ಯಾತ್ರಾರ್ಥಿ ಟ್ವೀಟ್​ಗೆ ಜಿಲ್ಲಾಡಳಿತ ಸ್ಪಂದನೆ; ಕೊಲ್ಲೂರು ದೇವಸ್ಥಾನದ ಪಾರ್ಕಿಂಗ್​ ಆವರಣ ಸ್ವಚ್ಛ

 ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಾಹನ ನಿಲುಗಡೆ ಆವರಣ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಾಹನ ನಿಲುಗಡೆ ಆವರಣ
Published on
ಉಡುಪಿ: ಯಾತ್ರಿಕರೊಬ್ಬರ ದೂರಿಗೆ ಸ್ಪಂದಿಸಿದ ಜಿಲ್ಲಾಡಳಿತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವಾಹನ ನಿಲುಗಡೆ ಆವರಣದಲ್ಲಿದ್ದ ಕಸ ಮತ್ತು ಪ್ಲಾಸ್ಟಿಕ್​ ತ್ಯಾಜ್ಯವನ್ನು 24 ಗಂಟೆಯೊಳಗೆ ತೆರವುಗೊಳಿಸಿ ಪರಿಸರವನ್ನು ಸ್ವಚ್ಛಗೊಳಿಸಿದೆ.
ಇತ್ತೀಚೆಗೆ ಕೊಲ್ಲೂರು ದೇವಸ್ಥಾನಕ್ಕೆ ಆ. 4ರಂದು ಭೇಟಿ ನೀಡಿದ್ದ ಹೈಕೋರ್ಟ್​ ವಕೀಲ ಕುಂಭಾಶಿಯ ಅಮಿತ್​ ಶೆಟ್ಟಿ ಎಂಬುವವರು ದೇವಸ್ಥಾನದ ತೋಪ್ಲುಕಟ್ಟೆ ಬಳಿ ಇರುವ ವಾಹನ ಪಾರ್ಕಿಂಗ್​ ಸ್ಥಳದಲ್ಲಿ ಪ್ಲಾಸ್ಟಿಕ್​ ಬಾಟಲಿಗಳು, ತ್ಯಾಜ್ಯ ಮತ್ತು ಗಿಡಗಂಟಿಗಳು ತುಂಬಿರುವುದನ್ನು ಕಂಡು ಕಳವಳ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್​ ಮೂಲಕ ಫೋಟೋ ಸಹಿತ ಮಾಹಿತಿ ಹಂಚಿಕೊಂಡಿದ್ದು, "ಇದು ಕೋಟ್ಯಂತರ ಭಕ್ತರ ಭಾವನೆಗೆ ಸಂಬಂಧಿಸಿದ ವಿಷಯ. ಅಧಿಕಾರಿಗಳು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕ ಹಿತಾಸಕ್ತಿಗಾಗಿ ಕೋರ್ಟ್​ ಮೆಟ್ಟಿಲೇರಬೇಕಾಗುತ್ತದೆ ಎಂದು ಎಚ್ಚರಿಸಿದ್ದರು. ಜೊತೆಗೆ ಡಿಸಿ ಮತ್ತು ಸ್ಥಳಿಯ ಶಾಸಕರಿಗೆ ಟ್ಯಾಗ್​ ಮಾಡಿದ್ದರು.
ಅಧಿಕಾರಿಗಳಿಂದ ತ್ವರಿತ ಸ್ಪಂದನೆ
ಈ ದೂರಿನ ಗಂಭೀರತೆಯನ್ನು ಮನಗಂಡ ಉಡುಪಿ ಜಿಲ್ಲಾಧಿಕಾರಿಗಳು ಹಾಗೂ ಬೈಂದೂರು ಕ್ಷೇತ್ರದ ಶಾಸಕರು ತಕ್ಷಣವೇ ಸೂಕ್ತ ಕ್ರಮಕ್ಕೆ ಸೂಚನೆ ನೀಡಿದ್ದರು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಆಗಸ್ಟ್​ 5 ರಂದು ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಪಾರ್ಕಿಂಗ್​ ಆವರಣದಲ್ಲಿದ್ದ ಪ್ಲಾಸ್ಟಿಕ್​ ಬಾಟಲಿಗಳು, ತ್ಯಾಜ್ಯ ಹಾಗೂ ಗಿಡಗಂಟಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಿ ಸ್ಥಳವನ್ನು ಸ್ವಚ್ಛಗೊಳಿಸಿದ್ದಾರೆ.
ಪಾರ್ಕಿಂಗ್​ ಪ್ರದೇಶದಲ್ಲಿ ದಿನನಿತ್ಯ ಶೇಖರಣೆಯಾಗುವ ಘನತ್ಯಾಜ್ಯವನ್ನು ಆಯಾ ದಿನವೇ ತೆಗೆದು ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಕೊಲ್ಲೂರು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್​ ಕುಮಾರ್​ ಶೆಟ್ಟಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net