ಶಿಥಿಲಗೊಂಡ ಪ್ರಯಾಣಿಕರ ತಂಗುದಾಣ

 ಶಿಥಿಲಾವಸ್ಥೆಯಲ್ಲಿರುವ ಮುತ್ತೂರು ಗ್ರಾಪಂ ವ್ಯಾಪ್ತಿಯ ಮುತ್ತೂರು ಅಂಬೇಡ್ಕರ್ ನಗರದಲ್ಲಿರುವ ಬಸ್ ತಂಗುದಾಣ.
ಶಿಥಿಲಾವಸ್ಥೆಯಲ್ಲಿರುವ ಮುತ್ತೂರು ಗ್ರಾಪಂ ವ್ಯಾಪ್ತಿಯ ಮುತ್ತೂರು ಅಂಬೇಡ್ಕರ್ ನಗರದಲ್ಲಿರುವ ಬಸ್ ತಂಗುದಾಣ.
Published on

ಧನಂಜಯ ಗುರುಪುರ

ಜನವಸತಿ, ಕರ್ನಾಟಕ ಪಬ್ಲಿಕ್ ಸ್ಕೂಲ್, ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಸತ್ಯ ಸಾರಮಾನಿ ಕ್ಷೇತ್ರ ಒಳಗೊಂಡಿರುವ ಮುತ್ತೂರು ಗ್ರಾಪಂ ವ್ಯಾಪ್ತಿಯ ಮುತ್ತೂರು ಅಂಬೇಡ್ಕರ್ ನಗರದಲ್ಲಿರುವ ಸಾರ್ವಜನಿಕರಿಗೆ ಅನುಕೂಲವಾಗುವ ಬಸ್ ತಂಗುದಾಣ ಸಂಪೂರ್ಣ ಹದಗೆಟ್ಟಿದ್ದು, ದುರಸ್ತಿಗಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹಳೆಯದಾದ ಹೆಂಚಿನ ಮಹಡಿಯ ಈ ಬಸ್-ಪ್ರಯಾಣಿಕರ ತಂಗುದಾಣ ಒಂದೆರಡು ವರ್ಷದಿಂದ ಸಂಪೂರ್ಣ ಶಿಥಿಲಗೊಂಡಿದೆ. ಮಳೆಗಾಲದಲ್ಲಿ ಇದರ ಸುತ್ತಲು ಗಿಡಗಂಟಿ ಬೆಳೆದು ತಂಗುದಾಣ ತೀವ್ರ ಸ್ವರೂಪದಲ್ಲಿ ಹದಗೆಟ್ಟಿದೆ. ನಿರ್ವಹಣೆ ಕೊರತೆಯಿಂದ ತಂಗುದಾಣ ಕುಸಿಯುವ ಹಂತ ತಲುಪಿದೆ.
ಹೆಂಚೆಲ್ಲ ಹಾರಿ ಹೋಗಿ, ಮಳೆ ನೀರೆಲ್ಲ ಸೋರುತ್ತಿರುವ ಈ ತಂಗುದಾಣದಲ್ಲಿ ನೀರು ತುಂಬುತ್ತದೆ. ಯಾವುದೇ ಸಂದರ್ಭದಲ್ಲಿ ಕುಸಿದು ಬೀಳುವ ಹಂತ ತಲುಪಿರುವ ಇದರೊಳಗೆ ಕುಳಿತುಕೊಳ್ಳಲು ಜನ ಭೀತಿಪಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಮುತ್ತೂರು ಗ್ರಾಪಂ ಇತ್ತೀಚೆಗೆ ‘ಈ ಬಸ್ ತಂಗುದಾಣ ಶಿಥಿಲಾವಸ್ಥೆಯಲ್ಲಿರುವುದರಿಂದ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ’ ಎಂಬ ಪ್ರಕಟಣೆಯ ಬ್ಯಾನರ್ ಅಳವಡಿಸಿದೆ.

