ಮೀನುಗಾರಿಕಾ ಋತು ನಿರಾಶಾದಾಯಕ ಅಂತ್ಯ

 ಗಂಗೊಳ್ಳಿ ಮೀನುಗಾರಿಕಾ ಬಂದರು.
ಗಂಗೊಳ್ಳಿ ಮೀನುಗಾರಿಕಾ ಬಂದರು.
Published on
ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಜೂನ್ 1ರಿಂದ 61 ದಿನ ಯಾಂತ್ರೀಕೃತ ಮೀನುಗಾರಿಕೆಗೆ ನಿಷೇಧ ಇರುವುದರಿಂದ ಉಡುಪಿ ಜಿಲ್ಲೆಯ ಪ್ರಮುಖ ಬಂದರು ಪ್ರದೇಶವಾದ ಗಂಗೊಳ್ಳಿಯಲ್ಲಿ ಅನೇಕ ಸಮಸ್ಯೆಗಳ ನಡುವೆ ಪ್ರಸಕ್ತ ಸಾಲಿನ ಮೀನುಗಾರಿಕಾ ಋತು ನಿರಾಶಾದಾಯಕ ಅಂತ್ಯ ಕಾಣುವಂತಾಗಿದೆ.
ಪ್ರತಿ ಬಾರಿ ಆಗಸ್ಟ್‌ನಿಂದ ಆರಂಭವಾಗುವ ಮೀನುಗಾರಿಕೆ ಮೇ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಸರ್ಕಾರದ ಆದೇಶದ ಪ್ರಕಾರ ಜೂನ್ 1ರಿಂದ ಜುಲೈ 31ರವರೆಗೆ ಅಂದರೆ 61 ದಿನಗಳವರೆಗೆ ಮೀನುಗಾರಿಕೆಗೆ ನಿಷೇಧವಿರುತ್ತದೆ. ಪ್ರಸಕ್ತ ಮೀನುಗಾರಿಕಾ ಋತುವಿನಲ್ಲಿ ಮೀನುಗಾರರು ಅನೇಕ ಸಮಸ್ಯೆಗಳನ್ನು ಎದುರಿಸಿದ್ದು, ಹವಾವಾನ ವೈಪರೀತ್ಯ, ಮತ್ಸೃ ಕ್ಷಾಮ ಮೊದಲಾದ ಕಾರಣಗಳಿಂದ ಮೀನುಗಾರರು ನಿರಾಶೆಯಲ್ಲಿಯೇ ಮೀನುಗಾರಿಕಾ ಋತು ಅಂತ್ಯಗೊಳಿಸಿದ್ದಾರೆ.
ಗಂಗೊಳ್ಳಿ ಬಂದರಿನಲ್ಲಿ 70ಕ್ಕೂ ಅಧಿಕ ಆಳ ಸಮುದ್ರ ಮೀನುಗಾರಿಕಾ ಬೋಟುಗಳು, 40ಕ್ಕೂ ಮಿಕ್ಕಿ ಪರ್ಸಿನ್ ಬೋಟುಗಳು, 70ಕ್ಕೂ ಮಿಕ್ಕಿ ಫಿಶಿಂಗ್ ಬೋಟುಗಳು ಮತ್ತು 250ಕ್ಕೂ ಮಿಕ್ಕಿ ಮೀನುಗಾರಿಕಾ ದೋಣಿಗಳು ಮೀನುಗಾರಿಕೆ ನಡೆಸುತ್ತಿವೆ. ಆಳ ಸಮುದ್ರ ಮೀನುಗಾರಿಕೆ ಬೋಟು ಹೊರತುಪಡಿಸಿ ಈಗಾಗಲೇ ಶೇ.75ರಷ್ಟು ಬೋಟುಗಳು ಗಂಗೊಳ್ಳಿ ವ್ಯಾಂಗನೀಸ್ ರಸ್ತೆ ವಠಾರದಲ್ಲಿ ಹಾಗೂ ಇನ್ನಿತರ ಸುರಕ್ಷಿತ ತಾಣಗಳಲ್ಲಿ ಲಂಗರು ಹಾಕಿವೆ. ದಡ ಸೇರಿಸಿದ ಬೋಟುಗಳನ್ನು ಮಳೆಗಾಲದಲ್ಲಿ ಸಂರಕ್ಷಿಸಿಡುವ ಕಾರ್ಯ ಇದೀಗ ಭರದಿಂದ ಸಾಗುತ್ತಿದೆ. ಬೋಟಿನ ಮೀನುಗಾರಿಕಾ ಬಲೆ ಮುಂತಾದ ಬೆಲೆ ಬಾಳುವ ಸಾಮಗ್ರಿಗಳನ್ನು ಸುರಕ್ಷಿತ ತಾಣಕ್ಕೆ ಒಯ್ಯಲಾಗುತ್ತಿದೆ.

