ಉಡುಪಿ ಜಿಲ್ಲೆಯ ರೋಗಿಗಳಿಗೆ ಶೇ.75 ಹಾಸಿಗೆ ಮೀಸಲಿಡಿ

(ಸಾಂದರ್ಭಿಕ ಚಿತ್ರ).
(ಸಾಂದರ್ಭಿಕ ಚಿತ್ರ).
Published on

* ಖಾಸಗಿ ಆಸ್ಪತ್ರೆಗಳಿಗೆ ಡಿಸಿ ಸ್ವರೂಪಾ ಸೂಚನಾಪತ್ರ

* ಆಯುಷ್ಮಾನ್​ ಭಾರತ ಸೂಕ್ತ ಅನುಷ್ಠಾನಕ್ಕೆ ಆದೇಶ

ಉಡುಪಿ: ಜಿಲ್ಲೆಯಲ್ಲಿರುವ ಎಲ್ಲ ಪ್ರಮುಖ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ಒಳರೋಗಿಯಾಗಿ ದಾಖಲಾಗುವ ಜನರಿಗೆ 'ಆಯುಷ್ಮಾನ್​ ಭಾರತ' ಯೋಜನೆ (ಎಬಿ-ಎಆರ್​ಕೆ)ಯಡಿ ಸಮರ್ಪಕ ಚಿಕಿತ್ಸೆ ನೀಡುವಂತೆ ಹಾಗೂ ಜಿಲ್ಲೆಯ ರೋಗಿಗಳಿಗೆ ಯೋಜನೆಯಡಿ  ಶೇ.75ರಷ್ಟು ಹಾಸಿಗೆ ಮೀಸಲಿಡಬೇಕು ಎಂದು ಖಾಸಗಿ ಆಸ್ಪತ್ರೆಯ ಮುಖ್ಯಸ್ಥರಿಗೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನಾಪತ್ರ ನೀಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಕೆಎಂಸಿ ಮಣಿಪಾಲ ಸೇರಿದಂತೆ ಹಲವಾರು ಖಾಸಗಿ ಆಸ್ಪತ್ರೆಗಳಲ್ಲಿ 'ಆಯಷ್ಮಾನ್​ ಭಾರತ' ಯೋಜನೆಯಡಿ ಸಮರ್ಪಕ ಚಿಕಿತ್ಸೆ ಸಿಗುತ್ತಿಲ್ಲ ಎಂದು ಇತ್ತೀಚೆಗೆ ಡಿಸಿ ಕಚೇರಿಯಲ್ಲಿ ನಡೆದಿದ್ದ ದಿಶಾ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಮಿತಿಯ ಸದಸ್ಯರು ಚರ್ಚೆ ನಡೆಸಿದ್ದರು.

ಡಿಸಿ ಸೂಚನೆ ಏನು?

ಆಯಷ್ಮಾನ್​ ಭಾರತ ಯೋಜನೆಯಡಿ ಹೃದಯ ರೋಗ, ಕ್ಯಾನ್ಸರ್​, ನ್ಯೂರೋ ಸರ್ಜರಿ, ಎನ್​ಐಸಿಯು ಸೇರಿದಂತೆ ವಿವಿಧ ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದು ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಜನರಿಗೆ ವರದಾನವಾಗಲಿದೆ. ಆಸ್ಪತ್ರೆಯಲ್ಲಿ ಯೋಜನೆಯಡಿ ಶೇ.25 ಹಾಸಿಗೆ ಮೀಸಲಿಡಲಾಗಿದೆ. ಇದರಲ್ಲಿ ಶೇ.60ರಷ್ಟು ಅನ್ಯ ಜಿಲ್ಲೆಯ ರೋಗಿಗಳಿಗೆ ಲಭಿಸುತ್ತಿದ್ದು ಉಡುಪಿ ಜಿಲ್ಲೆಯವರಿಗೆ ಶೇ.40 ಮಾತ್ರ ಲಭಿಸುತ್ತಿದೆ. ಹೀಗಾಗಿ ಉಡುಪಿ ಜಿಲ್ಲೆಯ ರೋಗಿಗಳಿಗೆ ಶೇ.75ರಷ್ಟು ಹಾಸಿಗೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನಾ ಪತ್ರದಲ್ಲಿ ಡಿಸಿ ಉಲ್ಲೇಖಿಸಿದ್ದಾರೆ.

ಸಹಾನುಭೂತಿ ತೋರಿ

ಯೋಜನೆಯಡಿ ಒಳರೋಗಿಯಾಗಿ ದಾಖಲಾಗುವ ಯಾವುದೇ ಜಿಲ್ಲೆಯ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಿ ಅವರಿಗೆ ಸೂಕ್ತ ನ್ಯಾಯ ಒದಗಿಸಬೇಕು. ಅಲ್ಲದೆ,  ರೋಗಿಗಳೊಂದಿಗೆ ವೈದ್ಯರು ಹಾಗೂ ಸಿಬ್ಬಂದಿ ಉತ್ತಮ ಬಾಂಧವ್ಯ ಹೊಂದಬೇಕು. ಅವರೊಂದಿಗೆ ಸಹಾನುಭೂತಿಯಿಂದ ವರ್ತಿಸಬೇಕು. ಈಗಾಗಲೇ ಅನೇಕ ಖಾಸಗಿ ಆಸ್ಪತ್ರೆಗಳ ವಿರುದ್ಧ ಈ ವಿಚಾರವಾಗಿ ದೂರುಗಳು ಬಂದಿವೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
"

ಕಳೆದ ವಾರ ನನ್ನ ಅಧ್ಯಕ್ಷತೆಯಲ್ಲಿ ನಡೆದಿದ್ದ ದಿಶಾ ಸಭೆಯಲ್ಲಿ ಆಯುಷ್ಮಾನ್​ ಭಾರತ ಯೋಜನೆಯಡಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗದಿರುವ ಕುರಿತು ಗಂಭೀರ ಚರ್ಚೆ ನಡೆದಿತ್ತು. ಅಲ್ಲದೆ, ದಿಶಾ ಸಮಿತಿಯ ಸದಸ್ಯರೂ ಸಹ ಖಾಸಗಿ ಆಸ್ಪತ್ರೆಗಳಲ್ಲಿ ಆಗುತ್ತಿರುವ ಸನಸ್ಯೆ ಕುರಿತು ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದ್ದರು. ಇದೀಗ ಉಡುಪಿ ಡಿಸಿ ಸ್ವರೂಪಾ ಅವರು ಯೋಜನೆಯಡಿ ನೇಮಕವಾದ ಆರೋಗ್ಯ ಮಿತ್ರರೊಂದಿಗೆ ಖಾಸಗಿ ಆಸ್ಪತ್ರೆಯ ಸ್ಯಾಮ್ಕೊ ಅವರು ಸರಿಯಾಗಿ ಚರ್ಚಿಸಿ ಆಯುಷ್ಮಾನ್​ ಭಾರತ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿರುವುದು ಸೂಕ್ತ ಕ್ರಮವಾಗಿದೆ.

— ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net