ಖಾಸಗಿ ಆಸ್ಪತ್ರೆಯಲ್ಲೂ ಲಭಿಸಿಲಿ ಆಯುಷ್ಮಾನ್​ ಸೇವೆ

ಉಡುಪಿಯ ಜಿಪಂ ಸಭಾಭವನದಲ್ಲಿ ನಡೆದ ದಿಶಾ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಯಶ್​ಪಾಲ್​ ಸುವರ್ಣ, ಗುರುರಾಜ್​ ಗಂಟಿಹೊಳೆ, ಎ. ಕಿರಣ್​ ಕುಮಾರ್​ ಕೊಡ್ಗಿ, ಗುರ್ಮೆ ಸುರೇಶ್​ ಶೆಟ್ಟಿ, ಡಾ. ಮಂಜುನಾಥ್​ ಭಂಡಾರಿ, ಸ್ವರೂಪಾ ಟಿ.ಕೆ., ಪ್ರತೀಕ್​ ಬಾಯಲ್​ ಇದ್ದರು.
ಉಡುಪಿಯ ಜಿಪಂ ಸಭಾಭವನದಲ್ಲಿ ನಡೆದ ದಿಶಾ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಯಶ್​ಪಾಲ್​ ಸುವರ್ಣ, ಗುರುರಾಜ್​ ಗಂಟಿಹೊಳೆ, ಎ. ಕಿರಣ್​ ಕುಮಾರ್​ ಕೊಡ್ಗಿ, ಗುರ್ಮೆ ಸುರೇಶ್​ ಶೆಟ್ಟಿ, ಡಾ. ಮಂಜುನಾಥ್​ ಭಂಡಾರಿ, ಸ್ವರೂಪಾ ಟಿ.ಕೆ., ಪ್ರತೀಕ್​ ಬಾಯಲ್​ ಇದ್ದರು.
Published on

* ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

* ದಿಶಾ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು

ಉಡುಪಿ: ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಸರ್ಕಾರ ಅನೇಕ ಯೋಜನೆ ಹಾಗೂ ಕಾರ್ಯಕ್ರಮ ಜಾರಿಗೆ ತಂದಿದೆ. ಅವು ಅವಶ್ಯವಿರುವವರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಆಯುಷ್ಮಾನ್​ ಆರೋಗ್ಯ ಕರ್ನಾಟಕ ಯೋಜನೆಯಡಿ ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಿದಾಗ ರೋಗಿಗಳಿಗೆ ಅಗತ್ಯ ಚಿಕಿತ್ಸಾ ನೆರವು ಸಿಗುವಂತೆ ನೋಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಉಡುಪಿಯ ಜಿಪಂನ ಡಾ. ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ಶನಿವಾರ (ಮೇ 2) ಆಯೋಜಿಸಿದ್ದ ಉಡುಪಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಮಾತನಾಡಿದರು.

ವಾರದೊಳಗೆ ಸಭೆ ನಡೆಸಿ

ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್​ ಆರೋಗ್ಯ ಸೇವೆಯಡಿ ರೋಗಿಗಳಿಗೆ ಚಿಕಿತ್ಸಾ ನೆರವು ದೊರಕುತ್ತಿಲ್ಲ ಎಂಬ ದೂರು ಪದೇಪದೆ ಕೇಳಿಬರುತ್ತಿದೆ. ಅವರಿಗೆ ಅಗತ್ಯ ಸೌಲಭ್ಯ ಸಿಗುವಂತಾಗಲು ಕೋ-ಆರ್ಡಿನೇಟರ್​ ನೇಮಕ ಮಾಡಿದ್ದರೂ ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಜಿಲ್ಲಾಸ್ಪತ್ರೆಯಿಂದ ರೆಫರಲ್​ ಮಾಡಿದ ರೋಗಿಗಳಿಗೆ ಚಿಕಿತ್ಸೆ ನೀಡಲು ಮಣಿಪಾಲ್​ ಖಾಸಗಿ ಆಸ್ಪತ್ರೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ರಾಜ್ಯದ ನಿರ್ದೇಶಕರಿಗೆ ಪತ್ರ ಬರೆಯಬೇಕು. ಈ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳನ್ನೊಳಗೊಂಡಂತೆ ವಾರದೊಳಗಾಗಿ ಸಭೆ ಕರೆಯಬೇಕು ಎಂದರು.

