

ಉಡುಪಿ: ಯಕ್ಷಗಾನ ಕಲೆಯು ಕೇವಲ ಒಂದು ಪ್ರದರ್ಶನ ಕಲೆ ಮಾತ್ರವಲ್ಲದೆ ಜೀವಂತ ರಂಗಕಲೆ. ಇದು ನಿರಂತರ ಪರಿವರ್ತನೆಗೆ ಒಳಪಡುತ್ತಲೇ ತನ್ನತನವನ್ನು ಉಳಿಸಿಕೊಂಡು ಬಂದಿದೆ ಎಂದು ಹಿರಿಯ ಯಕ್ಷಗಾನ ವಿದ್ವಾಂಸ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಲಕ್ಷ್ಮೀ ನಾರಾಯಣ ಸಾಮಗ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗ ವತಿಯಿಂದ ಬುಧವಾರ ನಡೆದ ಸಾಧಕರೊಂದಿಗೆ ಸಂವಾದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಕ್ಷಗಾನವು ಕೇವಲ ಶಾಸ್ತ್ರೀಯ ಕಲೆ ಮಾತ್ರವಲ್ಲ, ಅದರಲ್ಲಿ ಜಾನಪದ ಶೈಲಿಯ ಸ್ವಾತಂತ್ರ್ಯವೂ ಇದೆ. ಇದು ಶಾಸ್ತ್ರೀಯ ಕಲೆಯ ಗಟ್ಟಿಯಾದ ಚೌಕಟ್ಟು ಮತ್ತು ನಿಯಮಗಳನ್ನು ಹೊಂದಿದ್ದರೂ, ಜಾನಪದ ಕಲೆಯ ಲವಲವಿಕೆ ಹಾಗೂ ಮುಕ್ತತೆಯನ್ನು ತನ್ನೊಡಲಲ್ಲಿ ಉಳಿಸಿಕೊಂಡಿದೆ. ಯಕ್ಷಗಾನದಲ್ಲಿ ಶಾಸ್ತ್ರೀಯತೆ ಮತ್ತು ಜಾನಪದದ ಅಪರೂಪದ ಸಮ್ಮಿಶ್ರಣವಿದೆ. ಇದು ಕೇವಲ ಒಂದು ಚೌಕಟ್ಟಿಗೆ ಬದ್ಧವಾಗಿರದೇ, ಕಲಾವಿದರ ಸ್ವಂತಿಕೆ ಮತ್ತು ಬುದ್ಧಿವಂತಿಕೆಗೆ ಅವಕಾಶವಿರುತ್ತದೆ. ಪ್ರತಿಯೊಬ್ಬ ಸಾಧಕನೂ ತನ್ನದೇ ಆದ ಶೈಲಿಯಲ್ಲಿ ರಂಗವನ್ನು ಆವರಿಸಿಕೊಳ್ಳುತ್ತಾನೆ ಎಂದರು.
ಸಿನಿಮಾಗಳು ಮತ್ತು ಯಕ್ಷಗಾನ
ಇಂದಿನ ದಿನಗಳಲ್ಲಿ ಸಿನಿಮಾದ ಹಾಡುಗಳನ್ನು ಯಕ್ಷಗಾನಕ್ಕೆ ಅಳವಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗಿದೆ. ಇದನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಕಲೆಯು ಕಾಲಕ್ಕೆ ತಕ್ಕಂತೆ ಬದಲಾಗುತ್ತ, ಹೊಸ ಪ್ರಯೋಗಗಳನ್ನು ಸ್ವೀಕರಿಸುತ್ತಲೇ ಬೆಳೆದು ಬಂದಿದೆ. ಆದರೂ ಯಕ್ಷಗಾನದ ಮೂಲ ಸ್ವರೂಪ ಮತ್ತು ಸಾಂಪ್ರದಾಯಿಕ ಮೌಲ್ಯಗಳಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕಲೆಯ ಮೂಲ ಬೇರುಗಳನ್ನು ಮರೆಯದೆ ಕಾಲಕ್ಕೆ ತಕ್ಕ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಇಂದಿನ ಯುವ ಪೀಳಿಗೆ ಹಾಗೂ ಹೊಸ ಪ್ರೇಕ್ಷಕರು ಯಕ್ಷಗಾನದ ಕಡೆಗೆ ಆಕರ್ಷಿತರಾಗುತ್ತಿರುವುದು ಕಲೆಯ ಭವಿಷ್ಯದ ದೃಷ್ಟಿಯಿಂದ ಸಕಾರಾತ್ಮಕ ಬೆಳವಣಿಗೆಯಾಗಿದೆ. ಹಿಂದಿನ ಕಾಲದಲ್ಲಿ ಯಕ್ಷಗಾನದಲ್ಲಿ ಪುರುಷರೇ ಸ್ತ್ರೀ ವೇಷಗಳನ್ನು ಧರಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೂಡ ಯಕ್ಷಗಾನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕಾಲ ಬದಲಾದಂತೆ ಪ್ರದರ್ಶನ ಶೈಲಿಯಲ್ಲಿ ವ್ಯತ್ಯಾಸಗಳಾಗಿದ್ದರೂ, ಕಲೆಯ ಮೂಲ ಸತ್ವ ಹಾಗೂ ಶಕ್ತಿ ಹಿರಿದಾಗಿದೆ ಎಂದರು.
ಯಕ್ಷಗಾನದಲ್ಲಿ ರ್ನಿದಿಷ್ಟ ಸಂಭಾಷಣೆಗಳನ್ನು ಬಾಯಪಾಠ ಮಾಡುವ ಪದ್ಧತಿಯಿಲ್ಲ. ಯಕ್ಷಗಾನದ ಮಾತುಗಳು ಪೂರ್ವನಿರ್ಧರಿತ ಅಥವಾ ಮುದ್ರಿತವಾಗಿರುವುದಿಲ್ಲ. ಆಯಾ ಸಂದರ್ಭಕ್ಕೆ ತಕ್ಕಂತೆ ಕಲಾವಿದರ ಸ್ವಂತಿಕೆ, ಬುದ್ಧಿವಂತಿಕೆ ಮತ್ತು ರಂಗಾನುಭವದಿಂದ ತಕ್ಷಣವೇ ಸೃಷ್ಟಿಯಾಗುವ ಸ್ವಯಂಪ್ರೇರಿತ ಸಂಭಾಷಣೆಗಳಾಗಿರುತ್ತವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೈಸೂರು ವಿಭಾಗದ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ ಉದ್ಘಾಟಿಸಿದರು. ಕುಂಜಿಬೆಟ್ಟು ಶಾರದಾ ವಸತಿ ಶಾಲೆಯ ಪ್ರಾಂಶುಪಾಲ ವಿದ್ಯಾವಂತ ಆಚಾರ್ಯ ಉಪಸ್ಥಿತರಿದ್ದರು. ಅಕ್ಷಯ್ ಹೆಗ್ಡೆ ಮೊಳಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು.