

ಉಡುಪಿ: ಜಿಲ್ಲೆಯಲ್ಲಿ ಭೂ ಮಂಜೂರಾತಿ, ಸರ್ಕಾರಿ ಜಾಗದಲ್ಲಿ ಕಟ್ಟಿದ ಮನೆಗಳ ಸಕ್ರಮಕ್ಕೆ ಇರುವ ಅಡೆತಡೆ ನಿವಾರಣೆಗೆ ಜಿಲ್ಲಾಡಳಿತ ಕೂಡಲೇ ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಉಡುಪಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಬೆಂಗಳೂರಿನ ವಿಧಾನಸೌಧದಲ್ಲಿ ಮಂಗಳವಾರ (ನ.3) ಆಯೋಜಿಸಿದ್ದ ಸಭೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಗಳಿಗೆ ಸಂಬಂಧಿಸಿದಂತೆ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಹಾಗೂ ಉಡುಪಿ ಜಿಲ್ಲೆಯ ಎಲ್ಲ ಶಾಸಕರು ಮತ್ತು ಜಿಲ್ಲಾಡಳಿತದ ಜತೆ ಸುದೀರ್ ಚರ್ಚೆ ನಡೆಸಿ ಮಾತನಾಡಿದರು.
ಬಗರ್ ಹುಕುಂ ಜಮೀನುಗಳ ವಿತರಣೆಯಲ್ಲೂ ವಿಳಂಬ ಆಗುತ್ತಿದೆ. ಗೋಡಂಬಿ ಪ್ಲಾಂಟೇಷನ್ಗಳ ಲೀಸ್ ಅವಧಿ ವಿಸ್ತರಣೆ ಹಾಗೂ ಡೀಮ್ಡ್ ಫಾರೆಸ್ಟ್ ಸರ್ವೆಯಲ್ಲಿನ ಅಡೆತಡೆಗಳ ಕುರಿತಂತೆ ದೂರುಗಳು ಕೇಳಿಬರುತ್ತಿವೆ ಎಂದರು.
ಅಧಿಕಾರಿಗಳ ನಿರ್ಲಕ್ಷ್ಯ
ಕಾರ್ಕಳ ಶಾಸಕ ವಿ.ಸುನೀಲಕುಮಾರ ಮಾತನಾಡಿ, ಜಿಲ್ಲೆಯಲ್ಲಿ ಫಾರ್ಮ್ 94-ಸಿ ಅಡಿಯಲ್ಲಿ ಸರ್ಕಾರಿ ಜಾಗದಲ್ಲಿ ಕಟ್ಟಲಾಗಿರುವ ಮನೆಗಳ ಸಕ್ರಮಕ್ಕೆ ಸಲ್ಲಿಸಿರುವ ಅರ್ಜಿಗಳನ್ನು ಅಧಿಕಾರಿಗಳ ಹಲವು ಕಾರಣ ನೀಡಿ ತಿರಸ್ಕರಿಸುತ್ತಿದ್ದಾರೆ. ಸರ್ಕಾರಿ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡವರೆಲ್ಲ ಬಡವರು. ಒಮ್ಮೆ ಅರ್ಜಿ ತಿರಸ್ಕರಿದರೆ ಜನರು ಮತ್ತೆ ಅರ್ಜಿ ಸಲ್ಲಿಸುವಂತಿಲ್ಲ. ಅದೇ ರೀತಿ ಶಾಸಕರ ನೇತೃತ್ವದ ಸಮಿತಿಗಳು ವಿಲೇ ಮಾಡಿದ ಬಗರ್ ಜಮೀನುಗಳ ಸರ್ವೇ ಕಾರ್ಯದಲ್ಲಿಯೂ ವಿಳಂಬವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತ್ವರಿತ ಕ್ರಮದ ಭರವಸೆ
ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ ಮಾತನಾಡಿ, ಫಾರ್ಮ್ 94-ಸಿ ಅಡಿಯಲ್ಲಿ ಮನೆಗಳ ಸಕ್ರಮಕ್ಕೆ ಆಗುತ್ತಿರುವ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಲಾಗುವುದು ಎಂದರು. ಸಚಿವ ರಿಜ್ವಾನ್ ಸೂಚನೆಯ ಮೇರೆಗೆ ಕಂದಾಯ ಇಲಾಖೆಯ ತಾಂತ್ರಿಕ ಸಮಿತಿಯನ್ನು ಉಡುಪಿ ಜಿಲ್ಲೆಗೆ ಕಳುಹಿಸಿ ಭೂಮಿ ವಿತರಣೆ ಹಾಗೂ ಸರ್ವೇ ಸಂಬಂಧಿತ ಎಲ್ಲ ಸಮಸ್ಯೆಗಳ ಅಧ್ಯಯನ ಮಾಡಿ ಪರಿಹಾರ ಒದಗಿಸಲಾಗುವುದು. ಬಗರ್ ಹುಕಂ ಭೂಮಿ ಮಂಜೂರಿಗೆ ಸಂಬಂಧಿಸಿ ರೀಜನಲ್ ಕಮಿಷನರ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು ನೈಜ ಅರ್ಜಿಗಳನ್ನು ಪರಿಗಣಿಸಲಾಗುವುದು ಎಂದರು.
ವರಾಹಿ ಯೋಜನೆಗೆ ಹೆಚ್ಚುವರಿಯಾಗಿ 17 ಎಕರೆ ಭೂಮಿ ನೀಡಲು ಅವಶ್ಯವಿರುವ ಕ್ರಮ ತ್ವರಿತವಾಗಿ ಕೈಗೊಳ್ಳಲು ಸಭೆ ನಿರ್ಣಯಿಸಿತು..
ಸಭೆಯಲ್ಲಿ ಉಡುಪಿ ಶಾಸಕ ಯಶಪಾಲ್ ಸುವರ್ಣ, ಬೈಂದೂರು ಗುರುರಾಜ ಗಂಟಿಹೊಳೆ, ಕಾಪು ಆಸಕ ಗುರ್ಮೆ ಸುರೇಶ ಶೆಟ್ಟಿ, ವಿಪ ಸದಸ್ಯ ಮಂಜುನಾಥ ಭಂಡಾರಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಪಂ ಸಿಇಒ ಪ್ರತೀಕ್ ಬಾಯಲ್ ಇನ್ನಿತರರು ಉಪಸ್ಥಿತರಿದ್ದರು.
ಕುಂದಾಪುರ ಶಾಸಕ ಕಿರಣಕುಮಾರ ಕೊಡ್ಗಿ ಮಾತನಾಡಿ, ಜಿಲ್ಲೆಯಲ್ಲಿ ಗೋಡಂಬಿ ಪ್ಲಾಂಟೇಷನ್ ಗಳಿಗೆ ನೀಡಲಾಗಿರುವ ಜಮೀನುಗಳ ಲೀಸ್ ಅವಧಿ ಮುಕ್ತಾಯಗೊಂಡಿದೆ. ಅವುಗಳ ನವೀಕರಣ ಮಾಡಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಟಾರಿಯಾ, ಸರ್ಕಾರ ಗೋಡಂಬಿ ಪ್ಲಾಂಟೇಷನ್ಗಳಿಗೆ ಕಡಿಮೆ ದರದಲ್ಲಿ ಭೂಮಿ ಲೀಸ್ ನೀಡುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ನ್ಯಾಯಾಲಯವೂ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ. ಲೀಸ್ ಮೇಲೆ ಭೂಮಿ ಪಡೆಯಲಿಚ್ಛಿಸುವವರು ವಾಣಿಜ್ಯ ದರ ಕೊಟ್ಟು ಪಡೆಯಬಹುದು ಎಂದು ತಿಳಿಸಿದರು.