

ಹರಿಪ್ರಸಾದ್ ನಂದಳಿಕೆ ಕಾರ್ಕಳ
ಕಾರ್ಕಳ ತಾಲೂಕಿನಾದ್ಯಂತ ಮಂಗಗಳ ಹಾವಳಿ ವಿಪರೀತವಾಗಿದ್ದು, ರೈತರು ನೆಮ್ಮದಿಯ ಜೀವನ ನಡೆಸಲು ಪರದಾಡುವಂತಾಗಿದೆ. ಕಾಡಿನಿಂದ ನಾಡಿಗೆ ಲಗ್ಗೆಯಿಡುತ್ತಿರುವ ವಾನರ ಸೇನೆ ಮನೆಗಳ ಅಂಗಳದವರೆಗೆ ಬಂದು ಅಟ್ಟಹಾಸ ಮೆರೆಯುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಈ ಹಿಂದೆ ಕಾಡಂಚಿನ ಗ್ರಾಮಗಳಿಗೆ ಮಾತ್ರ ಸೀಮಿತವಾಗಿದ್ದ ಕೋತಿಗಳ ಹಾವಳಿ ಈಗ ಕಾರ್ಕಳ ತಾಲೂಕಿನ ಪ್ರಮುಖ ವಲಯಗಳ ಮನೆಗಳ ಅಂಗಳ ಹಾಗೂ ಛಾವಣಿಗಳ ಮೇಲೂ ವ್ಯಾಪಿಸಿದೆ. ಬಾಗಿಲು ತೆರೆದಿಟ್ಟರೆ ಸಾಕು, ಮನೆಗೆ ನುಗ್ಗಿ ಆಹಾರ ಧಾನ್ಯಗಳನ್ನು ದೋಚುವುದು, ಪಾತ್ರೆಪರಿಕರಗಳನ್ನು ಎಸೆದು ಹಾನಿ ಮಾಡುವುದು ನಿತ್ಯದ ಗೋಳಾಗಿದೆ. ಸಣ್ಣ ಮಕ್ಕಳು ಮತ್ತು ವೃದ್ಧರು ಮನೆಯಿಂದ ಹೊರಬರಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಮಾಳ, ಕೆರ್ವಾಶೆ, ಶಿರ್ಲಾಲು, ಅಜೆಕಾರು, ಬೋಳ, ಮುಂಡ್ಕೂರು, ನಂದಳಿಕೆ, ಬೆಳ್ಮಣ್, ಪಳ್ಳಿ, ಕಲ್ಯಾ, ನಿಟ್ಟೆ ಸೇರಿದಂತೆ ಅನೇಕ ಗ್ರಾಮೀಣ ಭಾಗದ ಜತೆಗೆ ಪ್ರಮುಖ ಪಟ್ಟಣ ಪ್ರದೇಶದಲ್ಲೂ ಮಂಗಗಳ ಉಪಟಳದಿಂದ ಜನ ಕಂಗಾಲಾಗಿದ್ದಾರೆ.
ತಾಲೂಕಿನ ಪ್ರಮುಖ ಬೆಳೆಯಾದ ತೆಂಗಿಗೆ ಮಂಗಗಳು ಭಾರಿ ಪ್ರಮಾಣದಲ್ಲಿ ಕುತ್ತು ತಂದಿವೆ. ಮರ ಹತ್ತುವ ಕೋತಿಗಳು ಕಾಯಿಗಳು ಬೆಳೆಯುವುದಕ್ಕೂ ಮುನ್ನವೇ ಕಿತ್ತು ಹಾಳು ಮಾಡುತ್ತಿರುವುದರಿಂದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ತೆಂಗಿನಕಾಯಿ, ಎಳನೀರು ಯಾವುದೂ ರೈತರಿಗೆ ಸಿಗದೆ ಬರೀ ತೆಂಗಿನ ಚಿಪ್ಪು ಮಾತ್ರ ದೊರೆಯುವ ಸ್ಥಿತಿಯಿದೆ. ತೆಂಗು ಮಾತ್ರವಲ್ಲದೆ ಅಡಿಕೆ ಗೊನೆಗಳು, ಬಾಳೆಹಣ್ಣುಗಳು ಹಾಗೂ ತರಕಾರಿ ಬೆಳೆಗಳನ್ನು ಮಂಗಗಳ ಗುಂಪುಗಳು ದಾಳಿ ನಡೆಸಿ ನಾಶಪಡಿಸುತ್ತಿವೆ.
