ಪುರಸಭೆಯಲ್ಲಿ ಶ್ವಾನ ತಾಣ!

 ಬೀದಿನಾಯಿಗಳಿಗೆ ಆಹಾರ ನೀಡುವ ವಲಯಗಳನ್ನು ಗುರುತಿಸಿ ಬೋರ್ಡ್ ಅಳವಡಿಸಿರುವುದು.
ಬೀದಿನಾಯಿಗಳಿಗೆ ಆಹಾರ ನೀಡುವ ವಲಯಗಳನ್ನು ಗುರುತಿಸಿ ಬೋರ್ಡ್ ಅಳವಡಿಸಿರುವುದು.
Published on
ರಾಘವೇಂದ್ರ ಪೈ ಗಂಗೊಳ್ಳಿ ಕುಂದಾಪುರ
ಸಾರ್ವಜನಿಕ ಆರೋಗ್ಯ, ಸುರಕ್ಷತೆ ಹಾಗೂ ಪ್ರಾಣಿ ಕಲ್ಯಾಣದ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕುಂದಾಪುರ ಪುರಸಭೆಯ ಎಲ್ಲ 23 ವಾರ್ಡ್‌ಗಳಲ್ಲೂ ಬೀದಿನಾಯಿಗಳಿಗೆ ಆಹಾರ ನೀಡುವ ವಲಯಗಳನ್ನು ಗುರುತಿಸಲಾಗಿದೆ. ಸಾರ್ವಜನಿಕರು ತಮ್ಮ ಮನೆಗಳಲ್ಲಿ, ಹೋಟೆಲ್‌ಗಳಲ್ಲಿ ಉಳಿದ ಅನ್ನ, ತಿಂಡಿಗಳನ್ನು ಆ ಆಹಾರ ತಾಣಗಳಲ್ಲಿ ತಂದು ಹಾಕಬಹುದು. ಇನ್ನು ಈ ಆಹಾರ ಹಾಕುವ ತಾಣಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಿನ್ನಾಭಿಪ್ರಾಯಗಳೂ ಇವೆ.
ಸಾರ್ವಜನಿಕ ಹಿತಾಸಕ್ತಿ, ಮಕ್ಕಳ ಮತ್ತು ಹಿರಿಯ ನಾಗರಿಕರ ಸುರಕ್ಷತೆ, ಸ್ವಚ್ಛತೆ ಮತ್ತು ಆರೋಗ್ಯದ ವಾನದಂಡಗಳು, ವಾಹನ ಸಂಚಾರದ ಮೇಲೆ ಪರಿಣಾಮ, ಸ್ಥಳೀಯರ ಅಭಿಪ್ರಾಯ, ನಾಯಿಗಳ ವರ್ತನೆ ಹಾಗೂ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗಳಿಗೆ ಧಕ್ಕೆಯಾಗದಂತೆ ಪುರಸಭೆ ಗಮನಹರಿಸಬೇಕಾಗಿದೆ ಎಂಬುದು ಸಾರ್ವಜನಿಕರ ಮನವಿ.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ, ಜಿಲ್ಲಾ ಸಮಿತಿ ನಿರ್ದೇಶನದಂತೆ ಕುಂದಾಪುರ ಪುರಸಭೆಯಿಂದ ತಿಂಗಳ ಹಿಂದೆ ಮೊದಲ ಬಾರಿಗೆ ಐದು ಕಡೆಗಳಲ್ಲಿ ಆಹಾರ ವಲಯ ಆರಂಭಿಸಲಾಗಿತ್ತು. ಫೆರ‌್ರಿ ಪಾರ್ಕ್ ಸಮೀಪ, ಪಶು ಆಸ್ಪತ್ರೆ ಬಳಿ, ನೆಹರೂ ಮೈದಾನ ಹತ್ತಿರ, ಸಂಗಮ್‌ನ ಹಳೆಕೋಟೆ ಬಳಿ ಹಾಗೂ ಕೋಡಿಯಲ್ಲಿ ಬೀದಿನಾಯಿಗಳಿಗೆ ಆಹಾರ ನೀಡುವ ಸ್ಥಳಗಳನ್ನು ಗುರುತಿಸಿ, ಫಲಕಗಳನ್ನು ಅಳವಡಿಸಲಾಗಿತ್ತು. ಅದನ್ನು ಈಗ ಎಲ್ಲ ವಾರ್ಡ್‌ಗಳಿಗೂ ವಿಸ್ತರಿಸಲಾಗಿದ್ದು, 23 ವಾರ್ಡ್‌ಗಳಲ್ಲೂ ಆಹಾರ ತಾಣವನ್ನು ಗುರುತಿಸಲಾಗಿದೆ. ಜಿಲ್ಲಾಮಟ್ಟದ ಸಮಿತಿಯ ನಿರ್ದೇಶನದಂತೆ ಮುಂದಿನ ದಿನಗಳಲ್ಲಿ 2 ಕಡೆಗಳಲ್ಲಿ ಆಹಾರ ತಾಣ ತೆರೆಯಲಾಗುವುದು ಎಂದು ಪುರಸಭೆ ಪರಿಸರ ಅಭಿಯಂತರ ಗುರುಪ್ರಸಾದ್ ವಾಹಿತಿ ನೀಡಿದ್ದಾರೆ.

1,014 ಬೀದಿನಾಯಿಗಳು

ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ 2024ರ ಗಣತಿ ಪ್ರಕಾರ 1,014 ಬೀದಿ ನಾಯಿಗಳಿವೆ. ಅದು ಈಗ ಜಾಸ್ತಿ ಆಗಿರಬಹುದು. ಮುಂದಿನ ವರ್ಷ ಮತ್ತೆ ನಾಯಿಗಳ ಗಣತಿ ನಡೆಯಲಿದೆ. ಈವರೆಗೆ 400ಕ್ಕೂ ಮಿಕ್ಕಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆದಿದೆ. ಈ ಪ್ರಕ್ರಿಯೆ ಪುರಸಭೆಯಿಂದ ನಿರಂತರವಾಗಿ ನಡೆಯುತ್ತಿದೆ.

ಬೀದಿನಾಯಿಗಳಿಗೆ ನಿರ್ದಿಷ್ಟ ತಾಣಗಳಲ್ಲಿ ಆಹಾರ ನೀಡುವುದರಿಂದ ಯಾವ ತೊಂದರೆಯೂ ಆಗದು. ಈ ವಿಚಾರದಲ್ಲಿ ಜನರ ಸಹಕಾರ ಬಹಳ ಮುಖ್ಯ. ಮಕ್ಕಳನ್ನು ಆದಷ್ಟು ಬೀದಿಗೆ ಬಿಡದಂತೆ ಎಚ್ಚರ ವಹಿಸಿದರೆ ಸಾಕು, ಪುರಸಭೆಯಿಂದ ನಿರಂತರವಾಗಿ ಬೀದಿನಾಯಿಗಳನ್ನು ಗುರುತಿಸಿ, ಸಂತಾನ ಶಕ್ತಿ ಹರಣ ಚಿಕಿತ್ಸೆ ನಡೆಸುವ ಮೂಲಕ ಸಂತತಿ ಹೆಚ್ಚಳ ಆಗದಂತೆ ಕ್ರಮ ವಹಿಸಲಾಗುತ್ತಿದೆ.

— ಆನಂದ್ ಜೆ. ಕುಂದಾಪುರ ಪುರಸಭೆ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net