ಸಾಂಕ್ರಾಮಿಕ ರೋಗ ತಡೆಗೆ ಅರಿವು ಮೂಡಿಸಿ

ಉಡುಪಿಯ ಡಿಸಿ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ವರೂಪಾ ಟಿ.ಕೆ. ಸಭೆ ನಡೆಸಿದರು. ಮಹಾಂತೇಶ್​ ಹಂಗರಗಿ, ಡಾ. ಬಸವರಾಜ ಹುಬ್ಬಳ್ಳಿ, ಡಾ.ಪ್ರಶಾಂತ್​ ಭಟ್​, ಡಾ. ನಾಗರತ್ನಾ ಇತರರಿದ್ದರು.
ಉಡುಪಿಯ ಡಿಸಿ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸ್ವರೂಪಾ ಟಿ.ಕೆ. ಸಭೆ ನಡೆಸಿದರು. ಮಹಾಂತೇಶ್​ ಹಂಗರಗಿ, ಡಾ. ಬಸವರಾಜ ಹುಬ್ಬಳ್ಳಿ, ಡಾ.ಪ್ರಶಾಂತ್​ ಭಟ್​, ಡಾ. ನಾಗರತ್ನಾ ಇತರರಿದ್ದರು.
Published on

* ಉಡುಪಿ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚನೆ

* ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ

ಉಡುಪಿ: ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಮಳೆ ಆರಂಭಗೊಂಡಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳಿವೆ. ಹೀಗಾಗಿ ಜನಸಾಮಾನ್ಯರಿಗೆ ರೋಗಗಳ ಹರಡುವಿಕೆಯ ರೀತಿ, ಅವುಗಳ ನಿಯಂತ್ರಣದ ಕುರಿತಾಗಿ ಮುಂಜಾಗ್ರತೆ, ಆರೋಗ್ಯ ಶಿಕ್ಷಣ ಹಾಗೂ ಹೆಚ್ಚು ಅರಿವು ಮೂಡಿಸುವ ಕಾರ್ಯ ಮಾಡಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಸೂಚಿಸಿದರು.
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಜೂ.6) ಆಯೋಜಿಸಿದ್ದ ಡೆಂಘೆ, ಮಲೇರಿಯಾ ಅಂತರ್​ ಇಲಾಖಾ ಸಮನ್ವಯ ಸಮಿತಿಯ ಸಭೆಯಲ್ಲಿ ಮಾತನಾಡಿದರು.

ಪರಿಸರದಲ್ಲಿರಲಿ ಸ್ವಚ್ಛತೆ

ಮಳೆಯ ನೀರು ನಿಂತಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ವೃದ್ಧಿಗೊಂಡು ಮಲೇರಿಯಾ, ಡೆಂಘೆ, ಚಿಕೂನ್​ಗೂನ್ಯಾ, ಪೈಲೇರಿಯಾ ಸೇರಿದಂತೆ ಇನ್ನಿತರ ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಪಂ ಕಾರ್ಯಪ್ರವೃತ್ತರಾಗಬೇಕು. ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಜನರಿಗೆ ಎಲ್ಲೆಂದರಲ್ಲಿ ಕಸ ಎಸೆಯಲು ಆಸ್ಪದ ನೀಡಬಾರದು. ಹೋಟೆಲ್​ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಉಲ್ಲಂಘಿಸಿದ್ದಲ್ಲಿ ಸ್ಥಳೀಯ ಸಂಸ್ಥೆಗಳು ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು. ಪರಿಸರದ ಸ್ವಚ್ಛತೆ ಪ್ರತಿ ನಾಗರಿಕರ ಜವಾಬ್ದಾರಿ ಎಂದರು.
ಉಲ್ಲಂಘಿಸಿದರೆ ದಂಡ ವಿಧಿಸಿ
ತೋಟಗಾರಿಕಾ ಬೆಳೆಗಳಾದ ಅಡಿಕೆಯ ಹಾಳೆ, ಅನಾನಸ್​ನ ಎಲೆಗಳ ಸಂಧಿಗಳಲ್ಲಿ ಹಾಗೂ ರಬ್ಬರ್​ ಸಂಗ್ರಹದ ಟಬ್​ಗಳಲ್ಲಿಯೂ ಸಹ ಮಳೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಈ ಬಗ್ಗೆಯೂ ಸಹ ಎಚ್ಚರ ವಹಿಸುವಂತೆ ರೈತರಲ್ಲಿ ಅರಿವು ಮೂಡಿಸಬೇಕು. ಎಲ್ಲ ವಿದ್ಯಾರ್ಥಿನಿಲಯ, ಶಾಲಾ-ಕಾಲೇಜು, ಅಂಗನವಾಡಿ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು. ಕಲ್ಲು ಕ್ವಾರಿಗಳಲ್ಲಿ ಮಳೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ತಾತ್ಕಾಲಿಕ ಕ್ವಾರಿಗಳಲ್ಲಿ ಲಾರ್ವಾ ಉತ್ಪತ್ತಿಯಾಗದಂತೆ ದ್ರಾವಣ ಸಿಂಪಡಿಸಬೇಕು. ಎಲ್ಲ ಗ್ರಾಪಂಗಳಲ್ಲೂ ಸಹ ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿಗಳ ಸಭೆ ಕರೆದು ಸಾಂಕ್ರಾಮಿಕ ರೋಗಗಳ ತಡೆಗೆ ಕ್ರಮವಹಿಸಬೇಕು. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಬೇಕು ಎಂದರು.
ಸಭೆಯಲ್ಲಿ ಪೌರಾಯುಕ್ತ ಮಹಾಂತೇಶ್​ ಹಂಗರಗಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್​ ಭಟ್​, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನಾ ಇತರರು ಉಪಸ್ಥಿತರಿದ್ದರು.

ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಿ

ಉಡುಪಿ ಜಿಲ್ಲೆಗೆ ಉದ್ಯೋಗ ಅರಸಿ ಹೊರ ಜಿಲ್ಲೆ, ರಾಜ್ಯಗಳಿಂದ ಕಾರ್ಮಿಕರು ಆಗಮಿಸುತ್ತಾರೆ. ಅವರಿದಂಲೂ ಸಹ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಕಟ್ಟಡ ನಿರ್ಮಾಣ ಸಂಸ್ಥೆಗಳು ಹಾಗೂ ಕಾರ್ಮಿಕ ಗುತ್ತಿಗೆದಾರರ ಸಭೆ ಕರೆದು ಅವರಿಗೂ ಸಹ ರೋಗಗಳ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು. ಎಲ್ಲ ಕಾರ್ಮಿಕರ ಆರೋಗ್ಯ ತಪಾಸಣೆಗೂ ಆದ್ಯತೆ ನೀಡಬೇಕು. ಜಿಲ್ಲೆಯ ಬಂದರು ಪ್ರದೇಶಗಳಲ್ಲಿ ಸ್ವಚ್ಛತೆ ಇರಬೇಕು. ಮೀನುಗಾರಿಕೆ ನಿರ್ಭಂದ ಇರುವುದರಿಂದ ಬೋಟ್​ಗಳು ಲಂಗರು ಹಾಕಿರುತ್ತವೆ. ಅಲ್ಲಿನ ಟ್ಯಾಂಕ್​ಗಳು ಹಾಗೂ ಬದಿಯಲ್ಲಿ ಅಳವಡಿಸಿರುವ ಟೈಯರ್​ಗಳಲ್ಲಿ ಮಳೆಯ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿಯ ತಾಣವಾಗುತ್ತದೆ. ಹೀಗಾಗದಂತೆ ಎಚ್ಚರವಹಿಸಬೇಕು ಎಂದು ಮೀನುಗಾರಿಕೆ ಮತ್ತು ಬಂದರು ಇಲಾಖೆಯ ಅಧಿಕಾರಿಗಳಿಗೆ ಡಿಸಿ ಸ್ವರೂಪಾ ಸೂಚನೆ ನೀಡಿದರು.
"

ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳು ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳಬೇಕು. ಸ್ವಯಂ ಸೇವಕರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ತಂಡ ಮನೆ ಮನೆಗೆ ಭೇಟಿ ನೀಡಿ ಸೊಳ್ಳೆಗಳ ಸಂತಾನೋತ್ಪತ್ತಿ ತಾಣ ನಿಮೂರ್ಲನೆ ಮಾಡಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಅರಿವು ಮೂಡಿಸುವ ಕಾರ್ಯ ಮಾಡಬೇಕು.

— ಸ್ವರೂಪಾ ಟಿ.ಕೆ. ಜಿಲ್ಲಾಧಿಕಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net