, ಅಧಿಕಾರವಿದೆ. ಇದು ತಿಳಿದಿದ್ದೂ ಸಹ ರಾಜ್ಯ ಸರ್ಕಾರ ಕೇಂದ್ರವನ್ನು ದೂರುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ದ್ವೇಶ ರಾಜಕಾರಣ ಮಾಡುವುದನ್ನು ಬಿಟ್ಟು ವಾಸ್ತವಿಕ ರಾಜಕಾರಣದತ್ತ ಗಮನ ಕೊಡಲು ಇನ್ನಾದರೂ ಆದ್ಯತೆ ನೀಡಿ ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಆಗ್ರಹಿಸುತ್ತೇನೆ ಎಂದು ಸಂಸದ ಪೂಜಾರಿ ತಿಳಿಸಿದರು.