ಉಡುಪಿ : ಜಿಲ್ಲೆಯ ನಾಗರಿಕರು ಸುಶಿಕ್ಷಿತರಿದ್ದು, ಶಾಂತಿಪ್ರಿಯರಾಗಿದ್ದಾರೆ. ಶೈಕ್ಷಣಿಕವಾಗಿ ಉಡುಪಿ ಮುಂಚೂಣಿಯಲ್ಲಿದ್ದು, ಜಿಲ್ಲಾ ಪೊಲೀಸರು ರಾಷ್ಟ್ರಮಟ್ಟದಲ್ಲಿ ಮಾದರಿ ಪೊಲೀಸ್ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಅಪರಾಧ ಪ್ರಕರಣಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸಬೇಕು ಎಂದು ಪೊಲೀಸ್ ಮಹಾನಿರೀಕ್ಷಕ ಹಾಗೂ ಮಹಾನಿರ್ದೇಶಕ ಡಾ. ಎಂ.ಎ.ಸಲೀಂ ಸೂಚಿಸಿದರು.
ಸೋಮವಾರ ಕರಾವಳಿ ಕಾವಲು ಪಡೆ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಕೋಮುಸೌಹಾರ್ದತೆಗೆ ಪೊಲೀಸರು ಕೈಗೊಂಡ ಕ್ರಮ ಶ್ಲಾನೀಯ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಸೊತ್ತು ಕಳವು ಪ್ರಕರಣಗಳನ್ನು ಪತ್ತೆ ಹಚ್ಚುವ ಜೊತೆಗೆ ತಡೆಗಟ್ಟುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.
ಜಿಲ್ಲಾ ಎಸ್.ಪಿ. ಆಗಿದ್ದ ವೇಳೆ ಪರಿಚಯಿಸಿದ್ದ ಆಸರೆ ಕಾರ್ಯಕ್ರಮ ಪ್ರಸ್ತುತ ಕರ್ನಾಟಕ ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗಿದೆ. ಸಮುದಾಯ ಪೊಲೀಸ್ ವ್ಯವಸ್ಥೆಗಳಾದ ಮನೆ-ಮನೆಗೆ ಪೊಲೀಸ್, ಸ್ಪಂದನ, ಮಕ್ಕಳ ಸಹಾಯವಾಣಿಗಳನ್ನೂ ಸಹ ಬಲಪಡಿಸಬೇಕು ಎಂದರು.
ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಮಿತ್ ಸಿಂಗ್, ಆಂತರಿಕ ಭದ್ರತಾ ವಿಭಾಗ ಪೊಲೀಸ್ ಮಹಾನಿರೀಕ್ಷಕ ವಿಕಾಸ್ ಕುಮಾರ್ ವಿಕಾಸ್, ಎಸ್ಪಿ ಹರಿರಾಮ್ ಶಂಕರ್ ಉಪಸ್ಥಿತರಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್. ನಾಯ್ಕ್ ಸ್ವಾಗತಿಸಿ, ವಂದಿಸಿದರು.