ಜಿಲ್ಲೆಯಲ್ಲಿ ಆಗದಿರಲಿ ಮೇವಿನ ಕೊರತೆ

ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ  ಜಿಲ್ಲಾ ಮಟ್ಟದ ಮೇವು ಅಭಿವೃದ್ಧಿ ಕಾರ್ಯಪಡೆ ಸಮಿತಿ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಕ್ಷಮಾ ಪಾಟೀಲ್​, ಚಂದ್ರಶೇಕರ್​ ನಾಯ್ಕ್​ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಉಡುಪಿಯ ಡಿಸಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಮೇವು ಅಭಿವೃದ್ಧಿ ಕಾರ್ಯಪಡೆ ಸಮಿತಿ ಸಭೆಯಲ್ಲಿ ಸ್ವರೂಪಾ ಟಿ.ಕೆ. ಮಾತನಾಡಿದರು. ಕ್ಷಮಾ ಪಾಟೀಲ್​, ಚಂದ್ರಶೇಕರ್​ ನಾಯ್ಕ್​ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Published on

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ

* ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿ ಸಮಿತಿ ಸಭೆ

ಉಡುಪಿ: ಪ್ರಸ್ತುತ ಮಳೆಗಾಲದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತಿದ್ದು, ಬರ ಪರಿಸ್ಥಿತಿಯ ಸಾಧ್ಯತೆಯಿದೆ. ಜಿಲ್ಲೆಯಲ್ಲಿ 42 ವಾರಗಳಿಗೆ ಮಾತ್ರ ಸಾಕಾಗುವಷ್ಟು ಮೇವು ಲಭ್ಯವಿದೆ. ಹೀಗಾಗಿ ಈಗಿನ ಮಳೆಯ ಹವಾಮಾನಕ್ಕೆ ಅನುಗುಣವಾಗಿ ಹಾಗೂ ಮುಂಬರುವ ದಿನಗಳಲ್ಲಿ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಬೇಕಿದೆ. ತನ್ನಿಮಿತ್ತ ಬೇಡಿಕೆಗೆ ಅನುಗುಣವಾಗಿ ಅಲ್ಪಾವಧಿ ಹಾಗೂ ದೀರ್ಘಾವಧಿ ತಳಿಯ ಮೇವು ಉತ್ಪಾದಿಸಲು ರೈತರಿಗೆ ಹುಲ್ಲು ಬೆಳೆಯಲು ಅನುಕೂಲವಾಗುವಂತೆ ಈಗಿನಿಂದಲೇ ಕಾರ್ಯಪ್ರವೃತ್ತರಾಗಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ (ಆ.1) ಆಯೋಜಿಸಿದ್ದ ಜಿಲ್ಲಾ ಮಟ್ಟದ ಮೇವು ಅಭಿವೃದ್ಧಿ ಕಾರ್ಯಪಡೆ ಸಮಿತಿ ಸಭೆ ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

ಮೇವು ಬೆಳೆ ಪ್ರದೇಶ ವಿಸ್ತರಿಸಿ

ಜಿಲ್ಲೆಯಲ್ಲಿ ಇತ್ತೀಚಿನ ಜಾನುವಾರು ಗಣತಿಯಂತೆ 1,96,905 ರಾಸುಗಳು, 3,178 ಆಡು&ಕುರಿಗಳಿವೆ. ಇತರ ತಾಲೂಕುಗಳಿಗಿಂತ ಕುಂದಾಪುರ ಹಾಗೂ ಬೈಂದೂರು ತಾಲೂಕಿನಲ್ಲಿ ಮೇವು ಪ್ರಮಾಣ ಕಡಿಮೆ ಇದೆ. ಕುಂದಾಪುರ ತಾಲೂಕಿನಲ್ಲಿಯೇ ಹೆಚ್ಚು ರಾಸುಗಳಿದ್ದು, ಆ ಭಾಗದಲ್ಲಿ ಮೇವಿನ ಬೇಡಿಕೆ ಉಂಟಾಗುವ ಸಾಧ್ಯತೆಯಿದೆ. ಹುಲ್ಲಿನ ಕೊರತೆ ನೀಗಿಸಲು ಹಾಗೂ ಸುಸ್ಥಿರ ಮೇವು ಉತ್ಪಾದನೆಗಾಗಿ ಮೇವು ಬೆಳೆ ಪ್ರದೇಶ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಜಾನುವಾರುಗಳಿಗೆ ಚಿಕಿತ್ಸೆ

