ತುಳು ಕೇವಲ ಭಾಷೆಯಲ್ಲ, ತುಳುನಾಡಿನ ಅಸ್ಮಿತೆ ತುಳು. ತುಳು ಎಂದರೆ ಕೇವಲ ಸಂವಹನದ ಭಾಷೆಯಲ್ಲ. ಅದು ತುಳುನಾಡಿನ ಇತಿಹಾಸ, ಸಂಸತಿ, ಜನಪದ, ಸಾಹಿತ್ಯ, ಕಲೆ, ಆಚರಣೆ, ಭೂತಾರಾಧನೆ, ನಾಗಾರಾಧನೆ, ಯಕ್ಷಗಾನ, ಕಂಬಳ ಸೇರಿದಂತೆ ಹಲವು ಪರಂಪರೆಗಳ ಜೀವನಾಡಿಯಾಗಿದೆ. ಶತಮಾನಗಳ ಇತಿಹಾಸ ಹೊಂದಿರುವ ತುಳು ಭಾಷೆಯನ್ನು ಮಾತನಾಡುವ ಜನರು ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳು ಹಾಗೂ ವಿದೇಶಗಳಲ್ಲಿಯೂ ನೆಲೆಸಿದ್ದಾರೆ. ಇಂತಹ ಶ್ರೀಮಂತ ಭಾಷೆಗೆ ಆಡಳಿತಾತ್ಮಕವಾಗಿ ಸೂಕ್ತ ಸ್ಥಾನಮಾನ ದೊರೆಯದಿರುವುದು ತುಳುವರ ಪಾಲಿಗೆ ವಿಷಾದದ ಸಂಗತಿ. ಈ ಸಂಬಂಧ ಹಲವು ವರ್ಷ ಹೋರಾಟ ನಡೆಸಿದ್ದೇವೆ. ಈ ಬಾರಿ ಸರಕಾರ ಖಂಡಿತ ತಮ್ಮ ಬಹುಕಾಲದ ಬೇಡಿಕೆ ಈಡೇರಿಸುವ ಭರವಸೆ ಹೊಂದಿದ್ದೇವೆ. ಒಂದು ವೇಳೆ ಸರ್ಕಾರ ಮತ್ತೆ ನೆಪ ಹೇಳುತ್ತಾ ಕೂತರೆ ಮುಂದಿನ ದಿನಗಳಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ಹೋರಾಟ ನಡೆಸುತ್ತೇವೆ ಎಂದವರು ಎಚ್ಚರಿಸಿದ್ದಾರೆ.