

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಕರ್ನಾಟಕದ ಜೀವವೈವಿಧ್ಯಕ್ಕೆ ರಾಜ್ಯೋತ್ಸವ ಸಂಭ್ರಮದಲ್ಲಿ ವಿಶೇಷ ಗೌರವ ಸಿಕ್ಕಿದೆ. ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡುಬರುವ ಅಪರೂಪದ ‘ಮಲೆನಾಡಿನ ಮರಗಂತಿ ಕಪ್ಪೆ’ಯನ್ನು ಸರ್ಕಾರ ಅ.27ರಂದು ರಾಜ್ಯದ ಅಧಿಕೃತ ಉಭಯಜೀವಿಯಾಗಿ ೋಷಿಸಿದೆ. ಈ ಮೂಲಕ ರಾಜ್ಯ ಉಭಯಜೀವಿಯನ್ನು ಗುರುತಿಸಿದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪಶ್ಚಿಮ ಟ್ಟದ ವಿಶಿಷ್ಟ ಜೀವವೈವಿಧ್ಯದ ಪ್ರತಿನಿಧಿಯಾಗಿರುವ ಈ ಅಪರೂಪದ ಉಭಯಜೀವಿ ಮರಗಳು, ಪೊದೆಗಳು ಹಾಗೂ ಸಸ್ಯವರ್ಗದ ನಡುವೆ ವಾಸಿಸುತ್ತದೆ. ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಮರಗಂತಿ ಕಪ್ಪೆ ನೆಲಕ್ಕಿಂತ ಹೆಚ್ಚಾಗಿ ಎಲೆಗಳು, ಕೊಂಬೆ, ಪೊದೆ ಹಾಗೂ ಬಳ್ಳಿಗಳ ಮೇಲೆ ವಾಸಿಸಲು ಇಷ್ಟಪಡುತ್ತದೆ. ಮರ, ಎಲೆಗಳ ಮೇಲೆ ಹಿಡಿತ ಸಾಧಿಸಲು ಕಾಲ್ಬೆರಳುಗಳ ತುದಿಯಲ್ಲಿ ವಿಶೇಷ ಅಂಟಿಕೊಳ್ಳುವ ಪ್ಯಾಡ್ಗಳಿರುತ್ತವೆ. ರಾತ್ರಿ ವೇಳೆ ಸಕ್ರಿಯವಾಗಿದ್ದು, ಸಣ್ಣ ಕೀಟ, ನೊಣ ಸೇರಿದಂತೆ ವಿವಿಧ ಕೀಟಗಳನ್ನು ಆಹಾರವಾಗಿ ಸೇವಿಸುತ್ತವೆ. ಇದರಿಂದ ನೈಸರ್ಗಿಕವಾಗಿ ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಲು ಸಹಕಾರಿಯಾಗಿವೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಇವುಗಳ ಸಂತಾನೋತ್ಪತ್ತಿ ಚುರುಕುಗೊಳ್ಳುತ್ತದೆ. ಗಂಡು ಕಪ್ಪೆಗಳು ವಿಶಿಷ್ಟ ಧ್ವನಿಯಲ್ಲಿ ಕೂಗುವ ಮೂಲಕ ಹೆಣ್ಣು ಕಪ್ಪೆಗಳನ್ನು ಆಕರ್ಷಿಸುತ್ತವೆ. ನೀರಿನ ಸಮೀಪದ ಸಸ್ಯವರ್ಗದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳಿಂದ ಹೊರಬರುವ ಮರಿಗಳು ನೀರಿನಲ್ಲಿ ಬೆಳೆದು ಕ್ರಮೇಣ ಕಪ್ಪೆಗಳಾಗಿ ರೂಪುಗೊಳ್ಳುತ್ತವೆ. ಕಪ್ಪೆಗಳನ್ನು ಪರಿಸರದ ಆರೋಗ್ಯವನ್ನು ಸೂಚಿಸುವ ಪ್ರಮುಖ ಜೈವಿಕ ಸೂಚಕಗಳೆಂದು ಪರಿಗಣಿಸಲಾಗುತ್ತದೆ. ಅವುಗಳ ಅಸ್ತಿತ್ವವು ಆವಾಸಸ್ಥಾನದ ಗುಣಮಟ್ಟ ತಿಳಿಯಲು ಸಹಕಾರಿ.
ಅರಣ್ಯನಾಶ, ಪರಿಸರ ಬದಲಾವಣೆ ಹಾಗೂ ನೈಸರ್ಗಿಕ ಆವಾಸಸ್ಥಾನಗಳ ನಾಶದಿಂದ ಅಪರೂಪದ ಜೀವಿಗಳ ಅಸ್ತಿತ್ವಕ್ಕೆ ಸವಾಲು ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮರಗಂತಿ ಕಪ್ಪೆಗೆ ರಾಜ್ಯದ ಅಧಿಕೃತ ಉಭಯಜೀವಿ ಸ್ಥಾನವಾನ ದೊರಕಿರುವುದು ಅದರ ಸಂರಕ್ಷಣೆ ಮತ್ತು ಸಂಶೋಧನೆಗೆ ಹೊಸ ಉತ್ತೇಜನ ನೀಡುವ ನಿರೀಕ್ಷೆಯಿದೆ.