ಉಜಿರೆ ವಿದ್ಯುತ್ ಉಪಕೇಂದ್ರಕ್ಕೆ ವಿಘ್ನ

 ಪೂರ್ಣಗೊಳ್ಳದ ಉಜಿರೆ ವಿದ್ಯುತ್ ಉಪಕೇಂದ್ರ.
ಪೂರ್ಣಗೊಳ್ಳದ ಉಜಿರೆ ವಿದ್ಯುತ್ ಉಪಕೇಂದ್ರ.
Published on
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಉಜಿರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ 33/11 ಕೆವಿ ವಿದ್ಯುತ್ ಉಪಕೇಂದ್ರ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಅನುಮತಿ ದೊರಕದ ಕಾರಣ ಅಡ್ಡಿ ಉಂಟಾಗಿದೆ.
ಉಜಿರೆಯಲ್ಲಿ 33/11 ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು 2025ರ ಮಾ.17ರಂದು ಗುತ್ತಿಗೆ ಆದೇಶ ನೀಡಲಾಗಿತ್ತು. ಸರ್ಕಾರಿ ಜಮೀನಿನಲ್ಲಿ ಕೆಲವೊಂದು ಮರ-ಗಿಡ ತೆರವುಗೊಳಿಸಲು ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಇದ್ದ ಕಾರಣ ನ.21ರಂದು ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಪ್ರಕ್ರಿಯೆ ಮುಂದುವರಿಯದ ಕಾರಣ ಮಾರ್ಚ್ 16ರಂದು ಲೋಕಾರ್ಪಣೆಗೊಳ್ಳಬೇಕಿದ್ದ ವಿದ್ಯುತ್ ಉಪ ಕೇಂದ್ರದ ಮುಖ್ಯ ಟವರ್ ಸ್ಥಾಪನೆ ಕೆಲಸ ಪೂರ್ಣವಾಗದೆ ಬಾಕಿಯಾಗಿದೆ.
ಕಳೆದ ಮೂರು ವರ್ಷಗಳಿಂದ ಉಜಿರೆಯ ನಿನ್ನಿಕಲ್ಲು ಎಂಬಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಿಸುವ ಬಗ್ಗೆ ಸಾಕಷ್ಟು ಪೂರ್ವ ತಯಾರಿ ನಡೆದಿದ್ದವು. ನಿನ್ನಿಕಲ್ಲು ಎಂಬಲ್ಲಿ 0.96 ಎಕರೆ ಸ್ಥಳದಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಿಸಲು ಸ್ಥಳ ಗುರುತಿಸಿ, ಇದಕ್ಕೆ ಸಂಬಂಧಪಟ್ಟ ನಿಗದಿತ ಶುಲ್ಕವನ್ನು ಎರಡು ವರ್ಷದ ಹಿಂದೆ ಪಾವತಿಸಲಾಗಿದೆ.

ಗುಣಮಟ್ಟದ ವಿದ್ಯುತ್ ಪೂರೈಕೆಗೆ ಸಮಸ್ಯೆ:

