ನ.22ರ ಬೆಂಗಳೂರು ಸಮಾವೇಶದಲ್ಲಿ ಪಾಲ್ಗೊಳ್ಳಬೇಡಿ

ಉಡುಪಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಡಾ. ಸುಂದರ ನಾಯ್ಕ ಮಾತನಾಡಿದರು. ವಾಸು ನಾಯ್ಕ, ಅನಂತ ಎಸ್​. ನಾಯ್ಕ, ನರಸಿಂಹ ನಾಯ್ಕ, ಕೆ.ಟಿ. ನಾಯ್ಕ, ಭುಜಂಗ ನಾಯ್ಕ ಇದ್ದರು.
ಉಡುಪಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಡಾ. ಸುಂದರ ನಾಯ್ಕ ಮಾತನಾಡಿದರು. ವಾಸು ನಾಯ್ಕ, ಅನಂತ ಎಸ್​. ನಾಯ್ಕ, ನರಸಿಂಹ ನಾಯ್ಕ, ಕೆ.ಟಿ. ನಾಯ್ಕ, ಭುಜಂಗ ನಾಯ್ಕ ಇದ್ದರು.
Published on: 

* ಮರಾಠಿ ಒಕ್ಕೂಟದ ಅಧ್ಯಕ್ಷ ಡಾ. ಸುಂದರ ನಾಯ್ಕ ಆಗ್ರಹ

* ರಾಜ್ಯದ ಮರಾಠಿ ಸಮುದಾಯಕ್ಕೆ ಸ್ಪಷ್ಟನೆ

ಉಡುಪಿ: ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಪರಿಶಿಷ್ಟ ಪಂಗಡದವರಲ್ಲದ ಕುಡುಬಿ ಜನಾಂಗದವರನ್ನು ಸೇರಿಸಿಕೊಂಡು ಬೆಂಗಳೂರಿನಲ್ಲಿ ನ.22ರಂದು ಕರ್ನಾಟಕ ಮರಾಠಿ ಸಂಘ ಬೆಂಗಳೂರು ವತಿಯಿಂದ ಆಯೋಜಿಸಿರುವ ಸಮಾವೇಶಕ್ಕೆ ಸಮುದಾಯದ ಯಾರೂ ಪಾಲ್ಗೊಳ್ಳದಂತೆ ಕರ್ನಾಟಕ ರಾಜ್ಯ ಮರಾಠಿ ಒಕ್ಕೂಟ (ರಿ.) ಮಂಗಳೂರು ಅಧ್ಯಕ್ಷ ಡಾ. ಸುಂದರ ನಾಯ್ಕ ಆಗ್ರಹಿಸಿದರು.

ಉಡುಪಿಯ ಪತ್ರಿಕಾ ಭವನದಲ್ಲಿ ಶನಿವಾರ (ನ.14) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರು ವಿಜಯನಗರದಲ್ಲಿರುವ ಬಂಟ್ಸ್​ ಭವನದಲ್ಲಿ 'ಪಶ್ಚಿಮ ಘಟ್ಟದ ತಪ್ಪಲಿನ ಬುಡಕಟ್ಟು ಮರಾಠಿ ಸಮುದಾಯದ ಸಮಾವೇಶ' ಆಯೋಜಿಸಲಾಗಿದೆ. ಇದು ಪರಿಶಿಷ್ಟ ಪಂಗಡದ ಮರಾಠಿ ಸಮುದಾಯದ ಸಮಾವೇಶವೇ ಅಲ್ಲ. ಈ ಸಮಾವೇಶಕ್ಕೂ ರಾಜ್ಯದ ಮರಾಠಿ ಒಕ್ಕೂಟಗಳಿಗೂ ಸಂಬಂಧವೇ ಇಲ್ಲ. ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ರಾಜ್ಯ ಮರಾಠಿ ಒಕ್ಕೂಟ ಸಂಯೋಜಿತ ಹಾಗೂ ಮರಾಠಿ ಸೇವಾ ಸಂಘಗಳ ಸದಸ್ಯತ್ವ ಪಡೆದ ಸಂಘದ ಸಮಾವೇಶವೂ ಅದಲ್ಲ ಎಂದು ಸ್ಪಷ್ಟನೆ ನೀಡಿದರು.