ನೋಟಿಸ್​ ನೀಡಿ

ಬ್ರಹ್ಮಾವರ ತಾಲೂಕಿನಲ್ಲಿ ಇಎಸ್​ಐ ಆಸ್ಪತ್ರೆಗೆ 2.5 ಕೋಟಿ ರೂ. ಮಂಜೂರಾಗಿದೆ. ಅನುಷ್ಠಾನ ತ್ವರಿತಗತಿಯಲ್ಲಿ ನಡೆದು ಫಲಾನುಭವಿಗಳಿಗೆ ಲಾಭ ದೊರಕಬೇಕು. ಅದರ ಪ್ರಗತಿಗೆ ಸಂಬಂಧಿಸಿ ಉತ್ತರ ಕೊಡಬೇಕಿದ್ದ ಅಧಿಕಾರಿ ಇಂದಿನ ಸಭೆಯಲ್ಲಿ ಗೈರಾಗಿರುವುದು ಅಸಮಾಧಾನ ತಂದಿದೆ. ಅವರಿಗೆ ಕಾರಣ ಕೇಳಿ ನೋಟೀಸ್​ ನೀಡಬೇಕು ಎಂದು ಸಂಸದ ಕೋಟ ಸೂಚಿಸಿದರು.

ಬಿಎಸ್​ಎನ್​ಎಲ್ ನೆಟ್​ವರ್ಕ್​ ಸಮಸ್ಯೆ

ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಬಿಎಸ್​ಎನ್​ಎಲ್​ ನೆಟ್​ವರ್ಕ್​ ಸಮಸ್ಯೆ ಹೆಚ್ಚುತ್ತಿದೆ. ಈಗಾಗಲೇ 196 ಟವರ್​ ಕಾರ್ಯನಿರ್ವಹಿಸುತ್ತಿದ್ದು ಅವುಗಳಲ್ಲಿ 115 ಟವರ್​ 4-ಜಿ ಗೆ ಉನ್ನತಿಕರಿಸಲಾಗಿದೆ. ವಿದ್ಯುತ್​ ಕಡಿತವಾದಾಗ ನೆಟ್​ವರ್ಕ್​ ಲಭ್ಯವಾಗುತ್ತಿಲ್ಲ. ಹೀಗಾಗಿ ಅವುಗಳಿಗೆ ಅಗತ್ಯವಿರುವ ಬ್ಯಾಟರಿ ಅಳವಡಿಕೆ ಕಾರ್ಯ ತ್ವರಿತ ಕೈಗೊಳ್ಳಬೇಕು. ಈಗಾಗಲೇ 80 ಟವರ್​ಗಳಿಗೆ 46 ಹೊಸ ಬ್ಯಾಟರಿ ಅಳವಡಿಸಲಾಗಿದ್ದು, ಉಳಿದವುಗಳಿಗೂ ಕೂಡಲೇ ಅಳವಡಿಸಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಪೂಜಾರಿ ಸೂಚಿಸಿದರು.

ವಿವಿಧ ವಿಷಯ ಚರ್ಚೆ

ಜಲ್​ ಜೀವನ್​ ಮಿಷನ್​ ಯೋಜನೆ, ಬಹುಗ್ರಾಮ ಕುಡಿಯುವ ನೀರು ಯೋಜನೆ, ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಘನತ್ಯಾಜ್ಯ ವಿಲೇವಾರಿ ಹಾಗೂ ಈ ವಿಚಾರವಾಗಿ ಪಿಡಿಒಗಳ ಜವಾಬ್ದಾರಿ ಕುರಿತು ಚರ್ಚೆ ನಡೆಯಿತು. ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ಹಾಗೂ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯು ಉತ್ತಮ ಫಲಿತಾಂಶ ಸಾಧಿಸಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಪಾಲ್ಕರು ಹಾಗೂ ಇಲಾಖೆಯ ಅಧಿಕಾರಿಗಳನ್ನು ಸಭೆಯಲ್ಲಿ ಪ್ರಶಂಸಿಸಲಾಯಿತು.
ಸಭೆಯಲ್ಲಿ ಶಾಸಕರಾದ ಯಶ್​ಪಾಲ್​ ಸುವರ್ಣ, ಗುರುರಾಜ್​ ಗಂಟಿಹೊಳೆ, ಎ. ಕಿರಣಕುಮಾರ್​ ಕೊಡ್ಗಿ, ಗುರ್ಮೆ ಸುರೇಶ್​ ಶೆಟ್ಟಿ, ವಿಪ ಸದಸ್ಯ ಡಾ. ಮಂಜುನಾಥ್​ ಭಂಡಾರಿ, ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಜಿಪಂ ಸಿಇಒ ಪ್ರತೀಕ್​ ಬಾಯಲ್​, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಸಹಾಯಕ ಕಮಿಷನರ್ ರಶ್ಮಿ, ಡಿಎಫ್​ಒ ರುಥ್ರೇನ್​ ಪಿ., ವೈಲ್ಡ್​ಲೈಫ್ ನ ಡಿಎಫ್​ಒ ಶಿವರಾಮ್​ ಎಂ. ಬಾಬು, ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.

