ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿದರು. ಕೆ.ಉದಯಕುಮಾರ್ ಶೆಟ್ಟಿ, ಶ್ರೀಕಾಂತ್ ನಾಯಕ್, ದಿನಕರ್ ಶೆಟ್ಟಿ ಹೆರ್ಗ ಇದ್ದರು.
Published on:
Copied
Follow Us
* ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ
* ಬಿಜೆಪಿ ಜಿಲ್ಲಾ ಕಾರ್ಯ ತಂಡದ ಸಭೆ
ಉಡುಪಿ: ರಾಜ್ಯದಲ್ಲಿಯೂ ಸಹ ಎಸ್ಐಆರ್ ಅಭಿಯಾನ ಘೋಷಣೆಯಾಗಲಿದೆ. ಪಕ್ಷದ ಬಿಎಲ್-2 ಜವಾಬ್ದಾರಿ ಹೊಂದಿರುವ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡು ಅರ್ಹ ಮತದಾರರ ಹೆಸರು ಪಟ್ಟಿಯಿಂದ ತಪ್ಪಿ ಹೋಗದಂತೆ ನಿಗಾ ವಹಿಸಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಕರೆ ನೀಡಿದರು.
ಉಡುಪಿಯ ಕಡಿಯಾಳಿಯಲ್ಲಿರುವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ (ಮೇ 8) ಆಯೋಜಿಸಿದ್ದ ಜಿಲ್ಲಾ ಕಾರ್ಯ ತಂಡದ ಸಭೆಯಲ್ಲಿ ಮಾತನಾಡಿದರು.
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮಾತನಾಡಿದರು.
ಕಾರ್ಯಕರ್ತರಿಗೆ ಅಭಿಮಾನ
ಪಂಚ ರಾಜ್ಯಗಳ ಚುನಾವಣೆಯಲ್ಲಿ ಪಶ್ಚಿಮ ಬಂಗಾಲ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ದೇಶದ ಎಲ್ಲ ಕಾರ್ಯಕರ್ತರಿಗೂ ಪಕ್ಷದ ಸಾಧನೆ ಕುರಿತು ಹುಮ್ಮಸ್ಸು, ಅಭಿಮಾನ ತಂದಿದೆ. ಅಲ್ಲಿನ ಫಲಿತಾಂಶವೂ ಸಹ ಕರ್ನಾಟಕದಲ್ಲಿ ಮುಂದೆ ನಡೆಯಲಿರುವ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.
ಯಶಸ್ವಿಯಾಗಿ ಮಂಡಲ ಪ್ರಶಿಕ್ಷಣ ವರ್ಗ ಪೂರೈಸಿರುವ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕಿ ಬಾತ್' ವೀಕ್ಷಣೆಯಲ್ಲಿ ಶೇ.100 ಪ್ರಗತಿ ದಾಖಲಿಸಿದ ಮಂಡಲಗಳನ್ನು ಇದೇ ವೇಳೆ ಅಭಿನಂದಿಸಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್ ಪಕ್ಷದ ಮುಂದಿನ ಕಾರ್ಯ ಚಟುವಟಿಕೆಗಳ ಮಾಹಿತಿ ನೀಡಿದರು.
ಸಭೆಯಲ್ಲಿ ಪಕ್ಷದ ಪ್ರಮುಖರು, ಜಿಲ್ಲಾ ಪದಾಧಿಕಾರಿಗಳು, ರಾಜ್ಯ ಮೋರ್ಚಾ ಮತ್ತು ಜಿಲ್ಲಾ ಪ್ರಕೋಷ್ಠಗಳ ಪದಾಧಿಕಾರಿಗಳು, ಸಂಯೋಜಕರು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ್ ಶೆಟ್ಟಿ ಹೆರ್ಗ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಶ್ರೀನಿಧಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಡಿ.ಬಿ. ವಂದಿಸಿದರು.
ಚಿತ್ರದುರ್ಗದಲ್ಲಿ ಬಿಎಸ್ವೈ ಅಭಿಮಾನೋತ್ಸವ
ರಾಜ್ಯ ಕಂಡ ಧೀಮಂತ ನಾಯಕ, ಬಿಜೆಪಿ ಹಿರಿಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಾರ್ವಜನಿಕ ಜೀವನದ 50 ಸಂವತ್ಸರಗಳ ಸಾರ್ಥಕ ಸೇವೆಯ ನೆನಪಿಗಾಗಿ ಮೇ 9ರಂದು ಚಿತ್ರದುರ್ಗದಲ್ಲಿ 'ಬಿಎಸ್ವೈ ಅಭಿಮಾನೋತ್ಸವ' ಆಯೋಜಿಸಲಾಗಿದೆ. ಈ ಸಂಭ್ರಮದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ಸೂಚಿಸಿದರು.
"
ಉಡುಪಿ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಮೇ 23 ಮತ್ತು 24ರಂದು ನಡೆಯಲಿದೆ. ಪಕ್ಷದ ಎಲ್ಲ ಅಪೇಕ್ಷಿತರು ಕಡ್ಡಾಯವಾಗಿ ಭಾಗವಹಿಸಿ ಅಗತ್ಯ ಮಾಹಿತಿ, ಮಾರ್ಗದರ್ಶನ ಪಡೆಯಬೇಕು.
— ಕೆ.ಉದಯಕುಮಾರ್ ಶೆಟ್ಟಿ. ಪ್ರಶಿಕ್ಷಣ ವರ್ಗದ ಮಂಗಳೂರು ವಿಭಾಗದ ಸಂಚಾಲಕ.