ನಕಲಿ ಪ್ರಮಾಣಪತ್ರ

ಒಕ್ಕೂಟದ ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಭಾವಿ ಮಾತನಾಡಿ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಕುಡುಬಿ ಜನಾಂಗದವರನ್ನು ನಾವು ದ್ವೇಷಿಸುತ್ತಿಲ್ಲ. ಅಥವಾ ಅವರು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವುದನ್ನೂ ವಿರೋಧಿಸುತ್ತಿಲ್ಲ. ಕುಂದಾಪುರ, ಬೈಂದೂರು ತಾಲೂಕುಗಳಲ್ಲಿರುವ ಒಬಿಸಿ ಸಮುದಾಯಕ್ಕೆ ಸೇರಿದ ಕುಡುಬಿ ಜನಾಂಗದ ನೂರಾರು ಜನರು ಸರ್ಕಾರಿ ಸೌಲಭ್ಯ ಪಡೆಯಲು ಪರಿಶಿಷ್ಟ ಪಂಗಡದ ಮರಾಠಿಗರೆಂದು ನಕಲಿ ಪ್ರಮಾಣ ಪತ್ರ ಪಡೆದಿದ್ದಾರೆ. ಇದು ನೈಜ ಲಾನುಭವಿಗಳಾದ ಮರಾಠಿಗರಿಗೆ ವಂಚನೆ ಮಾಡಿದಂತಾಗಿದೆ. ಇದರಲ್ಲಿ ಅಧಿಕಾರಿಗಳ ಕುಮ್ಮಕ್ಕೂ ಇದೆ. ಈ ವಿಚಾರವಾಗಿ ಕಾನೂನಾತ್ಮಕವಾಗಿ ಹೋರಾಡಲು ಚಿಂತನೆ ನಡೆಸಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ರಾಮಚಂದ್ರ ಕೆಂಭಾವಿ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ರಾಮಚಂದ್ರ ಕೆಂಭಾವಿ ಮಾತನಾಡಿದರು.

ಸಮಾವೇಶದ ಔಚಿತ್ಯವೇನು?

'ಪಶ್ಚಿಮ ಘಟ್ಟದ ತಪ್ಪಲಿನ ಬುಡಕಟ್ಟು ಮರಾಠಿ ಸಮುದಾಯದ ಸಮಾವೇಶ'ವನ್ನು ಬೆಂಗಳೂರಿನಲ್ಲಿ ಮಾಡುತ್ತಿರುವ ಔಚಿತ್ಯವೇನು? ಈ ಸಮಾವೇಶದ ಕುರಿತಂತೆ ಕರ್ನಾಟಕ ಮರಾಠಿ ಸಂಘ ಬೆಂಗಳೂರಿನವರು ರಾಜ್ಯ ಮರಾಠಿ ಒಕ್ಕೂಟದೊಡನೆ ಪೂರ್ವಭಾವಿಯಾಗಿ ಯಾವುದೇ ಚರ್ಚೆ ನಡೆಸದೆ ಏಕಾಏಕಿ ಆಮಂತ್ರಣ ಪತ್ರಿಕೆ ಮುದ್ರಿಸಿ ವಿತರಿಸುತ್ತಿದೆ. ಒಕ್ಕೂಟದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯ ಹಾಗೂ ಸಲಹೆ, ಸೂಚನೆಯನ್ನೂ ಲೆಕ್ಕಿಸದೆ ಸಮಾವೇಶಕ್ಕೆ ಮುಂದಾಗಿದ್ದಾರೆ. ಇದು ಮರಾಠಿ ಸಮುದಾಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಮರಾಠಿ ಸಮುದಾಯದವರು ಯಾರೂ ಈ ಸಮಾವೇಶದಲ್ಲಿ ಪಾಲ್ಗೊಳ್ಳಬಾರದು ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸು ನಾಯ್ಕ, ಉಪಾಧ್ಯಕ್ಷ ಅನಂತ ಎಸ್​. ನಾಯ್ಕ, ಹಿರಿಯ ಸಲಹೆಗಾರ ನರಸಿಂಹ ನಾಯ್ಕ, ಸಂಘಟನಾ ಕಾರ್ಯದರ್ಶಿ ದೇವ ನಾಯ್ಕ, ಉಡುಪಿ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ.ಟಿ. ನಾಯ್ಕ, ಪ್ರಧಾನ ಕಾರ್ಯದರ್ಶಿ ಭುಜಂಗ ನಾಯ್ಕ ಉಪಸ್ಥಿತರಿದ್ದರು.