ತಿಂಗಳೊಳಗೆ ಗ್ಯಾಸ್​ ಸಂಪರ್ಕ ನೀಡಿ 

ಮನೆ ಮನೆಗೆ ಎಲ್​ಪಿಜಿ (ಗ್ಯಾಸ್​) ಸಂಪರ್ಕ ನೀಡುವ ಕಾಮಗಾರಿಯನ್ನು ಅದಾನಿ ಕಂಪನಿ ವತಿಯಿಂದ ಕೈಗೊಳ್ಳಲಾಗಿತ್ತು. 10 ವರ್ಷವಾದರೂ ಮುಗಿದಿಲ್ಲ. ಎಂದು ಖೇದ ವ್ಯಕ್ತಪಡಿಸಿದ ಸಂಸದ ಕೋಟ, ಮುಂದಿನ ಜೂನ್​ ತಿಂಗಳ ಒಳಗಾಗಿ ಗ್ಯಾಸ್​ ಪೈಪ್​ಲೈನ್​ ಕಾಮಗಾರಿ ಮುಗಿಸಿ ಸಾರ್ವಜನಿಕರಿಗೆ ಅದರ ಸಂಪರ್ಕ ಒದಗಿಸಬೇಕು ಎಂದರು. ಪ್ರಧಾನಮಂತ್ರಿ ಗ್ರಾಮ ಸಡಕ್​ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲೆಯ ಕುಂದಾಪುರ ಹಾಗೂ ಬೈಂದೂರು ಕ್ಷೇತ್ರಕ್ಕೆ ಒಟ್ಟು 9 ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು, ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಂಡು ಪೂರ್ಣಗೊಳಿಸಬೇಕು. ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದರು.

ರೈಲು ನಿಲ್ದಾಣ ರಸ್ತೆ ಅಗಲೀಕರಣಕ್ಕೆ ಪ್ರಸ್ತಾವನೆ ಕೊಡಿ

ಕೊಂಕಣ ರೈಲ್ವೆಗೆ ನೀರು ಸರಬರಾಜು ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಬೇಕು. ಈಗಾಗಲೇ ನಗರಸಭೆಯಿಂದ ರೈಲ್ವೆ ನಿಲ್ದಾಣ ಹಾಗೂ ವಸತಿ ಗೃಹಗಳಿಗೆ ನೀರು ಪೂರೈಸಲಾಗುತ್ತಿದೆ. ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್​ ವ್ಯವಸ್ಥೆ ಸಮರ್ಪಕವಾಗಿಲ್ಲ. ಮಳೆಗಾಲದಲ್ಲಿ ವಾಹನಗಳ ನಿಲುಗಡೆಗೆ ತೊಂದರೆ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ಸೂಕ್ತ ಕ್ರಮ ವಹಿಸಬೇಕು. ರೈಲ್ವೆ ನಿಲ್ದಾಣ ಸಂಪರ್ಕದ ಪ್ರಸ್ತುತ ಇರುವ ರಸ್ತೆಯ ಅಗಲೀಕರಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು ಪ್ರಸ್ತಾವನೆ ಕಳುಹಿಸಿಕೊಡಬೇಕು. ಅದರೊಂದಿಗೆ ಬದಲಿ ರಸ್ತೆ ವ್ಯವಸ್ಥೆಗೂ ಕ್ರಮ ವಹಿಸಬೇಕು ಎಂದು ಸಂಸದ ಕೋಟ ಸೂಚಿಸಿದರು.
"

ಕುಸುಮ್​-ಬಿ ಯೋಜನೆಯಡಿ ರೈತರ ಜಮೀನಿಗೆ ಪಂಪ್​ಸೆಟ್​ ಅಳವಡಿಕೆ ಪ್ರಕ್ರಿಯೆ ಕುಂಠಿತವಾಗಿದೆ. ಯೋಜನೆಯಡಿ ಜಿಲ್ಲೆಗೆ ಕೇಂದ್ರದಿಂದ 20 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಕೂಡಲೇ ಅನುಷ್ಠಾನ ಮಾಡಬೇಕು. ಅದಕ್ಕೆ ಅಗತ್ಯವಿರುವ ಭೂಮಿಯ ಸಮಸ್ಯೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಬಗೆಹರಿಸಬೇಕು.

— ಕೋಟ ಶ್ರೀನಿವಾಸ ಪೂಜಾರಿ. ಉಡುಪಿ ಸಂಸದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net