ಉಜಿರೆಗೆ ಪ್ರತ್ಯೇಕ ವಿದ್ಯುತ್ ಉಪಕೇಂದ್ರ ವ್ಯವಸ್ಥೆ ಇಲ್ಲದ ಕಾರಣ ಉಜಿರೆ ಪ್ರದೇಶದಲ್ಲಿ ವಿದ್ಯುತ್ ಹೊರೆ ಹೆಚ್ಚಿ ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಾಗುತ್ತಿಲ್ಲ. ಬೇಸಿಗೆಯಲ್ಲಿ ಪಂಪ್‌ಗಳು ಚಾಲೂ ಆಗುವ ಕಾರಣ ಅಧಿಕ ಒತ್ತಡ ಉಂಟಾಗಿ ತಂತಿಗಳು ಕಡಿದು ಬೀಳುವುದು, ಪರಿವರ್ತಕಗಳಲ್ಲಿ ಫ್ಯೂಸ್ ಹೋಗುವುದು, ಓವರ್ ಲೋಡ್, ರೋಸ್ಟರ್, ಪವರ್ ಕಟ್ ಸಮಸ್ಯೆಗಳಿಂದ ಗ್ರಾಹಕರು ಕಂಗಲಾಗಿದ್ದಾರೆ.
ಉಜಿರೆ ಶಾಖಾ ಕಚೇರಿ ವ್ಯಾಪ್ತಿಯಲ್ಲಿ ಉಜಿರೆ ಮತ್ತು ಬೆಳಾಲು ವಿದ್ಯುತ್ ಫೀಡರ್‌ಗಳಿವೆ. ಇದರಲ್ಲಿ ಉಜಿರೆ ನಗರ ಫೀಡರ್ ಆಗಿದ್ದರೆ, ಬೆಳಾಲು ಗ್ರಾಮಾಂತರ ಫೀಡರ್ ಆಗಿದೆ. ಇಲ್ಲಿಗೆ ಬೆಳ್ತಂಗಡಿಯಿಂದ ವಿದ್ಯುತ್ ಪೂರೈಕೆ ಆಗುತ್ತಿದ್ದು ಸಮಸ್ಯೆಗಳು ನಿರಂತರವಾಗಿ ಮುಂದುವರಿಯುತ್ತಿವೆ. 24 ಕೋಟಿ ರೂ. ಮೊತ್ತದ ಈ ಯೋಜನೆಗೆ 110 ಕೆವಿ ಕರಾಯ ವಿದ್ಯುತ್ ಸಬ್‌ಸ್ಟೇಷನ್‌ನಿಂದ ಸಂಪರ್ಕ ಆಗಬೇಕಿದ್ದು, 231 ಸ್ಪನ್ ಪೋಲ್ ಮತ್ತು 211 ಸಂಖ್ಯೆಯ ಟವರ್‌ಗಳು ನಿರ್ಮಾಣವಾಗಬೇಕಿದೆ. 136 ಸಂಚಯ 11ಮೀ. ಸ್ಪನ್ ಪೋಲ್, 91 ಟವರ್‌ಗಳ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಮುಖ್ಯ ಟವರ್ ನಿರ್ಮಾಣವಾಗದೆ ಸಂಪರ್ಕ ಸಾಧ್ಯವಾಗಿಲ್ಲ.


ಬೇಸಿಗೆಯಲ್ಲಿ ಲೋಡ್‌ನಿಂದ ಸಂಕಷ್ಟ

ಬೆಳ್ತಂಗಡಿ ತಾಲೂಕಿನ ಪ್ರಮುಖ ಪೇಟೆಯಾದ ಉಜಿರೆ ಪರಿಸರಕ್ಕೆ ಗುಣಮಟ್ಟದ ವಿದ್ಯುತ್ ಪೂರೈಕೆ ಅತ್ಯಗತ್ಯ. ಇಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು ಇದ್ದು ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಹಾಗೂ ಸುತ್ತಮುತ್ತಲ ಗ್ರಾಮದ ವಿದ್ಯುತ್ ಗ್ರಾಹಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಬೇಸಿಗೆ ಕಾಲದಲ್ಲಿ ಈ ಸಮಸ್ಯೆ ಉಲ್ಬಣಗೊಳ್ಳುತ್ತಿದೆ. ಉಜಿರೆ ವ್ಯಾಪ್ತಿಯಲ್ಲಿ ಕೆಲ ಕಾರ್ಖಾನೆಗಳು ಇದ್ದು ಅವುಗಳಿಗೂ ಗುಣಮಟ್ಟದ ವಿದ್ಯುತ್ ಅತ್ಯಗತ್ಯ. ಈ ಕಾರಣದಿಂದ ಇಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆ ಶೀಘ್ರ ನಡೆಯಬೇಕಿದೆ.

ಉಜಿರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಿದ್ಯುತ್ ಉಪಕೇಂದ್ರದ ಕಾಮಗಾರಿ ನನೆಗುದಿಗೆ ಬಿದ್ದಿರುವ ಕುರಿತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ಗಮನಕ್ಕೆ ತರಲಾಗಿದೆ. ಅರಣ್ಯ ಇಲಾಖೆಯಿಂದ ಅಡ್ಡಿಯಾಗುತ್ತಿರುವ ಕುರಿತು ಅವರು ತಿಳಿಸಿದ್ದು, ಅನುಮತಿ ದೊರೆತ ಕೂಡಲೇ ಕಾಮಗಾರಿ ಪುನರಾರಂಭಿಸುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net