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಎಂ.ಸಿ. ರೆಡ್ಡಪ್ಪ ಮಾತನಾಡಿ, ಜಿಲ್ಲೆಯ ಕಾಪು, ಉಡುಪಿ, ಬೈಂದೂರು, ಹೆಬ್ರಿ, ಕುಂದಾಪುರ, ಕಾರ್ಕಳ ಹಾಗೂ ಬ್ರಹ್ಮಾವರ ತಾಲೂಕು ಮತ್ತು ಉಡುಪಿ ಪಾಲಿಕ್ಲಿನಿಕ್​ನಲ್ಲಿ ತಲಾ ಒಂದರಂತೆ ಒಟ್ಟು 8 ಪಶು ಸಂಜೀವಿನಿ ಆಂಬುಲೆನ್ಸ್​ಳಿವೆ. ಈ ವಾಹನಗಳ ಮೂಲಕ 2026ರ ಏಪ್ರಿಲ್​ನಿಂದ ಜೂನ್​ವರೆಗೆ ಒಟ್ಟು 2,500 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ತೊಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್​, ಕೃಷಿ ಇಲಾಖೆಯ ಉಪನಿರ್ದೇಶಕ ಚಂದ್ರಶೇಖರ್​ ನಾಯ್ಕ್​ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪಾಳುಬಿದ್ದ ಭೂಮಿಯಲ್ಲಿ ಹುಲ್ಲು ಬೆಳೆಸಿ

ದಪ್ಪ ದಂಟಿನ ಮೇವುಗಳನ್ನು ಕತ್ತರಿಸಿ ನೀಡಿದರೆ ಮೇವು ಪೋಲಾಗದಂತೆ ಸಂರಕ್ಷಿಸಿ ಉಪಯೋಗಿಸಬಹುದು. ಇಲಾಖೆ ವತಿಯಿಂದ ಸಹಾಯಧನದಡಿ ಮೇವು ಕತ್ತರಿಸುವ ಯಂತ್ರ ವಿತರಿಸುವ ಕುರಿತು ರೈತರಿಗೆ ಪಶು ಸಖಿಯರಿಂದ ಅರಿವು ಮೂಡಿಸಿ. ಹುಲ್ಲು ಬೆಳೆಯಲು ಸಾಮಾಜಿಕ ಅರಣ್ಯ ಪ್ರದೇಶ, ಮೀಸಲು ಅರಣ್ಯಗಳ ಅಂಚಿನಲ್ಲಿ, ಗೋಮಾಳ, ಪಾಳು ಬಿದ್ದ ಭೂಮಿಯನ್ನು ಗುರುತಿಸಿ. ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳಲ್ಲಿ ನೀರಿನ ಲಭ್ಯತೆಗೆ ಅನುಗುಣವಾಗಿ ಮೇವು ಬೆಳೆಸಲು ಸೊಸೈಟಿಗಳ ಮೂಲಕ ರೈತರಿಗೆ ನೀಡಲು ಕ್ರಮವಹಿಸಿ ಎಂದು ಡಿಸಿ ಸೂಚಿಸಿದರು.

"

ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಕೆಎಂಎಫ್​ ವತಿಯಿಂದ ಸಹಾಯಧನದೊಂದಿಗೆ 22,670 ಕೆಜಿ ಹೈಬ್ರಿಡ್​ ಜೋಳ, 3,778 ಮಿನಿ ಕಿಟ್​ ಹಾಗೂ 3991.57 ಮೆ.ಟನ್​ ರಾಸು ಮೇವು ವಿತರಿಸಲಾಗಿತ್ತು. ಮುಂಬರುವ ದಿನಗಳಲ್ಲಿ ಬರ ಘೋಷಣೆಯಾದರೆ ತಾಲೂಕುಗಳಲ್ಲಿ ಮೇವಿನ ಕಿಟ್​ ವಿತರಿಸುವಾಗ ಜಾನುವಾರುಗಳ ಸಂಖ್ಯೆ, ನೀರಾವರಿ ಸೌಲಭ್ಯ ಪರಿಗಣಿಸಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಬೇಕು.

— ಸ್ವರೂಪಾ ಟಿ.ಕೆ. ಜಿಲ್ಲಾಧಿಕಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net