ವಿಶ್ವಾಸಾರ್ಹತೆ ಪತ್ರಿಕೋದ್ಯಮದ ಶಕ್ತಿ: ಡಾ. ಶುಭಾ

ಮಣಿಪಾಲ ಇನ್​ಸ್ಟಿಟ್ಯೂಟ್​ ಆಫ್​ ಕಮ್ಯುನಿಕೇಶನ್​ ನಿರ್ದೇಶಕಿ ಡಾ. ಶುಭಾ ಎಚ್​.ಎಸ್​. ಪತ್ರಿಕಾ ದಿನಾಚರಣೆ ಉದ್ಘಾಟಿಸಿದರು.
ಮಣಿಪಾಲ ಇನ್​ಸ್ಟಿಟ್ಯೂಟ್​ ಆಫ್​ ಕಮ್ಯುನಿಕೇಶನ್​ ನಿರ್ದೇಶಕಿ ಡಾ. ಶುಭಾ ಎಚ್​.ಎಸ್​. ಪತ್ರಿಕಾ ದಿನಾಚರಣೆ ಉದ್ಘಾಟಿಸಿದರು.
Published on
ಉಡುಪಿ: ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಸಹಿತ ಸಾಕಷ್ಟು ಸುದ್ದಿಗಳು ಹಾಗೂ ಮಾಹಿತಿಗಳು ಎಲ್ಲೆಡೆ ಹರಿದಾಡುತ್ತಿವೆ. ಇಂತಹ ಸಂದರ್ಭದಲ್ಲಿ ಜನರಿಗೆ ಸತ್ಯ ವಿಚಾರವನ್ನು ತಿಳಿಸುವುದು ಪತ್ರಕರ್ತರ ಜವಾಬ್ದಾರಿ. ವಿಶ್ವಾಸಾರ್ಹತೆ ಪತ್ರಿಕೋದ್ಯಮದ ಶಕ್ತಿ ಎಂದು ಮಣಿಪಾಲ ಇನ್​ಸ್ಟಿಟ್ಯೂಟ್​ ಆಫ್​ ಕಮ್ಯುನಿಕೇಶನ್​ ನಿರ್ದೇಶಕಿ ಡಾ. ಶುಭಾ ಎಚ್​.ಎಸ್​. ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ಭವನ ಸಮಿತಿ ಹಾಗೂ ಲೊಂಬಾರ್ಡ್​ ಮೆಮೋರಿಯಲ್​ ಆಸ್ಪತ್ರೆ ಸಹಯೋಗದೊಂದಿಗೆ ಬುಧವಾರ ಐಎಂಎ ಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮಾಧ್ಯಮಗಳು ಮತ್ತು ಪತ್ರಕರ್ತರು ನೀಡುವ ಸುದ್ದಿ ಸತ್ಯಕ್ಕೆ ಹತ್ತಿರವಾಗಿದ್ದಾಗ ಮಾತ್ರ ಸಮಾಜದಲ್ಲಿ ಗೌರವ ಉಳಿಯುತ್ತದೆ. ಮಾಹಿತಿ ತಂತ್ರಜ್ಞಾನದ ಅಬ್ಬರದ ನಡುವೆಯೂ, ಮಾಧ್ಯಮಗಳು ಸತ್ಯವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು. ಸಮಾಜದ ಸಮಸ್ಯೆಗಳನ್ನು ಮುನ್ನೆಲೆಗೆ ತರುವುದು ಪತ್ರಕರ್ತರ ಕರ್ತವ್ಯ. ವ್ಯವಸ್ಥೆಯ ಲೋಪದೋಷಗಳನ್ನು ಸಮಾಜದ ಮುಂದೆ ಇಡುವುದು ಪತ್ರಿಕೋದ್ಯಮದ ಪ್ರಮುಖ ಕೆಲಸವಾಗಿದೆ ಎಂದರು.
