ತೆಂಕ ಗ್ರಾಪಂ ಅವ್ಯವಹಾರ ತನಿಖೆಗೆ ಆಗ್ರಹ

ಗ್ರಾಪಂ ಅಧ್ಯಕ್ಷರ ನಿರ್ಲಕ್ಷ್ಯ
ಗ್ರಾಪಂ ಅಧ್ಯಕ್ಷರ ನಿರ್ಲಕ್ಷ್ಯ
Published on
ಪಡುಬಿದ್ರಿ: ಕಾಪು ತಾಲೂಕಿನ ತೆಂಕ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅವ್ಯವಹಾರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಪಂ ವಿರುದ್ಧ ಉಗ್ರ ಹೋರಾಟ ಸಂಘಟಿಸುವುದಾಗಿ ಗ್ರಾಪಂ ಸದಸ್ಯೆ ಜಯಶ್ರೀ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಗ್ರಾಪಂ ಕಚೇರಿಯಲ್ಲಿ ಪಿಡಿಒ ಸಹಿ ಫೋರ್ಜರಿ ಮಾಡಿ ಸ್ಥಿರಾಸ್ತಿಗಳ ನಿಯಮ ಬಾಹಿರ ಖರೀದಿ/ದೃಢಪತ್ರ ನೀಡಿರುವ ಬಗ್ಗೆ ಕಾರ್ಯದರ್ಶಿ ವಿರುದ್ಧ ಹಿಂದಿನ ಪಿಡಿಒ ಪೊಲೀಸ್ ಠಾಣೆಗೆ ದೂರು ನೀಡಿ ತಿಂಗಳು ಕಳೆದರೂ ತನಿಖೆ ಆಮೆಗತಿಯಲ್ಲಿ ನಡೆಯುತ್ತಿದೆ. ಈ ಪ್ರಕರಣದ ಕುರಿತಂತೆ ತುರ್ತು ಗ್ರಾಮಸಭೆ ಕರೆಯುವಂತೆ ಸದಸ್ಯರು ಹಾಗೂ ಗ್ರಾಮಸ್ಥರು ಮೌಖಿಕವಾಗಿ ಒತ್ತಾಯಿಸಿದರೂ ಗ್ರಾಪಂ ಅಧ್ಯಕ್ಷರು ಆಸಕ್ತಿ ತೋರದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಗ್ರಾಪಂ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಜಿಪಂ ಸಿಇಒ, ತಾಪಂ ಇಒ ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ಕ್ರಮ ಕೈಗೊಳ್ಳಲಾಗಿಲ್ಲ. ಸಹಿ ಫೋರ್ಜರಿ ಮಾತ್ರವಲ್ಲದೆ ಪಿಡಿಒ ಗಮನಕ್ಕೆ ಬಾರದೆ 15 ಕಡತಗಳು ಕಚೇರಿಯಿಂದ ಹೊರಗಡೆ ಹೋಗಿವೆ. ವಾಣಿಜ್ಯ ಕಟ್ಟಡಗಳ ಎಲ್ಲ ದಾಖಲೆಗಳ ಸಹಿತ ಕಡತಗಳ ಪರಿಶೀಲನೆಗೆ ಜಿಪಂ ಸಿಇಒ ಪ್ರತ್ಯೇಕ ತಂಡ ರಚಿಸಿ ಆದೇಶ ನೀಡಬೇಕು ಎಂದು ಜಯಶ್ರೀ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಪಂ ಮಾಜಿ ಸದಸ್ಯರಾದ ಕೇಶವ ಮೊಯ್ಲಿ, ಶಾರದ ಪೂಜಾರಿ, ಗ್ರಾಪಂ ಸದಸ್ಯರಾದ ಅಮಣಿ ಕುಂದರ್, ಸಂತೋಷ್, ರತ್ನಾಕರ ಕೋಟ್ಯಾನ್, ಮನೋಜ್ ಶೆಟ್ಟಿ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net