ಮುದ್ರಾಧಾರಣೆಯಿಂದ ವ್ಯಾಧಿಗಳು ದೂರ

ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಶ್ರೀಗಳು ಭಕ್ತರಿಗೆ ತಪ್ತಮುದ್ರಾಧಾರಣೆ ಮಾಡಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಶ್ರೀಗಳು ಭಕ್ತರಿಗೆ ತಪ್ತಮುದ್ರಾಧಾರಣೆ ಮಾಡಿದರು.
Published on
ಉಜಿರೆ: ಶಯನೀ ಏಕಾದಶಿಯಂದು ಗುರುಗಳಿಂದ ಮುದ್ರಾಧಾರಣೆ ಮಾಡಿಸಿಕೊಳ್ಳುವುದರಿಂದ ನಮ್ಮ ಸಮಸ್ತ ದೈಹಿಕ, ಶಾರೀರಿಕ ವ್ಯಾಧಿ, ಪಾಪಕರ್ಮಗಳು ದೂರವಾಗುವುದು. ಶ್ರೀ ಮಹಾವಿಷ್ಣು ಯೋಗ ನಿದ್ರೆಗೆ ತೆರಳುವ ಪುಣ್ಯ ದಿನದಂದು ಸುದರ್ಶನ ಹವನದಲ್ಲಿ ಮಹಾವಿಷ್ಣುವಿನ ಶಂಖ ಮತ್ತು ಚಕ್ರ ಚಿಹ್ನೆಗಳನ್ನು ಹೋಮಾಗ್ನಿಯಲ್ಲಿ ಅಭಿಮಂತ್ರಿಸಿ ಎರಡೂ ತೋಳುಗಳಲ್ಲಿ ಧರಿಸುವುದರಿಂದ ನಮ್ಮೆಲ್ಲ ಪಾಪಕರ್ಮಗಳೂ ಭಸ್ಮವಾಗುವುದೆಂಬ ನಂಬಿಕೆಯಿದೆ ಎಂದು ಸುಬ್ರಹಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಹೇಳಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ಶನಿವಾರ ತಪ್ತ ಮುದ್ರಾಧಾರಣೆಯಲ್ಲಿ ಭಕ್ತರಿಗೆ ಮುದ್ರಾಧಾರಣೆ ನೆರವೇರಿಸಿ ಮಾತನಾಡಿದರು. ಕ್ಷೇತ್ರದ ವತಿಯಿಂದ ಶ್ರೀಗಳನ್ನು ಸ್ವಾಗತಿಸಲಾಯಿತು. ಶ್ರೀಪತಿ ಎಳಚಿತ್ತಾಯ ಸುದರ್ಶನ ಹವನ ಧಾರ್ಮಿಕ ವಿಧಿ ನೆರವೇರಿಸಿದರು. ತಾಲೂಕಿನ 700ಕ್ಕೂ ಅಧಿಕ ಭಕ್ತರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶ್ರೀಗಳವರಿಂದ ಮುದ್ರಾಧಾರಣೆ ಹಾಕಿಸಿಕೊಂಡರು. ಮದ್ದಡ್ಕ ಮಠದ ರಾಘವೇಂದ್ರ ಭಟ್, ಪರಾರಿ ವೆಂಕಟ್ರಮಣ ಹೆಬ್ಬಾರ್, ಮುರಳೀಕೃಷ್ಣ ಆಚಾರ್ ಸಹಕರಿಸಿದರು.

ಚಾತುರ್ಮಾಸ್ಯ ವ್ರತಾಚರಣೆ

ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪರಾಭವ ಸಂವತ್ಸರದ 30ನೇ ವರ್ಷದ ಚಾತುರ್ಮಾಸ್ಯ ವ್ರತ ಆ.4ರಂದು ಶ್ರೀ ಸುಬ್ರಹ್ಮಣ್ಯ ಮೂಲ ಮಠದಲ್ಲಿ ಪ್ರಾರಂಭಿಸಿ ಸೆ.24ರಂದು ಸಮಾಪನಗೊಳಿಸಲಿದ್ದಾರೆ. ಭಾಗವತ ಪ್ರವಚನ, ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net