ವರ್ಷವಿಡೀ ಕಷ್ಟಪಟ್ಟು ಬೆಳೆದ ಕೃಷಿ ಉತ್ಪನ್ನಗಳು ಕ್ಷಣಾರ್ಧದಲ್ಲಿ ನಾಶವಾಗುತ್ತಿರುವುದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಷ್ಟು ಬೊಬ್ಬೆ ಹೊಡೆದು ಓಡಿಸಿದರೂ ಮಂಗಗಳ ಹಿಂಡು ತೋಟದಿಂದ ಕದಲದೆ ಕೃಷಿಗೆ ಹಾನಿಯುಂಟು ಮಾಡುತ್ತಿದೆ. ಇದರಿಂದ ಕೃಷಿಯನ್ನೇ ನಂಬಿದ ಗ್ರಾಮೀಣ ಭಾಗದ ಅದೆಷ್ಟೋ ಕೃಷಿ ಕುಟುಂಬಗಳು ಕಣ್ಣೀರು ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ಮಂಗಗಳ ಹಾವಳಿಯನ್ನು ನಿಯಂತ್ರಿಸಲು, ಸೆರೆಹಿಡಿದು ಕಾಡಿಗೆ ಬಿಡಲು ಇಲಾಖೆ ಯಾವುದೇ ಶಾಶ್ವತ ಕ್ರಮ ಕೈಗೊಂಡಿಲ್ಲ. ತಾಲೂಕಿನ ಪ್ರತಿ ಗ್ರಾಮ ಪಂಚಾಯಿತಿಯ ಸಭೆಯಲ್ಲೂ ಕೃಷಿಕರು ಮಂಗಗಳ ಹಾಗೂ ಕಾಡುಪ್ರಾಣಿಗಳ ಹಾವಳಿಯ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಿಲ್ಲ. ಮಂಗಗಳ ಹಾವಳಿಯ ಬಗ್ಗೆ ಸೂಕ್ತ ಕ್ರಮವೂ ಇಲ್ಲದಂತಾಗಿದೆ ಎನ್ನುವುದು ಬಹುತೇಕ ಕೃಷಿಕರ ದೂರಾಗಿದೆ.
ಈಗ ಮಂಗಗಳು ಹೆದ್ದಾರಿಯ ತನಕ ಬರುತ್ತಿವೆ. ಮುಖ್ಯರಸ್ತೆಬದಿಯಲ್ಲಿರುವ ಮನೆಗಳಿಗೂ ಕೋತಿ ಕಾಟ ಶುರುವಾಗಿದೆ. ಮುಖ್ಯವಾಗಿ ತೆಂಗು, ಮಾವು, ಬಾಳೆ ಬೆಳೆದವರು ಕೋತಿಗಳ ಕಾಟದಿಂದ ಬೇಸತ್ತು ಈಗ ಕೃಷಿ ಮಾಡುವುದನ್ನೇ ಬಿಟ್ಟಿದ್ದಾರೆ. ಬಾಳೆಗಿಡ ಸೇರಿದಂತೆ ಯಾವುದೇ ಗಿಡ ನೆಟ್ಟರೂ ಅವುಗಳ ಚಿಗುರುಗಳನ್ನೇ ಮಂಗಗಳು ಕಿತ್ತು ತಿನ್ನುತ್ತವೆ. ಇದರಿಂದ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.
ಆನೆ, ಹಂದಿಗಳಂಥ ಕಾಡುಪ್ರಾಣಿಗಳಿಂದ ಕೃಷಿಗೆ ಹಾನಿಯಾದರೆ ಸರ್ಕಾರದಿಂದ ತುಸುವಾದರೂ ಪರಿಹಾರ ಸಿಗುತ್ತದೆ. ಆದರೆ ಮಂಗಗಳಿಂದ ಕೃಷಿಗೆ ಹಾನಿಯಾದರೆ ಪರಿಹಾರ ಕೊಡಲು ಅವಕಾಶವಿಲ್ಲ. ಹೀಗಾಗಿ ರೈತರು ಮಂಗಗಳ ಕಾಟವನ್ನು ಮೌನವಾಗಿ ಸಹಿಸಿಕೊಳ್ಳಬೇಕಷ್ಟೆ.