ಮಂಗಳೂರು ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ವಿಜಯ ಕುಮಾರ್ ಬಿ.ಪಿ., ಉಜಿರೆ ರುಡ್‌ಸೆಟ್ ಸಂಸ್ಥೆ ನಿರ್ದೇಶಕ ಅಜೇಯ ಮೊದಲಾದವರಿದ್ದರು.
ಬೆಳ್ತಂಗಡಿ: ಉದ್ಯಮ ಆರಂಭಿಸಲು ದೊಡ್ಡ ಬಂಡವಾಳಕ್ಕಿಂತ ದೊಡ್ಡ ಮನಸ್ಸು ಮತ್ತು ದೃಢ ಸಂಕಲ್ಪ ಮುಖ್ಯ. ಪರಿಶ್ರಮ, ಶಿಸ್ತಿನ ಜೀವನ ಹಾಗೂ ನವೀನ ಆಲೋಚನೆಗಳಿಂದ ಪ್ರತಿಯೊಬ್ಬರೂ ಯಶಸ್ವಿ ಉದ್ಯಮಿಗಳಾಗಬಹುದು. ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ಗ್ರಾಮೀಣ ಭಾಗದಲ್ಲೇ ಉದ್ಯೋಗ ಸೃಷ್ಟಿಸಿ ಸಮಾಜದ ಆರ್ಥಿಕ ಪ್ರಗತಿಗೆ ಕೈಜೋಡಿಸಬೇಕು ಎಂದು ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದರು.
ಉಜಿರೆಯ ಸಿದ್ಧವನದಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ಪ್ರಧಾನಮಂತ್ರಿ ಉದ್ಯೋಗ ಸೃಜನಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ 10 ದಿನಗಳ ಕಾಲ ನೀಡಲಾದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ರುಡ್‌ಸೆಟ್ ಕಾರ್ಯನಿರ್ವಾಹಕ ನಿರ್ದೇಶಕ ವಿಜಯ ಕುಮಾರ್ ಬಿ.ಪಿ. ಮಾತನಾಡಿ, ಉದ್ಯಮಶೀಲತೆ ಗ್ರಾಮೀಣ ಅಭಿವೃದ್ಧಿಗೆ ಬಲವಾದ ಅಸ್ತ್ರ. ತರಬೇತಿಯಲ್ಲಿ ಪಡೆದ ಜ್ಞಾನವನ್ನು ಕಾರ್ಯರೂಪಕ್ಕೆ ತಂದು ಆತ್ಮನಿರ್ಭರರಾಗಬೇಕು ಎಂದರು.
ಉಜಿರೆ ರುಡ್‌ಸೆಟ್ ನಿರ್ದೇಶಕ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ವಂದಿಸಿದರು. ಉಪನ್ಯಾಸಕ ಕೆ.ಕರುಣಾಕರ ಜೈನ್ ನಿರೂಪಿಸಿದರು. ಶಿಬಿರಾರ್ಥಿಗಳು ಅನುಭವ ಹಂಚಿಕೊಂಡರು.
10 ದಿನಗಳ ತರಬೇತಿಯಲ್ಲಿ ವ್ಯವಹಾರ ಯೋಜನೆ ತಯಾರಿ, ಬ್ಯಾಂಕ್ ಸಾಲ ಪ್ರಕ್ರಿಯೆ, ಮಾರುಕಟ್ಟೆ ವ್ಯವಸ್ಥೆ, ಲಾಭ-ನಷ್ಟ ಲೆಕ್ಕಾಚಾರ, ಸಂವಹನ ಕೌಶಲ, ನಾಯಕತ್ವ ಗುಣಗಳು ಹಾಗೂ ಡಿಜಿಟಲ್ ಉಪಯೋಗ ಕುರಿತು ಪ್ರಾಯೋಗಿಕ ಮತ್ತು ತಾತ್ವಿಕ ತರಬೇತಿ ನೀಡಲಾಯಿತು.