ಮಂಗಳೂರಿನಿಂದ ಕುಪ್ಪೆಪದವು ಮೂಲಕ ಮೂಲರಪಟ್ಣವಾಗಿ ಬಿ.ಸಿ.ರೋಡ್‌ಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಮುತ್ತೂರು ಭಾಗದ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರ ಸಹಿತ ಸಾವಿರಾರು ಮಂದಿ ಇದೇ ತಂಗುದಾಣ ಅವಲಂಬಿಸಿಕೊಂಡಿದ್ದಾರೆ. ತಂಗುದಾಣವಿಲ್ಲದೆ ಮಳೆಗಾಲದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ವಯೋವೃದ್ಧರು ಪಡುವ ವೇದನೆ ಅಷ್ಟಿಟ್ಟಲ್ಲ. ಇಲ್ಲೊಂದು ಸುಸಜ್ಜಿತ ತಂಗುದಾಣದ ಅವಶ್ಯಕತೆ ಇದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ಮುತ್ತೂರು ಬಸ್ ತಂಗುದಾಣ ಶಿಥಿಲಗೊಂಡಿದೆ. ಪಂಚಾಯಿತಿ ಮೂಲಕ ಇದರ ಸೊತ್ತುಗಳ ಹರಾಜು ನಡೆದಿದೆ. ರಸ್ತೆ ಕಾಮಗಾರಿ ನಡೆಸುತ್ತಿರುವ ಕೆಎನ್‌ಆರ್ ಸಂಸ್ಥೆ ಇಲ್ಲೊಂದು ಸುಸಜ್ಜಿತ ಬಸ್ ತಂಗುದಾಣ ನಿರ್ಮಿಸಲು ಪಂಚಾಯಿತಿ ಖಾತೆಗೆ 1.5 ಲಕ್ಷ ರೂ. ಜಮೆ ಮಾಡಿದೆ. ಕೆಲವೇ ಸಮಯದಲ್ಲಿ ಪ್ರಸಕ್ತ ಜಾಗಕ್ಕಿಂತ ಸ್ವಲ್ಪ ದೂರದಲ್ಲಿ ಗ್ರಂಥಾಲಯ, ಇನ್ನಿತರ ಸವಲತ್ತುಗಳು ಒಳಗೊಂಡಿರುವ ಸುಸಜ್ಜಿತ ತಂಗುದಾಣ ನಿರ್ಮಾಣಗೊಳ್ಳಲಿದೆ.

— ಹರಿಯಪ್ಪ ಮುತ್ತೂರು ಕಾಂಗ್ರೆಸ್ ಮುಖಂಡ

ತಂಗುದಾಣ ನಿರ್ಮಿಸಲು ಕೆಎನ್‌ಆರ್ ಸಂಸ್ಥೆಯು ಪಂಚಾಯಿತಿಗೆ 1.5 ಲಕ್ಷ ರೂ. ನೀಡಿದೆ. ಈ ಮೊತ್ತದಲ್ಲಿ ಸುಸಜ್ಜಿತ ತಂಗುದಾಣ ನಿರ್ಮಾಣ ಕಷ್ಟ. ಹೆಚ್ಚುವರಿ ಮೊತ್ತಕ್ಕಾಗಿ ಪಂಚಾಯಿತಿಯಲ್ಲಿ ಅನುದಾನವಿಲ್ಲ. ಈ ನಿಟ್ಟಿನಲ್ಲಿ ಉಳಿದ 2 ಲಕ್ಷ ರೂ. ದಾನಿಗಳಿಂದ ಸಂಗ್ರಹಿಸುವ ಉದ್ದೇಶವಿಟ್ಟುಕೊಳ್ಳಲಾಗಿದೆ. ಹತ್ತಿರದಲ್ಲೇ ಜಾಗದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನೂತನ ಬಸ್ ತಂಗುದಾಣ ನಿರ್ಮಿಸಲು ಪಂಚಾಯಿತಿ ಉತ್ಸುಕವಾಗಿದೆ.

— ಸವಿತಾ ಮುತ್ತೂರು ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net