ಮಹಿಳಾ ದೃಷ್ಟಿಕೋನ ಬದಲಾಗಲಿ
ಸುದ್ದಿಗಳಲ್ಲಿ ಮಹಿಳೆಯರನ್ನು ಹೆಚ್ಚಾಗಿ ಸಂತ್ರಸ್ತರಾಗಿ, ರಾಜಕಾರಣಿಗಳಾಗಿ ಅಥವಾ ಕ್ರೀಡಾಪಟುಗಳಾಗಿ ಮಾತ್ರ ಬಿಂಬಿಸಲಾಗುತ್ತದೆ. ಆದರೆ ನೀತಿ ನಿರೂಪಕಿ, ವಿಷಯ ತಜ್ಞೆ ಮಹಿಳೆಯರನ್ನು ಸಂದರ್ಶಿಸುವ ಅಥವಾ ಅವರ ಅಭಿಪ್ರಾಯ ಪಡೆಯುವ ಪ್ರಮಾಣ ಅತ್ಯಂತ ವಿರಳವಾಗಿದೆ. ಮಾಧ್ಯಮ ರಂಗದಲ್ಲಿ ಮಹಿಳಾ ಪತ್ರಕರ್ತರ ಸಂಖ್ಯೆ ತೀರಾ ಕಡಿಮೆ ಇದೆ. ಮಹಿಳಾ ಪತ್ರಕರ್ತೆಯರು ವರದಿ ಮಾಡುವಾಗ ಅವರ ದೃಷ್ಟಿಕೋನ ಮತ್ತು ಜನರೊಂದಿಗೆ ಸಂವಹನ ನಡೆಸುವ ವಿಧಾನ ವಿಭಿನ್ನವಾಗಿರುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯಗಳ ವರದಿಯು ಕೇವಲ ಘಟನಾಧಾರಿತ ವರದಿಯಾಗಿ ಉಳಿಯಬಾರದು. ಬದಲಿಗೆ, ಇಂತಹ ಘಟನೆಗಳು ಯಾಕೆ ಹೆಚ್ಚುತ್ತಿವೆ ಎಂಬ ಬಗ್ಗೆ ಅಂಕಿ-ಅಂಶಗಳೊಂದಿಗೆ ಸಮಗ್ರ ವರದಿ ಮಾಡಿದರೆ ಮಾತ್ರ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವ್ಯಂಗ್ಯಚಿತ್ರಕಾರ ಜೇಮ್ಸ್​ ವಾಜ್​ ಅವರಿಗೆ ಸಂಘದ ವತಿಯಿಂದ ಪತ್ರಿಕಾ ದಿನದ ಗೌರವ ಪ್ರದಾನ ಮಾಡಿ ಸನ್ಮಾನಿಸಲಾಯಿತು. ಬೆಂಗಳೂರಿನ ಡಾ. ಬಿ.ಆರ್​. ಅಂಬೇಡ್ಕರ್​ ತಂತ್ರಜ್ಞಾನ ಸಂಸ್ಥೆಯ ಆಡಳಿತಾಧಿಕಾರಿ ಎಸ್​. ಎಚ್​. ಸಂತೋಷ್​ಕುಮಾರ್​ ಪತ್ರಕರ್ತರ ಒತ್ತಡ ನಿರ್ವಹಣೆ ಮತ್ತು ವ್ಯಕ್ತಿತ್ವ ವಿಕಸನ ಎಂಬ ವಿಷಯದ ಕುರಿತು ದಿಕ್ಸೂಚಿ ಭಾಷಣ ಮಾಡಿದರು. ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಅಂಕಗಳೊಂದಿಗೆ ತೇರ್ಗಡೆ ಹೊಂದಿದ ಪತ್ರಕರ್ತರ ಸಾಧಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಭಟ್​ ಕುರ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ ಹಾಗೂ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಮಂಜುನಾಥ್​, ರಾಜ್ಯ ಸಮಿತಿ ಸದಸ್ಯ ಆಸ್ಟ್ರೊ ಮೋಹನ್​, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್​ ಕುಮಾರ್​ ಶಿರೂರು ಮತ್ತು ಪತ್ರಿಕಾ ಭವನ ಸಮಿತಿ ಸಹ ಸಂಚಾಲಕ ಗಣೇಶ್​ ಕಲ್ಯಾಣಪುರ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್​ ಪೋಲ್ಯ ಸ್ವಾಗತಿಸಿ, ಕೋಶಾಧಿಕಾರಿ ಹರೀಶ್​ ಕುಂದರ್​ ವಂದಿಸಿದರು. ಪತ್ರಕರ್ತೆ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net