ಮತ್ಸ್ಯ ಕ್ಷಾಮದಿಂದ ಕಂಗಾಲು

ಕಳೆದ ಹಲವಾರು ವರ್ಷಗಳಿಂದ ಮೀನುಗಾರರನ್ನು ಕಂಗೆಡಿಸಿದ್ದ ಮತ್ಸೃ ಕ್ಷಾಮ ಈ ಬಾರಿಯೂ ಮೀನುಗಾರರನ್ನು ಕಾಡಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಕಾಡುತ್ತಿರುವ ಮತ್ಸೃ ಕ್ಷಾಮ ಮೀನುಗಾರರ ಬದುಕನ್ನು ಹಿಂಡಿದೆ. ಹೀಗಾಗಿ ಮತ್ಸೃ ಕ್ಷಾಮ ಮೀನುಗಾರರ ಆರ್ಥಿಕ ಗಳಿಕೆ ಮೇಲೆ ಪರಿಣಾಮ ಬೀರಿದೆ.

ದುರಸ್ತಿಯಾಗದ ಜೆಟ್ಟಿ

ಕುಸಿದು ಬಿದ್ದಿರುವ ಜೆಟ್ಟಿಯ ಪುನಃ ನಿರ್ವಾಣ 4 ವರ್ಷ ಕಳೆದರೂ ಇನ್ನೂ ಆರಂಭಗೊಂಡಿಲ್ಲ. ಹೀಗಾಗಿ ಬಂದರಿನ 200 ಮೀಟರ್ ಉದ್ದದ ಜೆಟ್ಟಿಯಲ್ಲಿ ಮೀನುಗಾರಿಕೆ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ ಹಾಗೂ ಬಂದರಿನಲ್ಲಿ ಬೋಟುಗಳು ಮತ್ತು ದೋಣಿಗಳು ತಂಗಲು ಸ್ಥಳಾವಕಾಶ ಕೊರತೆ ಕಾಣುತ್ತಿದೆ. ಅಳಿವೆ ಪ್ರದೇಶದಲ್ಲಿ ಹೂಳೆತ್ತುವ ಕಾರ್ಯ ಸಮಪರ್ಕವಾಗಿ ನಡೆಯದಿರುವುದರಿಂದ ಅಳಿವೆ ಮೀನುಗಾರರಿಗೆ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಬಹುನಿರೀಕ್ಷಿತ ಹೂಳೆತ್ತುವ ಕಾರ್ಯ ಸರಿಯಾಗಿ ನಡೆಯದಿರುವುದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಾರಿ ಆರಂಭದಲ್ಲಿ ಉತ್ತಮ ಮೀನುಗಾರಿಕೆ ನಡೆದಿದ್ದು, ಕೊನೆಯ ನಾಲ್ಕೈದು ತಿಂಗಳು ಮೀನುಗಾರಿಕೆ ಬಹುತೇಕ ಸ್ಥಗಿತಗೊಂಡಿದೆ. ಅಲ್ಲದೆ ಮೀನಿಗೆ ಸರಿಯಾದ ದರ ದೊರಕಿಲ್ಲ. ಹವಾವಾನ ವೈಪರೀತ್ಯ, ಮತ್ಸೃ ಕ್ಷಾಮ ಮೊದಲಾದ ಕಾರಣಗಳಿಂದ ಮೀನುಗಾರರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.

— ರಾಮಪ್ಪ ಖಾರ್ವಿ, ಮೀನುಗಾರ ಮುಖಂಡ, ಗಂಗೊಳ್ಳಿ

ಕಳೆದ ನಾಲ್ಕೈದು ತಿಂಗಳಿನಿಂದ ಸರಿಯಾಗಿ ಮೀನುಗಾರಿಕೆ ನಡೆಯದಿರುವುದರಿಂದ ಆರ್ಥಿಕ ಸಮಸ್ಯೆ ಎದುರಾಗಿದೆ. ಬೋಟುಗಳನ್ನು ಈಗಾಗಲೇ ದಡಕ್ಕೆ ಸೇರಿಸುವ ಕಾರ್ಯ ನಡೆಸಲಾಗುತ್ತಿದ್ದು, ಬೋಟ್ ಕೆಲಸ ಬಿಟ್ಟರೆ ಮಳೆಗಾಲದಲ್ಲಿ ಆರ್ಥಿಕ ಗಳಿಕೆಗೆ ಬೇರೆ ಉದ್ಯೋಗವಿಲ್ಲ.

— ರಾವೇಂದ್ರ ಖಾರ್ವಿ, ಸ್ಥಳೀಯ ಮೀನುಗಾರ, ಗಂಗೊಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net